ಬೆಂಗಳೂರು, ಫೆಬ್ರುವರಿ 6: ಪೇಮೆಂಟ್ ಪ್ಲಾಟ್ಫಾರ್ಮ್ ಆಗಿ ಆರಂಭಗೊಂಡ ಕ್ರೆಡ್ (Cred) ಇವತ್ತು ಹಲವು ಕ್ಷೇತ್ರಗಳಿಗೆ ವ್ಯಾಪಿಸುತ್ತಿದೆ. ಸತತ ನಷ್ಟದಲ್ಲಿದ್ದರೂ ಲೆಕ್ಕಿಸಿದೇ ಹೊಸ ಹೊಸ ಕಂಪನಿಗಳನ್ನು ಖರೀದಿಸುತ್ತಿದೆ. ಈಗ ಕುವೇರಾ (Kuvera) ಎಂಬ ಕಂಪನಿಯನ್ನು ಖರೀದಿಸುವ ಮೂಲಕ ವೆಲ್ತ್ ಮ್ಯಾನೇಜ್ಮೆಂಟ್ ಕ್ಷೇತ್ರಕ್ಕೆ ಕಾಲಿಡಲು ಕ್ರೆಡ್ ಅಣಿಯಾಗಿದೆ. ವರದಿ ಪ್ರಕಾರ ಬೆಂಗಳೂರು ಮೂಲದ ಫಿನ್ಟೆಕ್ ಯೂನಿಕಾರ್ನ್ ಆಗಿರುವ ಕ್ರೆಡ್ ಸಂಸ್ಥೆ ಕುವೇರಾವನ್ನು ಖರೀದಿಸುವುದು ಖಚಿತ ಎನ್ನಲಾಗಿದೆ. ಒಪ್ಪಂದ ಅಂತಿಮ ಹಂತದಲ್ಲಿದೆ ಎನ್ನಲಾಗಿದ್ದು, ಎಷ್ಟು ಮೊತ್ತಕ್ಕೆ ಡೀಲ್ ನಡೆದಿದೆ ಎಂಬ ಮಾಹಿತಿ ಗೊತ್ತಾಗಿಲ್ಲ.
ಕುವೇರಾ 2016ರಲ್ಲಿ ಸ್ಥಾಪನೆಯಾದ ಕಂಪನಿಯಾಗಿದ್ದು, ಇದು ವೆಲ್ತ್ ಮ್ಯಾನೇಜ್ಮೆಂಟ್ ಸೇವೆ ಒದಗಿಸುತ್ತದೆ. ಗೌರವ್ ರಸ್ತೋಗಿ ಮತ್ತು ನೀಲಭ್ ಸಾನ್ಯಾಲ್ ಇದರ ಸಂಸ್ಥಾಪಕರು. ನೇರ ಮ್ಯುಚುವಲ್ ಫಂಡ್ಗೆ ಭಾರತದ ಐದು ಅಗ್ರ ಪ್ಲಾಟ್ಫಾರ್ಮ್ಗಳಲ್ಲಿ ಕುವೇರಾವೂ ಒಂದು. ಮೂರು ಲಕ್ಷ ಬಳಕೆದಾರರ ಬಳಗ ಇದ್ದು, ಒಟ್ಟಾರೆ 50,000 ಕೋಟಿ ರೂ ಮೊತ್ತದ ಆಸ್ತಿ ನಿಭಾಯಿಸುತ್ತದೆ. ಇದರ ವಿಶೇಷತೆ ಎಂದರೆ ಮ್ಯುಚುವಲ್ ಫಂಡ್ ವಹಿವಾಟಿಗೆ ಇದು ಕಮಿಷನ್ ಪಡೆಯುವುದಿಲ್ಲ.
ಇದನ್ನೂ ಓದಿ: 30 ಕೋಟಿ ರೂ ಮಾರ್ಕೆಟ್ ಕ್ಯಾಪ್ ದಾಟಿದ ಮೊದಲ ಭಾರತೀಯ ಕಂಪನಿ ಟಾಟಾ ಗ್ರೂಪ್
ಇನ್ನೊಂದೆಡೆ ಕುನಾಲ್ ಶಾ 2018ರಲ್ಲಿ ಸ್ಥಾಪಿಸಿದ ಕ್ರೆಡ್ ಬಹಳ ಸದ್ದು ಮಾಡಿದ ಫಿನ್ಟೆಕ್ ಕಂಪನಿ. ಕ್ರೆಡಿಟ್ ಕಾರ್ಡ್ ಬಿಲ್, ಯುಟಿಲಿಟಿ ಬಿಲ್ ಇತ್ಯಾದಿ ಬಿಲ್ಗಳನ್ನು ಈ ಪ್ಲಾಟ್ಫಾರ್ಮ್ನಲ್ಲಿ ಕಟ್ಟಿದರೆ ರಿವಾರ್ಡ್ಗಳನ್ನು ಕೊಡಲಾಗುತ್ತದೆ. ಆರಂಭದಲ್ಲಿ ಇದು ಬಹಳ ಜನಪ್ರಿಯವಾದರೂ ಲಾಭವಾಗಿ ಪರಿವರ್ತಿಸಲು ವಿಫಲವಾಗಿದೆ.
ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಕ್ರೆಡ್ನ ಆದಾಯ 2021-22ರಲ್ಲಿ 422 ಕೋಟಿ ರೂ ಇದ್ದದ್ದು 2022-23ರಲ್ಲಿ 1,484 ಕೋಟಿ ರೂಗೆ ಏರಿತ್ತು. ಆದರೆ, ಅದರ ನಿವ್ವಳ ನಷ್ಟ ಬರೋಬ್ಬರಿ 1,347 ಕೋಟಿ ರೂ ಆಗಿದೆ.
ಇದನ್ನೂ ಓದಿ: ಪೇಟಿಎಂ ವ್ಯಾಲಟ್ ವ್ಯವಹಾರ ಖರೀದಿಸಲು ಮುಂದಾದರಾ ಮುಕೇಶ್ ಅಂಬಾನಿ; ಇಲ್ಲಿದೆ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನೀಡಿದ ಹೇಳಿಕೆ
ಜಿಐಸಿ, ಟೈಗರ್ ಗ್ಲೋಬಲ್, ಫಾಲ್ಕನ್ ಎಡ್ಜ್, ಸೋಫಿನಾ ವೆಂಚರ್ಸ್, ಇನ್ಸೈಟ್ ಪಾರ್ಟ್ನರ್ಸ್ ಮೊದಲಾದ ದೊಡ್ಡ ಹೂಡಿಕೆದಾರರಿಂದ ಬೆಂಬಲ ಪಡೆದಿರುವ ಕ್ರೆಡ್ ಸಾಕಷ್ಟು ನಷ್ಟ ಹೊಂದಿದರೂ ಬೇರೆ ಬೇರೆ ಕ್ಷೇತ್ರಗಳಿಗೆ ವ್ಯಾಪಿಸುವ ಪ್ರಯತ್ನ ಮಾಡುತ್ತಿದೆ. ಹಿಪ್ಬಾರ್ (HipBar), ಹ್ಯಾಪ್ಪೇ (Happay), ಕ್ರೆಡಿಟ್ ವಿದ್ಯಾ ಮೊದಲಾದ ಕಂಪನಿಗಳನ್ನು ಖರೀದಿಸಿದೆ. ಜೊತೆಗೆ ತಾನೇ ಖುದ್ದಾಗಿ ಕ್ರೆಡ್ ಗ್ಯಾರೇಜ್ ಎಂಬ ವಾಹನ ನಿರ್ವಹಣೆ ಸಂಸ್ಥೆಯನ್ನು ಆರಂಭಿಸಿದೆ. ಈಗ ಕುವೇರಾ ಮೂಲಕ ಮ್ಯುಚುವಲ್ ಫಂಡ್ ನಿರ್ವಹಣೆ ಕ್ಷೇತ್ರಕ್ಕೆ ಅಡಿ ಇಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ