Fact Check: ರತನ್ ಟಾಟಾ ಅಂತ್ಯಕ್ರಿಯೆ ಎಂದು ವೈರಲ್ ಆಗುತ್ತಿರುವ ಫೋಟೋದ ನಿಜಾಂಶ ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 7:04 PM

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತ್ತಿರುವ ಅಂತ್ಯಕ್ರಿಯೆಯ ಫೋಟೋ ರತನ್ ಟಾಟಾ ಅವರದ್ದಲ್ಲ, ಇದು ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯ ಫೋಟೋ ಎಂದು ನಾವು ಖಚಿತವಾಗಿ ಹೇಳಿತ್ತೇವೆ.

Fact Check: ರತನ್ ಟಾಟಾ ಅಂತ್ಯಕ್ರಿಯೆ ಎಂದು ವೈರಲ್ ಆಗುತ್ತಿರುವ ಫೋಟೋದ ನಿಜಾಂಶ ಏನು?
Follow us on

ಕೈಗಾರಿಕೋದ್ಯಮಿ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ ಬುಧವಾರ ರಾತ್ರಿ ಕೊನೆಯುಸಿರೆಳೆದರು. ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ರತನ್ ಟಾಟಾ ಅವರ ಮರಣದ ನಂತರ, ಇದೀಗ ಅವರ ಅಂತ್ಯಕ್ರಿಯೆಯ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಬೆಂಕಿ ಉರಿಯುತ್ತಿರುವುದನ್ನು ಕಾಣಬಹುದು, ಅದರ ಬಳಿ ಅನೇಕ ಜನರು ದುಃಖದಲ್ಲಿ ನಿಂತುಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡಿದ್ದು, “ಇದು ಸೌಂದರ್ಯ, ಯೌವನ, ಹೆಮ್ಮೆ, ದ್ವೇಷ, ಧರ್ಮ, ಸಮಾಜ, ಸಂಪತ್ತು, ಕೀರ್ತಿ, ಪ್ರಗತಿ, ಜಗಳಗಳನ್ನು ಸುಡುತ್ತಿದೆ, ಈಗ ನೀವು ಯಾವುದರ ಬಗ್ಗೆ ಹೆಮ್ಮೆಪಡುತ್ತಾರೆ?” ಎಂದು ರತನ್ ಟಾಟಾ ಅವರ ನಿಧನಕ್ಕೆ ಸಂಬಂಧಿಸಿ ಅನೇಕ ಜನರು ಫೋಟೋವನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯಲ್ಲಿ ಪರಿಶೋದಿಸಿದ ಟಿವಿ9 ಕನ್ನಡ, ಇದು ರತನ್ ಟಾಟಾ ಅವರ ಫೋಟೋ ಅಲ್ಲ. ಬದಲಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯ ಫೋಟೋ ಎಂದು ತಿಳಿದುಬಂದಿದೆ. ಟಾಟಾ ಅವರ ಅಂತ್ಯಕ್ರಿಯೆಗಳು ವಿದ್ಯುತ್ ಚಿತಾಗಾರದಲ್ಲಿ ನಡೆಯಿತು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್​ನಲ್ಲಿ ಹಿಮ್ಮುಖವಾಗಿ ಹುಡುಕಿದಾಗ, ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ಎಂದು ಹೇಳುವ ಅನೇಕ ಸುದ್ದಿಗಳನ್ನು ಕಂಡುಕೊಂಡಿದ್ದೇವೆ. ವಾಜಪೇಯಿ ಅವರು 16 ಆಗಸ್ಟ್ 2018 ರಂದು ದೆಹಲಿಯ AIIMS ನಲ್ಲಿ ನಿಧನರಾದರು. ಮರುದಿನ ಅವರು ದೆಹಲಿಯ ರಾಷ್ಟ್ರೀಯ ಸ್ಮಾರಕದಲ್ಲಿ ಪಂಚತತ್ವದಲ್ಲಿ ವಿಲೀನಗೊಂಡರು. ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಅವರು ಅಂತ್ಯಕ್ರಿಯೆಯ ಚಿತಾಗಾರದ ಕಾರ್ಯ ನೆರವೇರಿಸಿದರು.

ANI ಸುದ್ದಿ ಮಾಧ್ಯಮ ಆಗಸ್ಟ್ 17, 2018 ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯ ವಿಡಿಯೋ ಹಂಚಿಕೊಂಡಿದೆ. ಸದ್ಯ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಕೆಳಗಿನ ವಿಡಿಯೋದ 1 ನಿಮಿಷ 30 ಸೆಕೆಂಡ್​ನಲ್ಲಿ ಕಾಣಬಹುದು.


ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತ್ತಿರುವ ಅಂತ್ಯಕ್ರಿಯೆಯ ಫೋಟೋ ರತನ್ ಟಾಟಾ ಅವರದ್ದಲ್ಲ, ಇದು ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯ ಫೋಟೋ ಎಂದು ನಾವು ಖಚಿತವಾಗಿ ಹೇಳಿತ್ತೇವೆ.

ರತನ್ ಟಾಟಾ ಅವರು ಅಕ್ಟೋಬರ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಮುಂಬೈನ ವರ್ಲಿ ಪ್ರದೇಶದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಿತು. ಟಾಟಾ ಅವರು ಪಾರ್ಸಿ ಧರ್ಮದಿಂದ ಬಂದವರು. ಪಾರ್ಸಿ ಸಮುದಾಯದ ಜನರನ್ನು ದಹನ ಮಾಡುವ ಸ್ಥಳವನ್ನು ಟವರ್ ಆಫ್ ಸೈಲೆನ್ಸ್ ಅಥವಾ ದಖ್ಮಾ ಎಂದು ಕರೆಯಲಾಗುತ್ತದೆ.

ಝೋರಾಸ್ಟ್ರಿಯನ್ ಪದ್ಧತಿಗಳ ಅಡಿಯಲ್ಲಿ, ಟವರ್ ಆಫ್ ಸೈಲೆನ್ಸ್‌ನಲ್ಲಿರುವ ದೇಹವನ್ನು ಆಕಾಶದ ಕೆಳಗೆ ದೇಹದ ಮಾಂಸವನ್ನು ತಿನ್ನುವ ಅನೇಕ ರಣಹದ್ದುಗಳಿರುವ ಸ್ಥಳದಲ್ಲಿ ಇರಿಸಲಾಗುತ್ತದೆ. ಆದರೆ ರಣಹದ್ದುಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಪಾರ್ಸಿ ಸಮುದಾಯದ ಜನರು ತಮ್ಮ ಅಂತಿಮ ಸಂಸ್ಕಾರ ಮಾಡುವ ವಿಧಾನವನ್ನು ಈಗ ಬದಲಾಯಿಸಿದ್ದಾರೆ. ವರದಿಯ ಪ್ರಕಾರ, ಈ ಕಾರಣಕ್ಕಾಗಿ ಟಾಟಾ ಅವರ ಅಂತ್ಯಕ್ರಿಯೆಯನ್ನು ಈ ಪ್ರಕ್ರಿಯೆಯ ಮೂಲಕ ನಡೆಸಲಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ