Facebook files: ಫೇಸ್​ಬುಕ್​ ವಿರುದ್ಧದ ಆರೋಪಕ್ಕೆ ‘ಅದೇ ಹಳೇ ಕಥೆ ಹೇಳಲಾಗುತ್ತಿದೆ’ ಎನ್ನುತ್ತಿದೆ ಕಂಪೆನಿ

| Updated By: Srinivas Mata

Updated on: Oct 19, 2021 | 11:47 PM

ಫೇಸ್​ಬುಕ್ ಫೈಲ್ಸ್ ಹೆಸರಿನಲ್ಲಿ ಪ್ರಕಟವಾಗುತ್ತಿರುವ ಸರಣಿ ಲೇಖನಕ್ಕೆ ಕಂಪೆನಿ ಪ್ರತಿಕ್ರಿಯೆ ನೀಡಿದೆ. ಇದನ್ನು ಮತ್ತದೇ ಹಳೇ ಆರೋಪ ಎಂದು ಪಕ್ಕಕ್ಕೆ ಸರಿಸಿರುವ ಫೇಸ್​ಬುಕ್ ಹೊಸದಾಗಿ ಹೇಳಿರುವುದೇನು ಎಂಬ ವಿವರ ಇಲ್ಲಿದೆ.

Facebook files: ಫೇಸ್​ಬುಕ್​ ವಿರುದ್ಧದ ಆರೋಪಕ್ಕೆ ಅದೇ ಹಳೇ ಕಥೆ ಹೇಳಲಾಗುತ್ತಿದೆ ಎನ್ನುತ್ತಿದೆ ಕಂಪೆನಿ
ಫೇಸ್​ಬುಕ್ ಸಿಇಒ ಮಾರ್ಕ್​ ಝಕರ್​ಬರ್ಗ್ (ಸಂಗ್ರಹ ಚಿತ್ರ)
Follow us on

ಬಳಕೆದಾರರ ಸುರಕ್ಷತೆಯನ್ನು ಬದಿಗಿರಿಸಿ, ತನ್ನ ಸ್ವಂತ ಬೆಳವಣಿಗೆಯನ್ನು ಮಾತ್ರ ಫೇಸ್​ಬುಕ್ ಗಮನದಲ್ಲಿಟ್ಟುಕೊಂಡಿದೆ ಎಂದು ವಾಲ್​ಸ್ಟ್ರೀಟ್​ ಜರ್ನಲ್​ನಲ್ಲಿ ಪ್ರಕಟವಾಗುತ್ತಿರುವ ಆರೋಪದ “ಫೇಸ್​ಬುಕ್​ ಫೈಲ್ಸ್​” ಬಗ್ಗೆ ಸೋಮವಾರದಂದು ಫೇಸ್​ಬುಕ್​ ಮತ್ತೆ ಸಮರ್ಥನೆ ನೀಡಿದೆ. ಮಾಧ್ಯಮಗಳಲ್ಲಿ ತಪ್ಪಾದ ಚಿತ್ರಣ ನೀಡಲಾಗುತ್ತಿದೆ ಎಂದಿರುವ ಫೇಸ್​ಬುಕ್, ಬಹಳ ಎಚ್ಚರಿಕೆಯಿಂದ ಸಿದ್ಧಪಡಿಸಿದ ಫೇಸ್​ಬುಕ್​ ನ್ಯೂಸ್​ರೂಮ್​ನ ಪೋಸ್ಟ್​ ಅನ್ನು ಟ್ವಿಟ್ಟರ್​ನಲ್ಲಿ ಹಾಕಿದೆ. ಮಾಧ್ಯಮ ಸಂಸ್ಥೆಗಳು ನಮ್ಮ ಕಾರ್ಯ ಮತ್ತು ಪ್ರೇರಣೆಗಳನ್ನು ತಪ್ಪಾಗಿ ಚಿತ್ರಿಸುತ್ತಿವೆ ಎಂದು ಕಂಪೆನಿ ಆರೋಪಿಸಿದೆ. “ಮಾಧ್ಯಮಗಳು ನಮ್ಮನ್ನು ಉತ್ತರದಾಯಿಗಳನ್ನಾಗಿ ಮಾಡುವುದನ್ನು ನಿರೀಕ್ಷೆ ಮಾಡುತ್ತವೆ. ಇಡೀ ವಿಶ್ವದಲ್ಲಿ ನಮ್ಮ ಸಾಮರ್ಥ್ಯ ಮತ್ತು ಜವಾಬ್ದಾರಿಯನ್ನು ಈಗಾಗಲೇ ತೋರಿಸಲಾಗಿದೆ,” ಎಂದು ಫೇಸ್​ಬುಕ್​ ಸಂವಹನದ ಉಪಾಧ್ಯಕ್ಷ ಜಾನ್ ಪಿನೆಟ್ಟೆ ಹೇಳಿದ್ದಾರೆ. ಆದರೆ ನಮ್ಮ ಕಾರ್ಯಗಳು ಮತ್ತು ಉದ್ದೇಶಗಳನ್ನು ತಪ್ಪಾಗಿ ವರದಿ ಮಾಡುತ್ತಿವೆ, ನಾವು ದಾಖಲೆಯನ್ನು ಸರಿ ಮಾಡುವುದಾಗಿ ನಂಬುತ್ತೇವೆ ಎಂದಿದ್ದಾರೆ.

ಸದ್ಯಕ್ಕೆ 30+ ಪತ್ರಕರ್ತರು ಸಾವಿರಾರು ಪುಟದ ಸೋರಿಕೆಯಾದ ದಾಖಲೆಗಳ ಆಧಾರದಲ್ಲಿ ಸರಣಿ ಲೇಖನಗಳನ್ನು ಮುಗಿಸುತ್ತಿದ್ದಾರೆ, ಎಂದು ಕಂಪೆನಿ ಸರಣಿ ಟ್ವೀಟ್​ನಲ್ಲಿ ಹೇಳಿದೆ. ನಾವು ಕೇಳಿಪಟ್ಟಿರುವಂತೆ, ಆ ದಾಖಲೆಗಳು ಮತ್ತು ಔಟ್​ಲೆಟ್​ಗಳಿಗಾಗಿ ಷರತ್ತುಗಳು ಮತ್ತು ವೇಳಾಪಟ್ಟಿಯನ್ನು ಅನುಸರಿಸಬೇಕಾಗುತ್ತದೆ. ಈ ಹಿಂದೆ ದಾಖಲಾತಿಗಳ ಸೋರಿಕೆಯಲ್ಲಿ ಕೆಲಸ ಮಾಡಿದ್ದ ಸಾರ್ವಜನಿಕ ಸಂಪರ್ಕಾಧಿಕಾರಿಗಳ ತಂಡವೇ ಇದನ್ನೂ ರೂಪಿಸಿದೆ ಎನ್ನಲಾಗಿದೆ. ಸಮರ್ಥನೆ ನೀಡುತ್ತಾ ಫೇಸ್​ಬುಕ್, ಹತ್ತಾರು ಲಕ್ಷ ದಾಖಲಾತಿಗಳಲ್ಲಿ ಕೆಲವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ನ್ಯಾಯಸಮ್ಮತವಾದ ಪರಿಸಮಾಪ್ತಿ ನೀಡುವ ಯಾವುದೇ ಉದ್ದೇಶ ಇದ್ದಂತೆ ಕಾಣುತ್ತಿಲ್ಲ ಎಂದಿದೆ. ಆಂತರಿಕವಾಗಿ ನಾವು ಮುಂದುವರಿಸುತ್ತಿರುವ ಕೆಲಸಗಳು ಮತ್ತು ಚರ್ಚೆಯ ಆಯ್ಕೆಗಳನ್ನು ಹಂಚಿಕೊಳ್ಳುತ್ತೇವೆ ಎಂದಿದೆ. ಪ್ರತಿ ನಿರ್ಧಾರವು ಸ್ಕ್ರೂಟಿನಿ ತನಕ ಬರಲ್ಲ. ಬಹಳ ಜನರ ಮೇಲೆ ಪರಿಣಾಮ ಬೀರುವ ನಿರ್ಧಾರಗಳಿಗೆ ಅನ್ವಯಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಹಲವು ಬಾರಿ ಫೇಸ್​ಬುಕ್​ ವಿರುದ್ಧ ಕೇಳಿಬಂದಿರುವ ಆರೋಪದ ಅಭಿಯಾನದ ಬಗ್ಗೆ ಪಿನೆಟ್ಟೆ ಮಾತನಾಡಿದ್ದಾರೆ. ಅದೇ ಹಳೇ ವಿಷಯವನ್ನೇ ಇಟ್ಟುಕೊಂಡು ಪದೇ ಪದೇ ಅಭಿಯಾನ ಮಾಡುತ್ತಿರುವ ಮಾಧ್ಯಮ ಸಂಸ್ಥೆಗಳಿಗೆ ನಾವು ವಿಷಯ ನೀಡುವುದಕ್ಕೆ ಸಿದ್ಧವಿದ್ದೇವೆ ಎಂದಿದ್ದಾರೆ. ಅಂದಹಾಗೆ ಫೇಸ್​ಬುಕ್​ ವಿಷಲ್ ಬ್ಲೋವರ್ ಫ್ರಾನ್ಸಸ್ ಹಾಗನ್ ಒದಗಿಸಿರುವ ವಿಷಯ ವಸ್ತುಗಳ ಸಹಾಯದಿಂದ ಅಮೆರಿಕದ ವಾಲ್​ ಸ್ಟ್ರೀಟ್​ ಜರ್ನಲ್ ಸರಣಿ ಲೇಖನಗಳನ್ನು ಫೇಸ್​ಬುಕ್ ವಿರುದ್ಧ ಪ್ರಕಟಿಸಲಾಗುತ್ತಿದೆ. ತಾನು ಫೇಸ್​ಬುಕ್ ಬಿಡುವ ಮುನ್ನ ಹಂಚಲಾದ ಆಂತರಿಕ ಸುತ್ತೋಲೆ, ದಾಖಲಾತಿಗಳ ಸರಣಿಯನ್ನು ವಾಲ್​ಸ್ಟ್ರೀಟ್​ ಜರ್ನಲ್ ಜತೆ ಹಂಚಿಕೊಂಡಿರುವುದಾಗಿ ಹಾಗನ್ ಹೇಳಿದ್ದಾರೆ. ಈ ಸರಣಿಗಳು ದ ಫೇಸ್​ಬುಕ್​ ಫೈಲ್ಸ್​ ಅಂತಲೇ ಕುಖ್ಯಾತಿ ಗಳಿಸಿದೆ.

ಈಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ಸರಣಿಯ ಮಾಹಿತಿಯಂತೆ, ಫೇಸ್​ಬುಕ್​ನ ಸ್ವಂತ ಎಂಜಿನಿಯರ್​ಗಳಿಗೇ ಅಲ್ಲಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ಎಂಬ ಅನುಮಾನ ಇದೆ. ದ್ವೇಷದ, ವಿಪರೀತ ಹಿಂಸೆಯ ಭಾಷಣಗಳನ್ನು ಸ್ವಚ್ಛಗೊಳಿಸುವಲ್ಲಿ ಪ್ಲಾಟ್​ಫಾರ್ಮ್​ ಪರಿಣಾಮಕಾರಿಯಾಗಿಲ್ಲ ಎಂಬ ಅನುಮಾನ ಅದು. ಫೇಸ್​ಬುಕ್​ನ ಕೃತಕ ಬುದ್ಧಿಮತ್ತೆಯು ನಿರಂತರವಾಗಿ ಮೊದಲ ವ್ಯಕ್ತಿಯು ಚಿತ್ರೀಕರಿಸುವ ವಿಡಿಯೋಗಳು, ಜನಾಂಗೀಯ ನಿಂದನೆಗಳು, ಆಂತರಿಕ ಕಾದಾಟದ ವಿಷಯಗಳನ್ನು ಸಹ ಗುರುತಿಸಲು ವಿಫಲವಾಗಿವೆ ಎಂದು ಇತ್ತೀಚಿನ ವರದಿ ತಿಳಿಸಿದೆ.

ಈಚಿನ ಸರಣಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಫೇಸ್​ಬುಕ್, ಕಳೆದ ಆರು ವಾರಗಳಿಂದ ದಾಖಲಾತಿಗಳನ್ನು ಹೇಗೆ ತಪ್ಪಾಗಿ ಪ್ರಸ್ತುತ ಪಡಿಸಲಾಗುತ್ತಿದೆ ಎಂದು ನೋಡಿದ್ದೇವೆ. ಖಂಡಿತವಾಗಿಯೂ ಫೇಸ್​ಬುಕ್​ನ ಪ್ರತಿ ಉದ್ಯೋಗಿಯೂ ಅಧಿಕಾರಿ ಅಲ್ಲ, ಎಲ್ಲ ಅಭಿಪ್ರಾಯಗಳು ಕಂಪೆನಿಯದು ಅಂತಲ್ಲ ಎಂದಿದೆ.

ಇದನ್ನೂ ಓದಿ: Facebook: ಫೇಸ್​ಬುಕ್ ನಿಯಂತ್ರಣಕ್ಕೆ ಸರ್ಕಾರವೇ ನಿಯಂತ್ರಣ ಮಂಡಳಿ ರಚಿಸಲಿ: ಫ್ರಾನ್ಸಿಸ್ ಹೌಗೆನ್ ಆಗ್ರಹ