ಬ್ಯಾಂಕುಗಳಲ್ಲಿ ಸಾಲದರ ಹೆಚ್ಚಾಯಿತು; ಇನ್ನೂ ಬಹಳಷ್ಟು ಕಡಿಮೆ ಆಗಬೇಕು: ನಿರ್ಮಲಾ ಸೀತಾರಾಮನ್

|

Updated on: Nov 19, 2024 | 11:32 AM

Nirmala Sitharaman wants banks to cut interest rates: ದೇಶದ ಬೆಳವಣಿಗೆಯ ದೃಷ್ಟಿಯಿಂದ ಕೈಗಾರಿಕೆಗಳು ಚುರುಕುಗೊಳ್ಳಬೇಕು. ಬ್ಯಾಂಕುಗಳು ಕಡಿಮೆ ಬಡ್ಡಿಗೆ ಸಾಲ ನೀಡಿದರೆ ಕೈಗಾರಿಕೆಗಳಿಗೆ ಅನುಕೂಲವಾಗುತ್ತದೆ. ದೇಶದ ಅನುಕೂಲದ ದೃಷ್ಟಿಯಿಂದ ಬ್ಯಾಂಕುಗಳು ಬಡ್ಡಿ ಇಳಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬ್ಯಾಂಕುಗಳಲ್ಲಿ ಸಾಲದರ ಹೆಚ್ಚಾಯಿತು; ಇನ್ನೂ ಬಹಳಷ್ಟು ಕಡಿಮೆ ಆಗಬೇಕು: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ನವೆಂಬರ್ 19: ಬ್ಯಾಂಕುಗಳಲ್ಲಿ ಸದ್ಯ ಸಾಲಕ್ಕೆ ವಿಧಿಸಲಾಗುತ್ತಿರುವ ಬಡ್ಡಿದರ ಬಹಳ ಹೆಚ್ಚಾಗಿದೆ. ಅದು ಇನ್ನೂ ಕಡಿಮೆ ಆಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ವಿಕಸಿತ ಭಾರತದ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಲು ಪ್ರಯತ್ನಿಸಿದರು.

ವಿಕಸಿತ ದೇಶ ನಿರ್ಮಾಣವಾಗಬೇಕಾದರೆ ಕೈಗಾರಿಕೆಗಳು ಹೊಸ ಘಟಕಗಳಿಗೆ ವಿಸ್ತರಣೆ ಆಗಬೇಕು. ಅದಾಗಬೇಕಾದರೆ ಕಡಿಮೆ ದರದಲ್ಲಿ ಬ್ಯಾಂಕ್ ಸಾಲಗಳು ಸಿಗಬೇಕು. ಈಗಿರುವ ಸಾಲ ದರಗಳು ಬಹಳ ಹೆಚ್ಚಾಯಿತು ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೈಗಾರಿಕೆಗಳು ಹೊಸ ಹೂಡಿಕೆ ಮಾಡಲಿ ಎಂದು ಬಯಸುತ್ತಿದ್ದೇವೆ. ಆದರೆ, ಬಡ್ಡಿದರ ಕೂಡ ಕಡಿಮೆ ಆಗುವುದು ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ನೇರ ತೆರಿಗೆ ಸಂಗ್ರಹ; 22 ಲಕ್ಷ ಕೋಟಿ ರೂ ಗುರಿ ಮುಟ್ಟುವ ನಿರೀಕ್ಷೆಯಲ್ಲಿ ಸರ್ಕಾರ

ಕಳೆದ ವಾರ ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಕೂಡ ಬಡ್ಡಿದರ ವಿಚಾರದ ಬಗ್ಗೆ ಮಾತನಾಡಿದ್ದು ಗಮನಾರ್ಹ. ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ಆರ್​ಬಿಐ ಬಡ್ಡಿದರ ಇಳಿಸುವುದು ಅಗತ್ಯ ಇದೆ ಎಂದು ಸಲಹೆ ನೀಡಿದ್ದರು.

ಬ್ಯಾಂಕುಗಳ ಸಾಲ ದರವಾಗಲೀ, ಠೇವಣಿ ದರವಾಗಲೀ ಹೆಚ್ಚೂಕಡಿಮೆ ಆರ್​ಬಿಐನ ರಿಪೋ ಮತ್ತು ರಿವರ್ಸ್ ರಿಪೋ ದರಗಳ ಮೇಲೆ ಅವಲಂಬಿತವಾಗಿರುತ್ತವೆ. ರಿಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿಯಾಗಿದೆ. ಸದ್ಯ ರಿಪೋ ದರ ಶೇ. 6.5ರ ಮಟ್ಟದಲ್ಲಿ ಹಲವು ತಿಂಗಳಿಂದಲೂ ಇದೆ.

ಇದನ್ನೂ ಓದಿ: ಉಂಡೂ ಹೋದ ಕೊಂಡೂ ಹೋದ ಅಲ್ಲ ಪಿಎಲ್​ಐ ಸ್ಕೀಮ್; 19 ಪಟ್ಟು ಹೆಚ್ಚು ಆದಾಯ ತಂದುಕೊಟ್ಟಿದೆ ಸ್ಮಾರ್ಟ್​ಫೋನ್ ಉದ್ಯಮ

ಬ್ಯಾಂಕುಗಳು ಈ ದರವನ್ನು ಮಾನದಂಡವಾಗಿ ಇಟ್ಟುಕೊಳ್ಳಬಹುದು. ಆದರೆ, ಇದೇನೂ ಕಡ್ಡಾಯವಲ್ಲ. ಅಗತ್ಯಕ್ಕೆ ತಕ್ಕಂತೆ ದರಗಳ ಏರಿಳಿಕೆ ಮಾಡಲು ಬ್ಯಾಂಕುಗಳು ಸ್ವತಂತ್ರವಾಗಿರುತ್ತವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ರ ಫೆಬ್ರುವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಅವರು ಈಗಾಗಲೇ ಪೂರಕ ತಯಾರಿಯಲ್ಲಿ ನಿರತರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ