GST Amnesty Scheme: ಜಿಎಸ್​ಟಿ ಅಮ್ನೆಸ್ಟಿ ಯೋಜನೆ ನವೆಂಬರ್​ 30ರ ತನಕ ವಿಸ್ತರಣೆ; ಯಾರಿಗೆಲ್ಲ ಆಗಲಿದೆ ಅನುಕೂಲ

| Updated By: Srinivas Mata

Updated on: Aug 30, 2021 | 11:11 AM

ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ ಜಿಎಸ್​ಟಿ ಅಮ್ನೆಸ್ಟಿ ಅಡಿಯಲ್ಲಿ ವಿಳಂಬ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕವನ್ನು ನವೆಂಬರ್ 30, 2021ಕ್ಕೆ ವಿಸ್ತರಿಸಲಾಗಿದೆ.

GST Amnesty Scheme: ಜಿಎಸ್​ಟಿ ಅಮ್ನೆಸ್ಟಿ ಯೋಜನೆ ನವೆಂಬರ್​ 30ರ ತನಕ ವಿಸ್ತರಣೆ; ಯಾರಿಗೆಲ್ಲ ಆಗಲಿದೆ ಅನುಕೂಲ
ಜಿಎಸ್​ಟಿ (ಪ್ರಾತಿನಿಧಿಕ ಚಿತ್ರ)
Follow us on

ಜಿಎಸ್‌ಟಿ ಅಮ್ನೆಸ್ಟಿ ಯೋಜನೆಯನ್ನು (GST Amnesty Scheme) ಪಡೆಯುವುದಕ್ಕೆ ಇರುವ ಕೊನೆ ದಿನಾಂಕವನ್ನು ಭಾನುವಾರದಂದು ಕೇಂದ್ರ ಹಣಕಾಸು ಸಚಿವಾಲಯದಿಂದ ವಿಸ್ತರಣೆ ಮಾಡಲಾಗಿದೆ. ಅಂದ ಹಾಗೆ ಈ ಯೋಜನೆ ಅಡಿಯಲ್ಲಿ, ತೆರಿಗೆದಾರರು ಮಾಸಿಕ ರಿಟರ್ನ್ಸ್ ಸಲ್ಲಿಸಲು ವಿಳಂಬವಾದ ಶುಲ್ಕವನ್ನು ಪಾವತಿಸಲು ಮೂರು ತಿಂಗಳವರೆಗೆ, ಅಂದರೆ ನವೆಂಬರ್ 30ರ ವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಚಿವರನ್ನು ಒಳಗೊಂಡ ಜಿಎಸ್‌ಟಿ ಸಭೆಯು ಮೇ ತಿಂಗಳಲ್ಲಿ ಅಮ್ನೆಸ್ಟಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಬಾಕಿ ಇರುವ ರಿಟರ್ನ್ಸ್‌ಗಾಗಿ ವಿಳಂಬ ಶುಲ್ಕದಲ್ಲಿ ತೆರಿಗೆದಾರರಿಗೆ ನಿರಾಳ ಆಗುವಂಥ ತೀರ್ಮಾನ ಇದಾಗಿದೆ. 2017ರ ಜುಲೈ ತಿಂಗಳಿಂದ 2021ರ ಏಪ್ರಿಲ್ ತನಕ GSTR-3B ಸಲ್ಲಿಸದಿರುವ ಕಾರಣಕ್ಕೆ ಬೀಳುವ ವಿಳಂಬ ಶುಲ್ಕವನ್ನು ಯಾವುದೇ ತೆರಿಗೆ ಲಯಾಬಿಲಿಟಿ ಹೊಂದಿರದ ತೆರಿಗೆದಾರರು ಪ್ರತಿ ರಿಟರ್ನ್‌ಗೆ 500 ರೂಪಾಯಿಯಂತೆ, ತೆರಿಗೆ ಲಯಾಬಿಲಿಟಿ ಹೊಂದಿರುವವರು ಆಗಸ್ಟ್ 31, 2021ರೊಳಗೆ ಅಂತಹ ರಿಟರ್ನ್ಸ್ ಸಲ್ಲಿಸಿದರೆ ಪ್ರತಿ ರಿಟರ್ನ್​ಗೆ ಗರಿಷ್ಠ ತಲಾ 1,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಸಭೆಯಲ್ಲಿನ ನಿರ್ಧಾರದ ನಂತರ ಸಚಿವಾಲಯವು ಜೂನ್ 1ರಂದು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿತು. ಜುಲೈ 21, 2017ರಿಂದ ಏಪ್ರಿಲ್ 2021ರ ವರೆಗಿನ ತೆರಿಗೆ ಅವಧಿಗಳಿಗೆ ಸಲ್ಲಿಸದ ಫಾರ್ಮ್ GSTR-3Bಗಾಗಿ ತಡವಾದ ಶುಲ್ಕವನ್ನು (ಲೇಟ್ ಫೀ) ಕಡಿತಗೊಳಿಸಲಾಗಿದೆ. ಆದರೆ ಅಂತಹ ತೆರಿಗೆದಾರರು ಈ ತೆರಿಗೆ ಅವಧಿಗೆ ಆಗಸ್ಟ್ 31, 2021ರೊಳಗೆ ರಿಟರ್ನ್ಸ್ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. “ವಿಳಂಬ ಶುಲ್ಕ ಅಮ್ನೆಸ್ಟಿ ಯೋಜನೆಯ ಲಾಭ ಪಡೆಯಲು ಕೊನೆಯ ದಿನಾಂಕವನ್ನು ಈಗಿರುವ ಆಗಸ್ಟ್ 31, 2021ರಿಂದ ನವೆಂಬರ್ 30, 2021ರ ವರೆಗೆ ವಿಸ್ತರಿಸಲಾಗಿದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನು ಹಲವು ಮನವಿಗಳು ಬಂದ ಹಿನ್ನೆಲೆಯಲ್ಲಿ ನೋಂದಣಿ ರದ್ದತಿಯನ್ನು ತೆರವುಗೊಳಿಸುವ ಕಾಲಾವಧಿಯನ್ನು ಸರ್ಕಾರದಿಂದ ಸೆಪ್ಟೆಂಬರ್ 30, 2021ಕ್ಕೆ ವಿಸ್ತರಿಸಲಾಗಿದೆ. ನೋಂದಣಿ ರದ್ದತಿಯನ್ನು ತೆರವುಗೊಳಿಸುವ ಅಂತಿಮ ದಿನಾಂಕ ಮಾರ್ಚ್ 1, 2020 ಹಾಗೂ ಆಗಸ್ಟ್ 31, 2021ರ ಮಧ್ಯೆ ಬರುತ್ತದೋ ಅದಕ್ಕೆ ಅನ್ವಯ ಆಗುತ್ತದೆ.

ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (ಡಿಎಸ್‌ಸಿ) ಬದಲಿಗೆ ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇವಿಸಿ) ಬಳಸುವ ಕಂಪೆನಿಗಳಿಂದ ಫಾರ್ಮ್ GSTR -3B ಮತ್ತು ಫಾರ್ಮ್ GSTR-1/IFF ಅನ್ನು ಸಲ್ಲಿಸುವುದಕ್ಕೆ ಈಗಾಗಲೇ ಏಪ್ರಿಲ್ 27, 2021ರಿಂದ ಆಗಸ್ಟ್ 31, 2021ರ ವರೆಗೆ ಸಕ್ರಿಯಗೊಳಿಸಲಾಗಿದೆ. ಇದನ್ನು ಅಕ್ಟೋಬರ್ 31, 2021ಕ್ಕೆ ವಿಸ್ತರಿಸಲಾಗಿದೆ. “ವಿಳಂಬ ಶುಲ್ಕ ಅಮ್ನೆಸ್ಟಿ ಯೋಜನೆಯ ಮುಕ್ತಾಯ ದಿನಾಂಕ ಮತ್ತು ನೋಂದಣಿ ರದ್ದತಿ ತೆರವಿಗಾಗಿ ಅರ್ಜಿ ಸಲ್ಲಿಸುವ ಸಮಯದ ಮಿತಿಯನ್ನು ವಿಸ್ತರಿಸುವುದರಿಂದ ಹೆಚ್ಚಿನ ಸಂಖ್ಯೆಯ ತೆರಿಗೆದಾರರು, ವಿಶೇಷವಾಗಿ ಸಣ್ಣ ತೆರಿಗೆದಾರರು, ವಿವಿಧ ಕಾರಣಗಳಿಂದ ಸಕಾಲದಲ್ಲಿ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗಿಲ್ಲದವರಿಗೆ ಸಹಾಯ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಕೊವಿಡ್- 19 ತೊಂದರೆಗಳಿಂದಾಗಿ, ಮತ್ತು ಅದೇ ಕಾರಣದಿಂದಾಗಿ ನೋಂದಣಿಗಳು ರದ್ದಾದವರಿಗೆ ನೆರವಾಗುತ್ತದೆ,”ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: GST Registration: ಜಿಎಸ್​ಟಿ ನೋಂದಣಿ ಬಗ್ಗೆ ಹಂತ ಹಂತವಾದ ಮಾಹಿತಿ ಇಲ್ಲಿದೆ

Nirmala Sitharaman: ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್​ಟಿ ಸಂಗ್ರಹ; ಚೇತರಿಕೆಯತ್ತ ಆರ್ಥಿಕತೆ ಎಂದ ನಿರ್ಮಲಾ

(Finance Ministry Extended Last Date Of GST Amnesty Scheme Till November 30 2021)

Published On - 11:08 am, Mon, 30 August 21