Meta India Head: ಭಾರತದಲ್ಲಿ ಸಂಧ್ಯಾ ದೇವನಾಥನ್​ಗೆ ಮೆಟಾ ಚುಕ್ಕಾಣಿ; ಆದಾಯ ವೃದ್ಧಿಯತ್ತ ಚಿತ್ತ

| Updated By: ಗಣಪತಿ ಶರ್ಮ

Updated on: Nov 17, 2022 | 4:28 PM

ಅಜಿತ್ ಮೋಹನ್ ಅವರು ಮೆಟಾದ ಭಾರತ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಈ ತಿಂಗಳ ಆರಂಭದಲ್ಲಿ ರಾಜೀನಾಮೆ ನೀಡಿದ್ದರು. ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್, ವಾಟ್ಸ್​ಆ್ಯಪ್ ಇಂಡಿಯಾ ಮುಖ್ಯಸ್ಥ ಅಜಿತ್ ಬೋಸ್ ಕೂಡ ಈ ವಾರ ಆರಂಭದಲ್ಲಿ ರಾಜೀನಾಮೆ ನೀಡಿದ್ದಾರೆ.

Meta India Head: ಭಾರತದಲ್ಲಿ ಸಂಧ್ಯಾ ದೇವನಾಥನ್​ಗೆ ಮೆಟಾ ಚುಕ್ಕಾಣಿ; ಆದಾಯ ವೃದ್ಧಿಯತ್ತ ಚಿತ್ತ
ಸಂಧ್ಯಾ ದೇವನಾಥನ್
Image Credit source: PTI
Follow us on

ನವದೆಹಲಿ: ಸಂಧ್ಯಾ ದೇವನಾಥನ್ (Sandhya Devanathan) ಅವರನ್ನು ಭಾರತ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾರ್ಕ್ ಝುಕರ್​ಬರ್ಗ್ (Mark Zuckerberg) ಒಡೆತನದ ಮೆಟಾ (Meta Platforms) ತಿಳಿಸಿದೆ. ಅಜಿತ್ ಮೋಹನ್ ಅವರು ಮೆಟಾದ ಭಾರತ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಈ ತಿಂಗಳ ಆರಂಭದಲ್ಲಿ ರಾಜೀನಾಮೆ ನೀಡಿದ್ದರು. ಅವರು ಮೆಟಾದ ಪ್ರತಿಸ್ಪರ್ಧಿ ಕಂಪನಿ ಸ್ನ್ಯಾಪ್ ಇಂಕ್​ ಸೇರಿದ್ದರು. ಇದಾದ ಕೆಲವೇ ದಿನಗಳಲ್ಲಿ ನೂತನ ಮುಖ್ಯಸ್ಥರ ಘೋಷಣೆ ಮಾಡಲಾಗಿದೆ. ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್, ವಾಟ್ಸ್​ಆ್ಯಪ್ ಇಂಡಿಯಾ ಮುಖ್ಯಸ್ಥ ಅಜಿತ್ ಬೋಸ್ ಕೂಡ ಈ ವಾರ ಆರಂಭದಲ್ಲಿ ರಾಜೀನಾಮೆ ನೀಡಿದ್ದಾರೆ.

‘ಸಂಧ್ಯಾ ಅವರು ಉದ್ಯಮ ಕ್ಷೇತ್ರದಲ್ಲಿ ಉತ್ತಮ ಹಿನ್ನೆಲೆ ಹೊಂದಿದ್ದಾರೆ. ಅಸಾಧಾರಣ ಮತ್ತು ಅತ್ಯುತ್ತಮ ತಂಡಗಳನ್ನು ಕಟ್ಟಿದ ಛಾತಿ ಅವರದ್ದು. ಉತ್ಪನ್ನಗಳಲ್ಲಿ ಹೊಸತನ ತರುವುದು ಮತ್ತು ಉತ್ತಮ ಸಹಭಾಗಿತ್ವ ಹೊಂದುವುದು ಅವರಿಗೆ ಕರಗತವಾಗಿದೆ. ಅವರನ್ನು ಭಾರತದ ವಿಭಾಗದ ಮುಖ್ಯಸ್ಥರನ್ನಾಗಿ ಹೊಂದಲು ನಮಗೆ ಬಹಳ ಸಂತಸವಿದೆ’ ಎಂದು ಮೆಟಾ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Breaking News: ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಮತ್ತು ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀನಾಮೆ

ಕೇಂದ್ರ ಸರ್ಕಾರವು ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ನಿಯಂತ್ರಿಸುವ ಸಲುವಾಗಿ ಕಾನೂನನ್ನು ಬಿಗಿಗೊಳಿಸುತ್ತಿರುವ ಮತ್ತು ಫೇಸ್​ಬುಕ್ ಕೆಲವು ನಿಯಂತ್ರಣ ಕ್ರಮಗಳನ್ನು ಎದುರಿಸಬೇಕಾಗಿರುವ ಸಂದರ್ಭದಲ್ಲೇ ಸಂಧ್ಯಾ ದೇವನಾಥನ್ ಅವರನ್ನು ಭಾರತ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ ಮೆಟಾ. ಸುಳ್ಳು ಸುದ್ದಿಗಳ ಹರಡುವಿಕೆ ಮತ್ತು ದ್ವೇಷ ಭಾಷಣಗಳ ಪ್ರಸಾರವನ್ನು ತಡೆಯದಿರುವುದಕ್ಕೆ ಫೇಸ್​ಬುಕ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

2016ರಲ್ಲಿ ಮೆಟಾ ಸೇರಿದ್ದ ಸಂಧ್ಯಾ ದೇವನಾಥನ್

ಸಂಧ್ಯಾ ದೇವನಾಥನ್ 2016ರಲ್ಲಿ ಮೆಟಾ ಸೇರಿದ್ದರು. ಸಿಂಗಾಪುರ ಮತ್ತು ವಿಯೆಟ್ನಾಂನಲ್ಲಿ ಕಂಪನಿಯ ತಂಡಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೆಟಾದ ಇ-ಕಾಮರ್ಸ್ ತಾಣಗಳ ಕಾರ್ಯಾಚರಣೆಯನ್ನು ಜನಪ್ರಿಯಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. 2020ರಲ್ಲಿ ಇಂಡೋನೇಷ್ಯಾಗೆ ತೆರಳಿ ಅಲ್ಲಿ ಗೇಮಿಂಗ್​ಗೆ ಸಂಬಂಧಿಸಿದ ಜವಾಬ್ದಾರಿ ವಹಿಸಿಕೊಂಡಿದ್ದರು.

ಭಾರತದಲ್ಲಿ ಏನು ಜವಾಬ್ದಾರಿ?

‘ಸಂಧ್ಯಾ ದೇವನಾಥನ್ ಭಾರತದಲ್ಲಿ ಮೆಟಾ ನೇತೃತ್ವ ವಹಿಸಿಕೊಳ್ಳುತ್ತಿದ್ದು, ಕಂಪನಿಯ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ. ದೇಶದ ಪ್ರಮುಖ ಬ್ರ್ಯಾಂಡ್​ಗಳ, ಕ್ರಿಯೇಟರ್​ಗಳ, ಜಾಹೀರಾತುದಾರರ ಜತೆ ಸಹಭಾಗಿತ್ವ ವೃದ್ಧಿಸುವ ಮೂಲಕ ಮೆಟಾದ ಆದಾಯ ಹೆಚ್ಚಿಸುವತ್ತ ಗಮನಹರಿಸಲಿದ್ದಾರೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೆಟಾ ಮುಂದೆ ಆದಾಯ ವೃದ್ಧಿಸಬೇಕಾದ ಸವಾಲು ಇದೆ. ಇತ್ತೀಚೆಗಷ್ಟೇ ಮೆಟಾ ವಿಶ್ವದಾದ್ಯಂತ 11,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ