How To: ಬ್ಯಾಂಕ್ನಲ್ಲಿ ಅಡಮಾನ ಮಾಡಿದ ಆಸ್ತಿ ಮಾರಾಟ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಮಾಡಿದ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ವಿವರಣೆ ಇಲ್ಲಿದೆ.
ಕೊವಿಡ್-19 ಬಿಕ್ಕಟ್ಟು ಆರೋಗ್ಯದ ಸಮಸ್ಯೆಯನ್ನು ಮಾತ್ರ ತಂದಿಟ್ಟಿಲ್ಲ. ಎಷ್ಟೋ ಜನರ ವೇತನ ಕಡಿತ ಮತ್ತು ಉದ್ಯೋಗ ನಷ್ಟಕ್ಕೂ ಕಾರಣವಾಗಿದೆ. ಹಲವರಿಗೆ ತಮ್ಮ ಇಎಂಐಗಳು ಅಥವಾ ಎಲೆಕ್ಟ್ರಿಕ್, ಫೋನ್, ಕ್ರೆಡಿಟ್ ಬಿಲ್ ಪಾವತಿ ಮಾಡುವುದಕ್ಕೂ ಕಷ್ಟವಾಗಿದೆ. ಈ ಕಾರಣದಿಂದಾಗಿ ಭೂಮಿ, ಆಸ್ತಿ ಅಥವಾ ತಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಮಾರುವಂಥ ಸ್ಥಿತಿ ಎದುರಾಗಿದೆ. ಇನ್ನು ಎರಡನೇ ಮನೆ ಅಂತ ಖರೀದಿ ಮಾಡಿದವರಿಗಂತೂ ಹಣಕಾಸು ಹೊರೆ ಮತ್ತೂ ಹೆಚ್ಚಾಗಿದೆ. ಆ ಕಾರಣಕ್ಕೆ ಕೆಲವರು ತಮ್ಮ ಸಾಲವನ್ನು ಹಿಂತಿರುಗಿಸಿ, ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂಬ ತೀರ್ಮಾನ ಮಾಡುತ್ತಿದ್ದಾರೆ. ಆ ಸಾಲವನ್ನು ತೀರಿಸುವುದಕ್ಕಾಗಿ ತಮ್ಮ ಆಸ್ತಿಯನ್ನು ಮಾರಬೇಕು ಎಂದುಕೊಳ್ಳುತ್ತಿದ್ದಾರೆ.
ಇದು ಒಂದು ಕಡೆಯಾಯಿತು. ಮತ್ತೊಂದು ಕಡೆ ಹಣದುಬ್ಬರದ ಏರಿಕೆ ಸಹ ಆತಂಕ ಹೆಚ್ಚಿಸಿದೆ. ಎಲ್ಲರಲ್ಲೂ ಒಂದು ಬಗೆಯ ಅನಿಶ್ಚಿತತೆ ಕಾಣುತ್ತಿದೆ. ಸರಿ, ಇದರಿಂದ ಆಚೆಗೆ ಬರಬೇಕು ಎಂಬ ಕಾರಣಕ್ಕೆ ಹೊಸದಾಗಿ ಸಾಲ ಮಾಡೋದು ಖಂಡಿತಾ ಬುದ್ಧಿವಂತಿಕೆ ಅಲ್ಲ. ಮೊದಲೇ ಹೇಳಿದಂತೆ, ಈಗಾಗಲೇ ಯಾವುದಾದರೂ ಹಣಕಾಸು ಸಂಸ್ಥೆಯ ಬಳಿ ಆಸ್ತಿಯನ್ನು ಅಡಮಾನ ಮಾಡಿ, ಸಾಲ ಮಾಡಿರುವಂಥದ್ದನ್ನು ಮಾರಾಟ ಮಾಡುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ. ಯಾವತ್ತಿಗೂ ಸಾಲದಲ್ಲಿ ಇರುವ ಆಸ್ತಿಯನ್ನು ಮಾರುವುದಕ್ಕಿಂತ ಯಾವುದೇ ಸಾಲ ಇಲ್ಲದ ಆಸ್ತಿಯನ್ನು ಮಾರಾಟ ಮಾಡುವುದು ಸಲೀಸಾದ ಸಂಗತಿ.
ಈಗಾಗಲೇ ಸಾಲ ಪಡೆದಾಗಿರುವ ಆಸ್ತಿಯನ್ನು ಮಾರುವುದಕ್ಕೆ ಬೇಕಾದ ಸಿದ್ಧತೆಯೇ ಬೇರೆ ರೀತಿಯದ್ದಾಗಿರುತ್ತದೆ. ಸಾಲ ಬಾಕಿ ಉಳಿಸಿಕೊಂಡ ಆಸ್ತಿಯ ಮಾರಾಟಕ್ಕೆ ಮುಂದಾಗುತ್ತಿರುವಂತೆಯೇ ಅದಕ್ಕೆ ನಿರಾಕ್ಷೇಪಣಾ ಪತ್ರವನ್ನು (NOC) ಸಾಲ ನೀಡಿದ ವ್ಯಕ್ತಿ ಅಥವಾ ಸಂಸ್ಥೆಯಿಂದ ಪಡೆಯಬೇಕು. ಸಾಲ ನೀಡಿದ ಬ್ಯಾಂಕ್ನಿಂದ ಗ್ರಾಹಕರ ಸಾಲದ ಉದ್ದೇಶವು ಕಡ್ಡಾಯವಾಗಿ ನೋಟಿಫೈ ಆಗಬೇಕು ಅಥವಾ ಪ್ರಕ್ರಿಯೆಯನ್ನು ಆರಂಭಿಸಬೇಕು. ಆ ನಂತರ ಬಾಕಿ ಉಳಿಸಿಕೊಂಡಿರುವ ಸಾಲ ಮೊತ್ತದ ಬಗ್ಗೆ ಬ್ಯಾಂಕ್ನಿಂದ ಮಾಹಿತಿ ನೀಡಲಾಗುತ್ತದೆ. ಈ ಹಂತದಲ್ಲಿ, ಅಡಮಾನ ಮಾಡಿರುವ ಆಸ್ತಿಗೆ ಸಂಬಂಧಿಸಿದಂತೆ ಮಾಲೀಕತ್ವದ ಸಾಕ್ಷ್ಯವನ್ನು ನೀಡಬೇಕಾಗುತ್ತದೆ.
ಅಗತ್ಯ ದಾಖಲಾತಿಗಳು ಆಸ್ತಿಯನ್ನು ಅಡಮಾನ ಮಾಡಿ ಸಾಲ ಪಡೆದು, ಅದರ ಬಾಕಿ ಇನ್ನೂ ಉಳಿದಿದೆ ಅಂತಾದಲ್ಲಿ ಮೂಲ ದಾಖಲಾತಿಗಳು ಸಾಲ ನೀಡಿದ ಸಂಸ್ಥೆಯ ಬಳಿಯಲ್ಲೇ ಇರುತ್ತವೆ. ಮೊದಲಿಗೆ ತಮ್ಮ ಬಳಿ ಎಲ್ಲ ಮೂಲ ದಾಖಲಾತಿಗಳು ನಕಲು ಪ್ರತಿ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಇದು ಕೇವಲ ಮನೆ ಅಥವಾ ಆಸ್ತಿ ಮಾರಾಟಕ್ಕೆ ಮಾತ್ರ ಸಹಾಯ ಮಾಡುವುದಿಲ್ಲ. ಜತೆಗೆ ಮಾಲೀಕತ್ವವನ್ನು ಸಾಬೀತು ಮಾಡುವುದಕ್ಕೂ ಆಗುತ್ತದೆ. ಇನ್ನು ದಾಖಲಾತಿಗಳು ಯಾವುವು ಎಂಬುದರ ವಿವರ ಹೀಗಿದೆ:
– ಎನ್ಕಂಬರೆನ್ಸ್ ಸರ್ಟಿಫಿಕೇಟ್ (ಋಣರಾಹಿತ್ಯ ಪತ್ರ) – ಸೇಲ್ ಡೀಡ್ ಕಾಪಿ (ಕ್ರಯ ಪತ್ರದ ನಕಲು) – ಸಾಲ ಮಂಜೂರಾತಿ ದಾಖಲೆಗಳು – ಮೂಲಪತ್ರ – ಆಸ್ತಿ ತೆರಿಗೆ ರಸೀದಿ – ಸೊಸೈಟಿ NOC
ಸಾಲ ಬಾಕಿ ಇರುವಾಗ ಆಸ್ತಿ ಮಾರಾಟ ಮಾಡುವುದು ಹೇಗೆ? ಆಯ್ಕೆ 1: ಖರೀದಿದಾರರ ಸ್ವಂತ ಉಳಿತಾಯದಿಂದ ಈ ಪ್ರಕ್ರಿಯೆ ಬಹಳ ಸರಳ. ಖರೀದಿದಾರರ ಕಡೆಯಿಂದ ಯಾವುದೇ ಬ್ಯಾಂಕ್ ಇದಲ್ಲಿ ಒಳಗೊಳ್ಳಲ್ಲ. ಮಾರಾಟಗಾರರು ಬ್ಯಾಂಕ್ ಬಳಿ ಮನವಿ ಮಾಡಿಕೊಂಡು, ಸಾಲ ಬಾಕಿ ಪತ್ರವನ್ನು ಕೇಳುತ್ತಾರೆ. ಮಾರಾಟಗಾರರಿಗೆ ಹಣ ಪಾವತಿ ಮಾಡುವ ಬದಲಿಗೆ ಡೌನ್ಪೇಮೆಂಟ್ ಅನ್ನು ನೇರವಾಗಿ ಮಾರಾಟಗಾರರ ಸಾಲದ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಾಲ ಪಾವತಿಸಲಾಗುತ್ತದೆ ಮತ್ತು ಜವಾಬ್ದಾರಿ ವಿಲೇವಾರಿ ಮಾಡಲಾಗುತ್ತದೆ. ಬ್ಯಾಂಕ್ನಿಂದ ಆಸ್ತಿಯ ದಾಖಲಾತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆ ನಂತರದಲ್ಲಿ ಮಾರಾಟಗಾರರು ಖರೀದಿದಾರರ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಬಹುದು. ಬಾಕಿ ಮೊತ್ತ ಇನ್ನೇನಾದರೂ ಇದ್ದಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ಮಧ್ಯೆ ನೇರವಾಗಿ ತೀರುವಳಿ ಆಗುತ್ತದೆ.
ಆಯ್ಕೆ 2: ಖರೀದಿದಾರರು ಮತ್ತು ಮಾರಾಟಗಾರರು ಎರಡೂ ಕಡೆಯಿಂದ ಒಂದೇ ಸಾಲ ನೀಡುವ ಸಂಸ್ಥೆಯನ್ನು ಆರಿಸಿಕೊಂಡಾಗ ಒಂದು ವೇಳೆ ಖರೀದಿದಾರರು ಸಹ ಮಾರಾಟಗಾರರು ಸಾಲ ಪಡೆದ ಸಂಸ್ಥೆಯಿಂದಲೇ ಸಾಲ ಪಡೆದುಕೊಳ್ಳಲು ಮುಂದಾದರೆ, ಆಗ ತ್ರಿಪಕ್ಷೀಯ ವ್ಯವಸ್ಥೆ ಆಗುತ್ತದೆ. ಮಾರಾಟ ಮತ್ತು ಪಾವತಿ ಪ್ರಕ್ರಿಯೆ ಎಲ್ಲರಿಗೂ ಸಲೀಸಾಗುತ್ತದೆ. ಅಗತ್ಯ ಬೀಳುವ ಪರಿಶೀಲನೆಗಳು ಬಹಳ ಅಂದರೆ ಬಹಳ ಕಡಿಮೆ. ಆ ಆಸ್ತಿ ಖರೀದಿಗೆ ಖರೀದಿದಾರರು ಅರ್ಹತಾ ಮಾನದಂಡಗಳನ್ನೆಲ್ಲ ಪೂರೈಸುತ್ತಾರಾ ಎಂಬುದನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ಖರೀದಿದಾರರು ಪಡೆದ ಲೋನ್ ಮೊತ್ತದಿಂದ ಮಾರಾಟಗಾರರು ಬಾಕಿ ಉಳಿಸಿಕೊಂಡ ಸಾಲದ ಮೊತ್ತ ತೀರುತ್ತದೆ. ಬಾಕಿ ಮೊತ್ತ ಉಳಿದಿದ್ದನ್ನು ಮಾರಾಟಗಾರರಿಗೆ ನೀಡಲಾಗುತ್ತದೆ. ಖರೀದಿದಾರರು ಲೋನ್ ಪ್ರೊಸೆಸಿಂಗ್ ಫೀ ಭರಿಸಬೇಕಾಗುತ್ತದೆ.
ಆಯ್ಕೆ 3: ಖರೀದಿದಾರರು ಹಾಗೂ ಮಾರಾಟಗಾರರ ಬ್ಯಾಂಕ್ಗಳು ಬೇರೆಬೇರೆಯಾದಲ್ಲಿ ಹೇಗೆ? ಈ ಪ್ರಕರಣದಲ್ಲಿ ಮಾರಾಟಗಾರರು ಬ್ಯಾಂಕ್ ಬಳಿ ಮನವಿ ಮಾಡಿ, ಸಾಲ ಬಾಕಿ ಪತ್ರವನ್ನು ತೆಗೆದುಕೊಳ್ಳುತ್ತಾರೆ. ಜತೆಗೆ ಬ್ಯಾಂಕ್ನಲ್ಲಿ ಅಡಮಾನ ಮಾಡಿರುವ ಆಸ್ತಿಗೆ ಸಂಬಂಧಿದ ಮೂಲ ದಾಖಲೆಗಳ ಪಟ್ಟಿ ಸಹ ಇರುತ್ತದೆ. ಒಂದು ಸಲ ಎಲ್ಲ ಪತ್ರಗಳನ್ನು ಒದಗಿಸಿದ ಮೇಲೆ, ಖರೀದಿದಾರರು ಬ್ಯಾಂಕ್ ಬಳಿ ತೆರಳಿ, ಅಗತ್ಯ ಶುಲ್ಕದ ಪಾವತಿ ಮಾಡುತ್ತಾರೆ. ಆ ನಂತರ ಒಂದು ವೇಳೆ ಅರ್ಜಿದಾರರು ಅರ್ಹರಾಗಿದ್ದಲ್ಲಿ ಖರೀದಿದಾರರ ಬ್ಯಾಂಕ್ನಿಂದ ಮಾರಾಟಗಾರರ ಬ್ಯಾಂಕ್ ಪರವಾಗಿ ಬಾಕಿ ಉಳಿದ ಸಾಲದ ಮೊತ್ತಕ್ಕೆ ಚೆಕ್ ನೀಡಲಾಗುತ್ತದೆ. ಯಾವಾಗ ಸಾಲದ ಮೊತ್ತವು ಪೂರ್ತಿಯಾಗಿ ತೀರುತ್ತದೋ ಬ್ಯಾಂಕ್ನಿಂದ ಆಸ್ತಿ ಪತ್ರಗಳನ್ನು ನೀಡಲಾಗುತ್ತದೆ. ಆ ನಂತರ ಅವುಗಳನನ್ನು ಖರೀದಿದಾರರ ಬ್ಯಾಂಕ್ಗೆ ವರ್ಗಾವಣೆ ಮಾಡಲಾಗುತ್ತದೆ. ಆ ನಂತರವಷ್ಟೇ ಬಾಕಿ ಮೊತ್ತ ಬಿಡುಗಡೆ ಆಗುತ್ತದೆ.
ಸಾಲ ಬಾಕಿ ಇರುವ ಮನೆಯ ಮಾರಾಟ ಮಾಡಿದ್ದರೆ ತೆರಿಗೆ ಲೆಕ್ಕಾಚಾರ ಹೇಗೆ? ಒಂದು ವರ್ಷಕ್ಕಿಂತ ಮುಂಚಿತವಾಗಿ ಮನೆ ಮಾರಾಟ ಮಾಡಿದಲ್ಲಿ ಹೆಚ್ಚಿನ ತೆರಿಗೆ ಬೀಳುತ್ತದೆ. ಯಾವುದೇ ತುರ್ತು ಹಣಕಾಸು ಅಗತ್ಯ ಇಲ್ಲ ಎಂದಾದಲ್ಲಿ ಕಡಿಮೆ ಅವಧಿಗೆ ಮನೆ ಮಾರಾಟ ಮಾಡದಿರುವುದು ಉತ್ತಮ.
ಖರೀದಿ ಮಾಡಿದ ಒಂದೇ ವರ್ಷದೊಳಗೆ ಮನೆ ಮಾರಾಟ ಮಾಡಿದರೆ ಲೆಕ್ಕ ಹೇಗೆ? ಮನೆ ಖರೀದಿ ಮಾಡಿದ ಒಂದೇ ವರ್ಷದೊಳಗೆ ಅದನ್ನು ಮಾರಾಟ ಮಾಡಿದಲ್ಲಿ ಅದು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ಸ್ನ್ ಅಡಿಯಲ್ಲಿ (STCG) ತೆರಿಗೆ ಆಗುತ್ತದೆ. ಬಂದ ಲಾಭದ ಮೇಲೆ ಲೆಕ್ಕಾಚಾರ ಇರುತ್ತದೆ. ಆದಾಯದ ಆಧಾರದ ಮೇಲೆ ಶೇ 10ರಿಂದ 37ರಷ್ಟು ಆಗುತ್ತದೆ. ಬಂದ ಹಣದಿಂದ ಮತ್ತೊಂದು ಮನೆ ಕಟ್ಟಿದಲ್ಲಿ ಆಗ ತೆರಿಗೆ ವಿನಾಯಿತಿಗೆ ಅರ್ಹರು.
ಖರೀದಿ ಮಾಡಿದ ಒಂದು ವರ್ಷದ ನಂತರ ಮನೆ ಮಾರಾಟ ಮಾಡಿದರೆ ತೆರಿಗೆ ಲೆಕ್ಕ ಹೇಗೆ? ಮನೆ ಖರೀದಿಸಿದ 1 ವರ್ಷದ ನಂತರ ಮಾರಾಟ ಮಾಡಿದಲ್ಲಿ ಆಗ ಲಾಭದ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (LTCG) ಪಾವತಿಸಬೇಕಾಗುತ್ತದೆ. ಆದಾಯದ ಆಧಾರದ ಮೇಲೆ ಶೇ 0, ಶೇ 10 ಮತ್ತು ಶೇ 15 ಆಗುತ್ತದೆ. ಒಂದು ವೇಳೆ ಬಂದ ಹಣದಿಂದ 1 ವರ್ಷದೊಳಗೆ ಮನೆ ಖರೀದಿಸಿದಲ್ಲಿ ಶೇ 19.5ರ ತನಕ ತೆರಿಗೆ ಕಡಿತವನ್ನು ಉಳಿಸಬಹುದು.
ಇದನ್ನೂ ಓದಿ: Home loan: ಗೃಹ ಸಾಲ ಪಡೆಯುವಾಗ ಈ 5 ತಪ್ಪುಗಳನ್ನು ಮಾಡದಿರಿ
(How To Sell Properties Which Are Pledged With Lending Institutions Here Is An Explainer)