Nirmala Sitharaman: ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್ಟಿ ಸಂಗ್ರಹ; ಚೇತರಿಕೆಯತ್ತ ಆರ್ಥಿಕತೆ ಎಂದ ನಿರ್ಮಲಾ
ಜುಲೈ ತಿಂಗಳಲ್ಲಿ ಜಿಎಸ್ಟಿ ಆದಾಯ ಸಂಗ್ರಹ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದ ಮೇಲೆ ಭಾರತದ ಆರ್ಥಿಕತೆಯ ಚೇತರಿಕೆ ವೇಗವನ್ನು ಪಡೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೊವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆ 2021ರ ಜುಲೈ ತಿಂಗಳಲ್ಲಿ ಮತ್ತೆ ಜಿಎಸ್ಟಿ (GST) ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಆರ್ಥಿಕತೆಯು ತುಂಬ ವೇಗವಾಗಿ ಚೇತರಿಕೆ ಕಾಣುತ್ತಿರುವ ಸೂಚನೆ ಇದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ. ಜಿಎಸ್ಟಿ ಸಂಗ್ರಹ ಪ್ರಮಾಣವು ಮುಂಬರುವ ತಿಂಗಳುಗಳಲ್ಲಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ. ಜುಲೈ ತಿಂಗಳಲ್ಲಿ 1.16 ಲಕ್ಷ ಕೋಟಿ ರೂಪಾಯಿಯಷ್ಟು ಗ್ರಾಸ್ ಜಿಎಸ್ಟಿ ಆದಾಯ ಸಂಗ್ರಹ ಆಗಿದೆ. ಅದರಲ್ಲಿ ಸಿಜಿಎಸ್ಟಿ 22,197 ಕೋಟಿ ರೂಪಾಯಿ, ಎಸ್ಜಿಎಸ್ಟಿ ರೂ. 28,541 ಕೋಟಿ ರೂಪಾಯಿ, ಐಜಿಎಸ್ಟಿ 57,864 ಕೋಟಿ ರೂ. ಮತ್ತು ಸೆಸ್ 7,790 ಕೋಟಿ ರೂ. (815 ಕೋಟಿ ರೂ. ಆಮದು ವಸ್ತುಗಳ ಮೇಲೆ ಸಂಗ್ರಹವಾದದ್ದು ಒಳಗೊಂಡಿದೆ) ಎಂದು ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ಈ ಅಂಕಿ-ಅಂಶಗಳು ಜುಲೈ 1ರಿಂದ 31ರ ಮಧ್ಯೆ ಫೈಕ್ ಆದ GSTR-3B ರಿಟರ್ನ್ಸ್ನಿಂದ ಸಂಗ್ರಹವಾದದ್ದನ್ನೂ ಒಳಗೊಂಡಿದೆ. ಜತೆಗೆ ಇದೇ ಅವಧಿಯಲ್ಲಿ ಆಮದಿನ ಮೇಲೆ ಸಂಗ್ರಹವಾದ ಐಜಿಎಸ್ಟಿ ಮತ್ತು ಸೆಸ್ ಸಹ ಇದೆ. ಜುಲೈ 1ರಿಂದ 5ನೇ ತಾರೀಕಿನ ಮಧ್ಯೆ ರಿಟರ್ನ್ಸ್ ಫೈಲ್ ಆದ 2021ರ ಜೂನ್ ತಿಂಗಳ ಜಿಎಸ್ಟಿ ಸಂಗ್ರಹವಾದ 4,937 ಕೋಟಿ ರೂಪಾಯಿ ಕೂಡ ಒಳಗೊಂಡಿದೆ.
ಕೊವಿಡ್ ನಿರ್ಬಂಧಗಳು ಸಡಿಲ ಆಗುತ್ತಿದ್ದಂತೆಯೇ 2021ರ ಜುಲೈ ತಿಂಗಳ ಜಿಎಸ್ಟಿ ಸಂಗ್ರಹ ಮತ್ತೊಮ್ಮೆ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ. ಆರ್ಥಿಕತೆಯು ಬಹಳ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದು ಸೂಚನೆ ಇದು. ಜಿಎಸ್ಟಿ ಆದಾಯದ ಹೆಚ್ಚಳ ಮುಂಬರುವ ತಿಂಗಳುಗಳಲ್ಲೂ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. ಅಂದಹಾಗೆ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಲಾಕ್ಡೌನ್ ಹೇರಲಾಗಿತ್ತು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ತಡೆ ಬಿದ್ದು, ಜಿಎಸ್ಟಿ ಆದಾಯ ಸಂಗ್ರಹಕ್ಕೆ ಹಿನ್ನಡೆ ಆಗಿತ್ತು. ಈಗ ಜುಲೈ ತಿಂಗಳಲ್ಲಿ ಚೇತರಿಕೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಇದನ್ನೂ ಓದಿ: GST: ಜುಲೈ ತಿಂಗಳಲ್ಲಿ 1,16,393 ಕೋಟಿ ರೂಪಾಯಿ ಒಟ್ಟು ಜಿಎಸ್ಟಿ ಸಂಗ್ರಹ
(Nirmala Sitharaman Said Indian Economy In Fast Pace Of Recovery After Crossing Rs 1 Lakh Crore GST In July)