FDI Inflow: ವಿದೇಶ ನೇರ ಬಂಡವಾಳ ಹರಿವಿನಲ್ಲಿ ಕರ್ನಾಟಕ್ಕೆ 3ನೇ ಸ್ಥಾನ; ದೇಶಕ್ಕೆ ಬಂದ ಎಫ್ಡಿಐ 8172 ಕೋಟಿ ಯುಎಸ್ಡಿ
2020- 21ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ ಹರಿದು ಬಂದಿರುವ ವಿದೇಶ ನೇರ ಬಂಡವಾಳದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಮೊದಲನೆಯದರಲ್ಲಿ ಇರುವುದು ಗುಜರಾತ್. FY21ರ FDI ಬಗ್ಗೆ ಇಲ್ಲಿದೆ ಮಾಹಿತಿ.

2020- 21ನೇ ಸಾಲಿನಲ್ಲೂ ಸೇರಿ ಸತತ ನಾಲ್ಕನೇ ವರ್ಷ ಅತಿ ಹೆಚ್ಚು ವಿದೇಶ ನೇರ ಬಂಡವಾಳ (ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್- ಎಫ್ಡಿಐ) ಹರಿದುಬಂದ ಟಾಪ್ ರಾಜ್ಯವಾಗಿ ಗುಜರಾತ್ ಸಾಧನೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಕರ್ನಾಟಕವು ಈ ಪಟ್ಟಿಯಲ್ಲಿ ದೇಶಕ್ಕೇ ಮೂರನೆ ಸ್ಥಾನದಲ್ಲಿದೆ. ಇಡೀ ದೇಶಕ್ಕೆ ಹರಿದುಬಂದಿರುವ ಶೇ 100ರಷ್ಟು ವಿದೇಶ ನೇರ ಬಂಡವಾಳದಲ್ಲಿ ಕರ್ನಾಟಕಕ್ಕೆ ಶೇ 13ರಷ್ಟು ಬಂದಿದೆ. 2020- 21ರಲ್ಲಿ ಭಾರತಕ್ಕೆ ಬಂದಿರುವ ಒಟ್ಟು ವಿದೇಶ ನೇರ ಬಂಡವಾಳ ಪೈಕಿ ಶೇಕಡಾ 37ರಷ್ಟು ಗುಜರಾತ್ಗೆ, ಅಂದರೆ 3230 ಕೋಟಿ ಅಮೆರಿಕನ್ ಡಾಲರ್ ವಿದೇಶ ನೇರ ಬಂಡವಾಳ ಬಂದಿದೆ.
2020-21ನೇ ಸಾಲಿನಲ್ಲಿ ಭಾರತಕ್ಕೆ ಬಂದಿರುವ ಎಫ್ಡಿಐ 8172 ಕೋಟಿ ಅಮೆರಿಕನ್ ಡಾಲರ್. ಅದರ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 10ರಷ್ಟು ಏರಿಕೆ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಂದಹಾಗೆ ಎಫ್ಡಿಐ ಲೆಕ್ಕಾಚಾರದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ಶೇ 27ರಷ್ಟು ವಿದೇಶ ಬಂಡವಾಳ ಆ ರಾಜ್ಯಕ್ಕೆ ಬಂದಿದೆ. ಇನ್ನೊಂದು ಸಂಗತಿ ಏನೆಂದರೆ, ಗುಜರಾತ್ಗೆ ಬಂದಿರುವ ಒಟ್ಟು ಬಂಡವಾಳದಲ್ಲಿ ಶೇ 94ರಷ್ಟು ಹೂಡಿಕೆ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವಲಯಕ್ಕೆ ಬಂದಿದೆ. ಅಂದಹಾಗೆ, ದೇಶದಲ್ಲಿ ಒಟ್ಟಾರೆಯಾಗಿ ಈ ವಲಯಕ್ಕೆ ಬಂದಿರುವ ಹೂಡಿಕೆ ಪೈಕಿ ಗುಜರಾತ್ಗೆ ಶೇ 78ರಷ್ಟು ಇದೆ.
ಇನ್ನು ಕರ್ನಾಟಕವು ಶೇ 13ರಷ್ಟು ವಿದೇಶ ಬಂಡವಾಳವನ್ನು ಆಕರ್ಷಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೊರೊನಾ ಸಂದರ್ಭದಲ್ಲಿಯೂ ಹಿಂದಿನ ಹಣಕಾಸು ವರ್ಷಕ್ಕಿಂತ ಈ ಬಾರಿ ದೇಶದೊಳಗೆ ಶೇ 10ರಷ್ಟು ಹೆಚ್ಚು ಎಫ್ಡಿಐ ಬಂದಿದೆ. ಜತೆಗೆ ನಾನಾ ರಾಜ್ಯಗಳು ಬಂಡವಾಳವನ್ನು ಸೆಳೆಯುವ ಉದ್ದೇಶಕ್ಕೆ ಪ್ರಯತ್ನಗಳು ಮಾಡಿದ್ದವು. ಅದರ ಫಲಿತಾಂಶಗಳು ಎಫ್ಡಿಐ ಹರಿವಿನ ರೂಪದಲ್ಲಿ ಕಂಡುಬಂದಿದೆ. ಹೂಡಿಕೆ ಮಾಡಿದ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ಸಿಂಗಾಪೂರ್. ಹೂಡಿಕೆ ಪಾಲು ಶೇ 29ರಷ್ಟು. ಆ ನಂತರದ ಸ್ಥಾನ ಅಮೆರಿಕ, ಶೇ 23ರಷ್ಟು ಮತ್ತು ಮಾರಿಷಿಯಸ್ ಶೇ 9ರಷ್ಟು ಪಾಲು ಹೊಂದಿದೆ.
ಇದನ್ನೂ ಓದಿ: ವಿಮೆ ವಲಯದಲ್ಲಿ ಶೇ 74ರ ತನಕ ಎಫ್ಡಿಐ ಹೂಡಿಕೆಗೆ ಅವಕಾಶ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ
(Foreign Direct Investment (FDI) in to India for FY21 amounted to 81.72 billion USD. Here is the state wise details)



