Gold Investment: ಸಾವರನ್ ಗೋಲ್ಡ್ ಬಾಂಡ್ ಫೆ. 12ರಿಂದ 16ರವರೆಗೆ; ಇದು ಈ ವರ್ಷದ ಕೊನೆಯ ಸರಣಿ
Sovereign Gold Bond 2023-24 Series IV: ಸಾವರನ್ ಗೋಲ್ಡ್ ಬಾಂಡ್ ಸ್ಕೀಮ್ನ 2023-24ರ ವರ್ಷದ ನಾಲ್ಕನೇ ಹಾಗು ಕೊನೆಯ ಸರಣಿ ಫೆ. 12ರಿಂದ 16ಕ್ಕೆ ಲಭ್ಯ ಇದೆ. ಒಬ್ಬ ವ್ಯಕ್ತಿ ಒಂದು ಗ್ರಾಮ್ನಿಂದ ಹಿಡಿದು 4 ಕಿಲೋ ಚಿನ್ನದವರೆಗೆ ಹೂಡಿಕೆಗೆ ಅವಕಾಸ ಇದೆ. ಎಂಟು ವರ್ಷಕ್ಕೆ ಮೆಚ್ಯೂರ್ ಆಗುವ ಗೋಲ್ಡ್ ಬಾಂಡ್ ಚಿನ್ನದ ಮಾರುಕಟ್ಟೆ ಬೆಲೆ ಆಧಾರಿತವಾಗಿ ಹೂಡಿಕೆಗೆ ರಿಟರ್ನ್ ಕೊಡುತ್ತದೆ.
ನವದೆಹಲಿ, ಫೆಬ್ರುವರಿ 6: ಭೌತಿಕ ಚಿನ್ನ ಖರೀದಿಸದೆಯೇ ಅದರ ಮೇಲೆ ಹೂಡಿಕೆಗೆ ಅವಕಾಶ ಕೊಡುವ ಸಾವರನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ (Sovereign Gold Bond) ನೀವಿನ್ನೂ ಹೂಡಿಕೆ ಮಾಡದೇ ಇದ್ದರೆ ಇಗೋ ಮತ್ತೆ ಬಂದಿದೆ ಅವಕಾಶ. 2023-24ರ ಹಣಕಾಸು ವರ್ಷದ ನಾಲ್ಕನೇ ಮತ್ತು ಕೊನೆಯ ಸಾವರನ್ ಗೋಲ್ಡ್ ಬಾಂಡ್ ಸರಣಿ 2024ರ ಫೆಬ್ರುವರಿ 12ಕ್ಕೆ ಆರಂಭವಾಗುತ್ತದೆ. ಫೆಬ್ರುವರಿ 16ರವರೆಗೆ, ಐದು ದಿನಗಳ ಕಾಲ ಇದು ಸಾರ್ವಜನಿಕರಿಗೆ ಸಬ್ಸ್ಕ್ರಿಪ್ಷನ್ಗೆ ತೆರೆದಿರುತ್ತದೆ. ಬಾಂಡ್ ಕಾಯ್ದಿರಿಸಿದ ಬಳಿಕ ಫೆಬ್ರುವರಿ 21ಕ್ಕೆ ಬಾಂಡ್ ವಿತರಣೆ ಆಗುತ್ತದೆ. ಆದರೆ, ಗೋಲ್ಡ್ ಬಾಂಡ್ನಲ್ಲಿ ಚಿನ್ನದ ಬೆಲೆಯನ್ನು ಇನ್ನೂ ನಿಗದಿ ಮಾಡಲಾಗಿಲ್ಲ. ಸಾಮಾನ್ಯವಾಗಿ ಸಬ್ಸ್ಕ್ರಿಪ್ಷನ್ಗೆ ಕೆಲ ದಿನಗಳ ಹಿಂದಿನ ಚಿನ್ನದ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಫೆಬ್ರುವರಿ 12ಕ್ಕೆ ಮುನ್ನ ಆರ್ಬಿಐ ಈ ಬೆಲೆಯನ್ನು ಬಹಿರಂಗಪಡಿಸಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಸಾವರನ್ ಗೋಲ್ಡ್ ಬಾಂಡ್ ಅನ್ನು ಆಫರ್ ಮಾಡುತ್ತದೆ. ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಗೋಲ್ಡ್ ಬಾಂಡ್ ವಿತರಣೆ ಮಾಡಬಹುದು. ಆದರೆ, ನಿಗದಿಪಡಿಸಿದ ದಿನಗಳಂದು ಮಾತ್ರ ಸಬ್ಸ್ಕ್ರಿಪ್ಷನ್ ಪಡೆಯಬಹುದು. ಸಾಮಾನ್ಯವಾಗಿ ಒಂದು ವರ್ಷದಲ್ಲಿ ನಾಲ್ಕರಿಂದ ಎಂಟು ಗೋಲ್ಡ್ ಬಾಂಡ್ ಸರಣಿ ಬಿಡುಗಡೆ ಮಾಡಬಹುದು.
ಸ್ಮಾಲ್ ಫೈನಾನ್ಸ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಮತ್ತು ಪೇಮೆಂಟ್ಸ್ ಬ್ಯಾಂಕ್ ಹೊರತಪಡಿಸಿ ಉಳಿದ ಶ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಪಡೆಯಬಹುದು. ಬಿಎಸ್ಇ ಮತ್ತು ಎನ್ಎಸ್ಇ ಷೇರು ವಿನಿಮಯ ಕೇಂದ್ರಗಳಲ್ಲಿ ಇವನ್ನು ಖರೀದಿಸಬಹುದು. ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್, ಕ್ಲಿಯರಿಂಗ್ ಕಾರ್ಪೊರೇಶನ್ (ಸಿಸಿಐಎಲ್) ನಲ್ಲಿ ಗೋಲ್ಡ್ ಬಾಂಡ್ ಪಡೆಯಬಹುದು.
ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನ ಲಾಭ ತಿಳಿಯಿರಿ
ಏನಿದು ಸಾವರನ್ ಗೋಲ್ಡ್ ಬಾಂಡ್ ಸ್ಕೀಮ್?
ಇದು ಎಂಟು ವರ್ಷ ಅವಧಿಯ ಹೂಡಿಕೆ ಯೋಜನೆಯಾಗಿದೆ. ಇವತ್ತಿನ ಚಿನ್ನದ ಮಾರುಕಟ್ಟೆ ಬೆಲೆಯಲ್ಲಿ ಒಂದರಿಂದ 4 ಕಿಲೋ ತೂಕದ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಇದಕ್ಕೆ ಪ್ರತಿಯಾಗಿ ಚಿನ್ನದ ಬದಲು ಬಾಂಡ್ ನೀಡಲಾಗುತ್ತದೆ. ಏಳು ವರ್ಷಗಳ ಬಳಿಕ ಅಗಿನ ಚಿನ್ನದ ಮಾರುಕಟ್ಟೆ ಬೆಲೆ ಪ್ರಕಾರ ಹಣ ನಿಮ್ಮ ಕೈ ಸೇರುತ್ತದೆ.
ಉದಾಹರಣೆಗೆ, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ ಇವತ್ತು 6,300 ರೂ ಇದೆ. ಇದೇ ಬೆಲೆಯನ್ನು ನಿಗದಿ ಮಾಡಿದ್ದು, ನೀವು 10 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರೆಂದರೆ 63,000 ರೂ ಆಗುತ್ತದೆ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ ಗ್ರಾಮ್ಗೆ 12,000 ರೂ ಆಗಿದ್ದೇ ಆದಲ್ಲಿ ನಿಮ್ಮ 63,000 ರೂ ಹೂಡಿಕೆಯು 1,20,000 ರೂ ಆಗಿರುತ್ತದೆ. ಚಿನ್ನದ ಬದಲು 1.2 ಲಕ್ಷ ರೂ ನಿಮ್ಮ ಕೈಸೇರುತ್ತದೆ.
ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 4 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇವತ್ತಿನ ಬೆಲೆಯಲ್ಲಿ 25 ಲಕ್ಷ ರೂವರೆಗೆ ಹೂಡಿಕೆ ಸಾಧ್ಯವಾಗಬಲ್ಲುದು.
ಇದನ್ನೂ ಓದಿ: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್
ಸಾವರನ್ ಗೋಲ್ಡ್ ಬಾಂಡ್ನಿಂದ ಏನು ಪ್ರಯೋಜನ?
- ಭೌತಿಕ ಚಿನ್ನ ಪಡೆದರೆ ರಿಸ್ಕ್ ಎನಿಸಬಹುದು. ಈ ರೀತಿಯ ಬಾಂಡ್ಗಳು ಬಹಳ ಸುರಕ್ಷಿತವಾಗಿರುತ್ತವೆ.
- ನಿಮ್ಮ ಹೂಡಿಕೆಯ ಮೇಲೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ಸಿಗುತ್ತದೆ.
- ಒಬ್ಬ ವ್ಯಕ್ತಿ 1 ಗ್ರಾಮ್ನಿಂದ ಹಿಡಿದು 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಒಂದು ವರ್ಷದಲ್ಲಿ ಸುಮಾರು 25 ಲಕ್ಷ ರೂವರೆಗೆ ಹೂಡಿಕೆ ಸಾಧ್ಯವಾಗುತ್ತದೆ.
- ಒಮ್ಮೆಗೇ ಹೆಚ್ಚು ಹೂಡಿಕೆ ಆಗದೇ ಹೋದರೆ ಒಂದು ವರ್ಷದಲ್ಲಿ ಬರುವ ವಿವಿಧ ಸರಣಿಗಳಲ್ಲಿ ಕೈಲಾದಷ್ಟು ಹೂಡಿಕೆ ಮಾಡಲು ಅವಕಾಶ ಇರುತ್ತದೆ.
- ನೀವು ಎಂಟು ವರ್ಷದವರೆಗೆ ಕಾಯಲು ಆಗುವುದಿಲ್ಲ ಎಂದರೆ ಐದು ವರ್ಷದ ಬಳಿಕ ಹೂಡಿಕೆ ಹಿಂಪಡೆಯುವ ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ