Paytm crisis: ಪೇಟಿಎಂ ವ್ಯಾಲಟ್ ವ್ಯವಹಾರ ಖರೀದಿಸಲು ಮುಂದಾದರಾ ಮುಕೇಶ್ ಅಂಬಾನಿ; ಇಲ್ಲಿದೆ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನೀಡಿದ ಹೇಳಿಕೆ
Jio Financial Services statement: ಪೇಟಿಎಂನ ವ್ಯಾಲಟ್ ಬಿಸಿನೆಸ್ ಅನ್ನು ಖರೀದಿಸಲು ಎಚ್ಡಿಎಫ್ಸಿ ಬ್ಯಾಂಕ್, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮೊದಲಾದ ಸಂಸ್ಥೆಗಳು ಮುಂದಾಗಿರುವ ಸುದ್ದಿ ಇದೆ. ಆದರೆ, ಮುಕೇಶ್ ಅಂಬಾನಿ ಮಾಲಕತ್ವದ ಜಿಯೋ ಫೈನಾನ್ಷಿಯಲ್ ಈ ವರದಿಯನ್ನು ತಳ್ಳಿಹಾಕಿದೆ. ಅಂಥದ್ದೇನಾದರೂ ಬೆಳವಣಿಗೆ ಇದ್ದರೆ ಅದನ್ನು ಬಹಿರಂಗಪಡಿಸುವುದು ತಮ್ಮ ಹೊಣೆಗಾರಿಕೆ ಎಂದು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಜಿಯೊ ತಿಳಿಸಿದೆ.
ಮುಂಬೈ, ಫೆಬ್ರುವರಿ 6: ಆರ್ಬಿಐನಿಂದ ನಿರ್ಬಂಧಕ್ಕೊಳಗಾಗಿ ಪೇಟಿಎಂ ಸಂಕಷ್ಟದಲ್ಲಿರುವಂತೆಯೇ ಮುಕೇಶ್ ಅಂಬಾನಿ ಹೆಸರು ಮುನ್ನೆಲೆಗೆ ಬಂದಿದೆ. ವರದಿಗಳ ಪ್ರಕಾರ, ಪೇಟಿಎಂನ ವ್ಯಾಲಟ್ ವ್ಯವಹಾರಗಳನ್ನು (Paytm’s wallet business) ಖರೀದಿಸಲು ಕೆಲ ಸಂಸ್ಥೆಗಳು ಕಣ್ಣು ಹಾಕಿದ್ದು, ಅದರಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಕೂಡ ಒಂದು ಎಂದು ಹೇಳಲಾಗುತ್ತಿದೆ. ಆದರೆ, ಮುಕೇಶ್ ಅಂಬಾನಿ ಮಾಲಕತ್ವದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ (Jio Financial Services) ಈ ವರದಿಯನ್ನು ತಳ್ಳಿಹಾಕಿದ್ದು, ತಾನು ಅಂಥ ಪ್ರಯತ್ನಕ್ಕೆ ಕೈಹಾಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೇಟಿಎಂನ ವ್ಯಾಲಟ್ ಬಿಸಿನೆಸ್ ಖರೀದಿಸಲು ಮುಂದಾಗಿರುವ ಪ್ರಮುಖ ಕಂಪನಿಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸೇರಿವೆ. ಬ್ಲ್ಯಾಕ್ರಾಕ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಸಂಸ್ಥೆ ಜೊತೆ ಸೇರಿ ಸಹಭಾಗಿತ್ವದಲ್ಲಿ ಮ್ಯುಚುವಲ್ ಫಂಡ್ ವ್ಯವಹಾರ ನಡೆಸುತ್ತೇವೆ ಎಂದು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಅನುಮೋದನೆಗಾಗಿ ಅರ್ಜಿಯನ್ನೂ ಹಾಕಿದೆ. ಈ ಎರಡೂ ಸಂಸ್ಥೆಗಳು ತಲಾ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿವೆ ಎಂದು ದಿ ಹಿಂದೂ ಬಿಸಿನೆಸ್ ಲೈನ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ.
‘ಕೆವೈಸಿ ಸಂಬಂಧಿತ ಸಮಸ್ಯೆಗಳಿಂದ ಬಾಧಿತವಾಗಿರುವ ಪೇಟಿಎಂ, 2022ಕ್ಕೆ ಮುನ್ನ ವ್ಯಾಲಟ್ ವ್ಯವಹಾರದಲ್ಲಿ ಹೊಂದಿದ್ದ ಹುಮ್ಮಸ್ಸು ಈಗ ಹೊಂದಿಲ್ಲ. ಜಿಯೋ ಮೌಲ್ಯಮಾಪನ ಸಮಾಧಾನಕರವಾಗಿದ್ದರೆ ಇಷ್ಟರಲ್ಲಾಗಲೇ ಮಾತುಕತೆ ಫಲಪ್ರದವಾಗಿರುತ್ತಿತ್ತು,’ ಎಂದು ಆ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲೀ ನಡೆಯ ಮರ್ಮವೇನು? ನೆಟ್ಟಿಗರ ರಿಯಾಕ್ಷನ್ಸ್ ಇವು?
ಈ ವರದಿ ಬಂದ ಬೆನ್ನಲ್ಲೇ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮತ್ತು ಒನ್97 ಕಮ್ಯೂನಿಕೇಶನ್ಸ್ (ಪೇಟಿಂ) ಸಂಸ್ಥೆಗಳೆರಡರ ಷೇರುಬೆಲೆ ಫೆ. 6, ಮಂಗಳವಾರದಂದು ಏರಿಕೆ ಕಂಡಿದ್ದು ವಿಶೇಷ. ಆದರೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಈ ವರದಿಯ ವಿಷಯಗಳನ್ನು ತಳ್ಳಿಹಾಕಿದೆ.
ತನ್ನ ಬಾಧ್ಯತೆಗಳಿಗೆ ಅನುಗುಣವಾಗಿ ಈ ಹಿಂದೆಯೂ ಬಹಿರಂಗಪಡಿಸಿದ್ದೆವೆ, ಈಗಲೂ ಬಹಿರಂಗಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ರಿಲಾಯನ್ಸ್ ಗ್ರೂಪ್ಗೆ ಸೇರಿದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ತಿಳಿಸಿದೆ.
ಪೇಟಿಎಂ ಬ್ಯಾಂಕ್ಗೆ ನಿರ್ಬಂಧ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹಾಕಿದೆ. ಅಂದರೆ ಪೇಮೆಂಟ್ಸ್ ಬ್ಯಾಂಕ್ ವ್ಯವಹಾರ ಮುಗಿದಂತೆ. ಯಾವುದೇ ಹೊಸ ಡೆಪಾಸಿಟ್ ಅನ್ನು ಅದು ಪಡೆಯುವಂತಿಲ್ಲ. ಅದರಲ್ಲಿ ಖಾತೆ ಹೊಂದಿರುವವರು ತಮ್ಮ ಹಣವನ್ನು ಮರಳಿ ಪಡೆದುಕೊಳ್ಳಬಹುದು, ಅಥವಾ ಬಳಕೆ ಮಾಡಬಹುದು. ಫೆಬ್ರುವರಿ 29ರವರೆಗೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಗಡುವು ಕೊಡಲಾಗಿದೆ. ಪೇಟಿಎಂನ ಯಾವುದೇ ಚಟುವಟಿಕೆ ಅಥವಾ ವಹಿವಾಟಿನಲ್ಲಿ ಪೇಮೆಂಟ್ಸ್ ಬ್ಯಾಂಕ್ ಪಾತ್ರ ಇರುವಂತಿಲ್ಲ. ನೋಡಲ್ ಅಕೌಂಟ್ಗಳನ್ನು ಅಲ್ಲಿಂದ ತೆರವುಗೊಳಿಸಬೇಕು.
ಇದನ್ನೂ ಓದಿ: ಇಂಡಸ್ಇಂಡ್ ಷೇರು ಖರೀದಿಸಲು ಎಚ್ಡಿಎಫ್ಸಿಗೆ ಸಿಕ್ತು ಆರ್ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?
ಈಗ ಪೇಟಿಎಂ ತನ್ನ ಯುಪಿಐ ಮತ್ತು ವ್ಯಾಲಟ್ ಸೇವೆಗೆ ಬೇರೆ ಬ್ಯಾಂಕ್ ಜೊತೆ ಸಹಭಾಗಿತ್ವ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಬಳಿಕ ಪೇಮೆಂಟ್ಸ್ ಬ್ಯಾಂಕ್ ಬಿಟ್ಟರೆ ಪೇಟಿಎಂ ಉಳಿದೆಲ್ಲಾ ಚಟುವಟಿಕೆಗಳು ಮತ್ತು ಸೇವೆಗಳು ಯಥಾಪ್ರಕಾರ ಮುಂದುವರಿಯುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ