ನವದೆಹಲಿ, ನವೆಂಬರ್ 19: ಟೆಲಿಕಾಂ ರೇಸ್ನಲ್ಲಿ ರಿಲಾಯನ್ಸ್ ಜಿಯೊ ಮತ್ತು ಏರ್ಟೆಲ್ ಜೊತೆ ಸ್ಪರ್ಧಿಸಲು ಹೆಣಗುತ್ತಿರುವ ವೊಡಾಫೋನ್ ಐಡಿಯಾ ಈಗ ಮತ್ತಷ್ಟು ಅಸಹಾಯಕವಾಗಿ ನಿಂತಿದೆ. ಎಜಿಆರ್ ಬಾಕಿ ಹಣವನ್ನು ಪರಿಷ್ಕರಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ವಿಐಗೆ ನುಂಗಲಾಗದ ತುತ್ತಾಗಿದೆ. ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು 5ಜಿ ನೆಟ್ವರ್ಕ್ ಅಳವಡಿಕೆಯಲ್ಲಿ ವೇಗವಾಗಿ ಓಡುತ್ತಿವೆ. ಆದರೆ, ವೊಡಾಫೋನ್ ಐಡಿಯಾ ಫಂಡಿಂಗ್ ಇಲ್ಲದೇ ಒದ್ದಾಡುತ್ತಿದೆ. 4ಜಿ ಮತ್ತು 5ಜಿ ನೆಟ್ವರ್ಕ್ ಅಳವಡಿಸಲು ವಿಐಗೆ ಮುಂದಿನ ಮೂರು ವರ್ಷಕ್ಕೆ 50,000-55,000 ಕೋಟಿ ರೂ ಹೂಡಿಕೆಯ ಅಗತ್ಯ ಇದೆ. ಈ ಹಣ ಹುಟ್ಟಿಸಬೇಕೆಂದರೆ ಸರ್ಕಾರಕ್ಕೆ ಎಜಿಆರ್ ಬಾಕಿಗಳನ್ನು ಅದು ತೀರಿಸುವುದು ಅಗತ್ಯ ಇದೆ. ಇದು ಈಗ ವೊಡಾಫೋನ್ ಐಡಿಯಾ ಸಂಸ್ಥೆಯ ಹತಾಶೆಗೆ ಕಾರಣವಾಗಿದೆ.
ಇದೇ ವೇಳೆ, ಸರ್ಕಾರವು ವೊಡಾಫೋನ್ ನೆರವಿಗೆ ಧಾವಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ವೊಡಾಫೋನ್ ಸದ್ಯಕ್ಕೆ ನೀಡಬೇಕಿರುವ ಎಜಿಆರ್ ಬಾಕಿ ಹಣವನ್ನು ಸರ್ಕಾರ ಮನ್ನಾ ಮಾಡಬಹುದು. ಅದಕ್ಕೆ ಬದಲಾಗಿ ವೊಡಾಫೋನ್ ಐಡಿಯಾದ ನಿರ್ದಿಷ್ಟ ಈಕ್ವಿಟಿಗಳನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ. ಸದ್ಯ ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಸರ್ಕಾರವೇ ಅತಿಹೆಚ್ಚು ಷೇರುಪಾಲು ಹೊಂದಿದೆ. ಶೇ. 23.15ರಷ್ಟು ಪಾಲು ಸರ್ಕಾರದ್ದಿದೆ. ವೊಡಾಫೋನ್ ಗ್ರೂಪ್ ಶೇ. 22.56 ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಗ್ರೂಪ್ ಶೇ. 14.76ರಷ್ಟು ಪಾಲು ಹೊಂದಿವೆ. ಈಗ ಸಾಲ ಬಾಕಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದರೆ ಸರ್ಕಾರದ ಪಾಲು ಇನ್ನಷ್ಟು ಏರುತ್ತದೆ.
ವೊಡಾಫೋನ್ ಐಡಿಯಾ ಸಂಸ್ಥೆ ಉಳಿಸಿಕೊಂಡಿರುವ ಎಜಿಆರ್ ಬಾಕಿ ಹಣ ಬರೋಬ್ಬರಿ 70,320 ಕೋಟಿ ರೂ. ಮುಂದಿನ ಮೂರು ವರ್ಷದಲ್ಲಿ ಅದು ಆ ಹಣ ಪಾವತಿಸಬೇಕು. 2026ರ ಮಾರ್ಚ್ನೊಳಗೆ 29,000 ಕೋಟಿ ರೂ, ಹಾಗು 2027ರ ಮಾರ್ಚ್ನೊಳಗೆ 43,000 ಕೋಟಿ ರೂ ಹಣವನ್ನು ಅದು ಸರ್ಕಾರಕ್ಕೆ ನೀಡಬೇಕು. ಎಜಿಆರ್ ಲೆಕ್ಕಾಚಾರವು ತಮಗೆ ಅನ್ಯಾಯ ತಂದಿದೆ. ಅದನ್ನು ಪರಿಷ್ಕರಿಸಿ ಎಂದು ಟೆಲಿಕಾಂ ಕಂಪನಿಗಳು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದ್ದು ಈಗ ವಿಐಗೆ ಸಂಕಷ್ಟ ಹೆಚ್ಚಿಸಿದೆ.
ಕೋರ್ಟ್ ತೀರ್ಪಿಗೆ ಮುನ್ನ ವಿಐಗೆ ಸಾಲ ಕೊಡಲು ಬ್ಯಾಂಕುಗಳು ಮುಂದಾಗಿದ್ದವು. ಆದರೆ, ಈಗ ಸಾಲ ನೀಡಲು ಆಗದು ಎಂದು ಬ್ಯಾಂಕುಗಳೂ ಕೈಚೆಲ್ಲಿವೆ. ಸರ್ಕಾರವೇನಾದರೂ ಎಜಿಆರ್ ಬಾಕಿ ಹಣವನ್ನು ಈಕ್ವಿಟಿಗಳಾಗಿ ಪರಿವರ್ತಿಸಲು ಅವಕಾಶ ಕೊಟ್ಟಲ್ಲಿ ಆಗ ವೊಡಾಫೋನ್ ಐಡಿಯಾ ಒಂದಷ್ಟು ಬಂಡವಾಳ ಹುಟ್ಟಿಸಲು ಸಾಧ್ಯವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ