ನವದೆಹಲಿ, ಏಪ್ರಿಲ್ 21: ಸರ್ಕಾರಗಳಿಂದ ನೀಡಲಾಗುವ ಉಚಿತ ಸ್ಕೀಮ್ಗಳ ಬಗ್ಗೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಸಹಮತ (consensus) ಮೂಡಿಸಲು ಸರ್ಕಾರ ಶ್ವೇತ ಪತ್ರ (white paper) ಹೊರಡಿಸಬೇಕು ಎಂದು ಮಾಜಿ ಆರ್ಬಿಐ ಗವರ್ನರ್ ಡಿ ಸುಬ್ಬಾರಾವ್ (D Subbarao) ಸಲಹೆ ನೀಡಿದ್ದಾರೆ. ಉಚಿತ ಯೋಜನೆಗಳನ್ನು ಜಾರಿಗೊಳಿಸದಂತೆ ರಾಜಕೀಯ ಪಕ್ಷಗಳಿಗೆ ಹೇಗೆ ಕಡಿವಾಣ ಹಾಕಬೇಕು ಎಂಬ ವಿಚಾರದಲ್ಲಿ ಅಮೂಲಾಗ್ರ ಚರ್ಚೆ ಆಗಬೇಕು. ಈ ಉಚಿತ ಯೋಜನೆಗಳಿಂದ ಸಿಗುವ ಪ್ರಯೋಜನವೆಷ್ಟು, ಅದಕ್ಕೆ ತಗಲುವ ವೆಚ್ಚ ಎಷ್ಟು ಈ ವಿಚಾರಗಳು ಸಾರ್ವಜನಿಕರಿಗೆ ಗೊತ್ತಿರಬೇಕು. ಜನರಿಗೆ ಅರಿವು ಮೂಡಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು 2008ರಿಂದ 2013ರವರೆಗೆ ಆರ್ಬಿಐ ಗವರ್ನರ್ ಆಗಿದ್ದ ಸುಬ್ಬಾರಾವ್ ಅಭಿಪ್ರಾಯಪಟ್ಟಿದ್ದಾರೆ.
‘ಇದು ಅಂತಿಮವಾಗಿ ರಾಜಕೀಯ ವಿಚಾರವಾಗಿರುವುದರಿಂದ ರಾಜಕೀಯವಾಗಿ ಸಹಮತ ಏರ್ಪಡಿಸಬೇಕು ಎಂಬುದು ನನ್ನ ಭಾವನೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿಗಳೇ ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಬೇಕು. ಉಚಿತ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಈ ಉಚಿತ ಯೋಜನೆಗಳಿಗೆ ಹೇಗೆ ಕಡಿವಾಣ ಹಾಕಬೇಕು ಎಂಬುದು ಚರ್ಚೆಯಾಗಬೇಕು,’ ಎಂದು ಪಿಟಿಐ ಸಂದರ್ಶನದಲ್ಲಿ ಸುಬ್ಬಾರಾವ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಈ ನಾಲ್ಕು ಅಂಶಗಳು ಮುಖ್ಯ: ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್ ಸಲಹೆ
ಭಾರತದಂತಹ ಬಡದೇಶದಲ್ಲಿ ಅತಿ ದುರ್ಬಲ ವರ್ಗದವರಿಗೆ ಸುರಕ್ಷಾ ಕವಚ ಏರ್ಪಡಿಸುವುದು ಸರ್ಕಾರದ ಜನವಾಬ್ದಾರಿ. ಹಾಗೆಯೇ, ಸೀಮಿತ ಹಣಕಾಸು ಬಲದ ದೃಷ್ಟಿಯಿಂದ ಈ ಕೊಡುಗೆಯನ್ನು ಎಷ್ಟು ದೂರ ಹಿಗ್ಗಿಸಬಹುದು ಎಂಬುದನ್ನು ಚರ್ಚಿಸಬೇಕಾಗುತ್ತದೆ ಎಂದಿದ್ದಾರೆ ಮಾಜಿ ಆರ್ಬಿಐ ಗವರ್ನರ್.
2047ರ ವೇಳೆ ಭಾರತವನ್ನು ಮುಂದುವರಿದ ದೇಶವನ್ನಾಗಿಸುವ ಸರ್ಕಾರದ ಸಂಕಲ್ಪದ ಬಗ್ಗೆ ಮಾತನಾಡಿದ ಆಂಧ್ರ ಮೂಲದ ಡಿ ಸುಬ್ಬಾರಾವ್, ಐಎಂಎಫ್ನ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಚುನಾವಣೆಯ ವರ್ಷವೂ ಭಾರತದ ಹಣಕಾಸು ಶಿಸ್ತು ಮೆಚ್ಚಿಕೊಂಡ ಐಎಂಎಫ್
ಭಾರತ 2047ರಷ್ಟರಲ್ಲಿ ಮುಂದುವರಿದ ದೇಶವಾಗಬೇಕಾದರೆ ಸತತವಾಗಿ ಶೇ. 7.6ರಷ್ಟು ಬೆಳವಣಿಗೆ ಸಾಧಿಸಬೇಕಾಗುತ್ತದೆ. ಮುಂದಿನ 25 ವರ್ಷ ಕಾಲ ಪ್ರತೀ ವರ್ಷ ಈ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ದೇಶಗಳು ಬಹಳ ಕಡಿಮೆ. ಚೀನಾ ಸಾಧಿಸಿದೆ. ಹವಾಮಾನ ಬದಲಾವಣೆ, ಜಿಯೋಪಾಲಿಟಿಕ್ಸ್, ಜಾಗತೀಕರಣದ ಸಂಕೀರ್ಣತೆ ಇತ್ಯಾದಿ ಸವಾಲುಗಳಿರುವ ಹಿನ್ನೆಲೆಯಲ್ಲಿ ಭಾರತ ಈ ಪರಿ ಬೆಳವಣಿಗೆ ಸಾಧಿಸಬಲ್ಲುದು ಎಂದು ಹೇಳಲು ಕಷ್ಟ,’ ಎಂದು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ