HDFC: ಇಂಡಸ್​ಇಂಡ್ ಷೇರು ಖರೀದಿಸಲು ಎಚ್​ಡಿಎಫ್​ಸಿಗೆ ಸಿಕ್ತು ಆರ್​ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?

HDFC Bank and IndusInd Bank: ಹಿಂದೂಜಾ ಗ್ರೂಪ್​ನ ಇಂಡಸ್​ಇಂಡ್ ಬ್ಯಾಂಕ್​ನ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್​ಡಿಎಫ್​ಸಿಗೆ ಆರ್​ಬಿಐ ಅನುಮತಿಸಿದೆ. ಎಚ್​ಡಿಎಫ್​ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50 ಮೀರಬಾರದು ಎಂದು ಆರ್​ಬಿಐ ಷರತ್ತು ಹಾಕಿದೆ. ಅನುಮತಿ ಸಿಕ್ಕ ಬೆನ್ನಲ್ಲೇ ಫೆಬ್ರುವರಿ 6ರ ಬೆಳಗಿನ ಷೇರುಪೇಟೆ ವಹಿವಾಟಿನಲ್ಲಿ ಎಚ್​ಡಿಎಫ್​ಸಿ ಮತ್ತು ಇಂಡಸ್​ಇಂಡ್ ಬ್ಯಾಂಕುಗಳ ಷೇರುಗಳು ನೀರಸ ಅರಂಭ ಪಡೆದಿವೆ.

HDFC: ಇಂಡಸ್​ಇಂಡ್ ಷೇರು ಖರೀದಿಸಲು ಎಚ್​ಡಿಎಫ್​ಸಿಗೆ ಸಿಕ್ತು ಆರ್​ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?
ಎಚ್​ಡಿಎಫ್​ಸಿ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2024 | 10:51 AM

ನವದೆಹಲಿ, ಫೆಬ್ರುವರಿ 6: ಇಂಡಸ್​ಇಂಡ್ ಬ್ಯಾಂಕ್​ನ ಶೇ. 9.50ರಷ್ಟು ಷೇರುಪಾಲನ್ನು ಖರೀದಿಸಲು ಎಚ್​ಡಿಎಫ್​ಸಿಗೆ ಆರ್​ಬಿಐ ಅನುಮತಿಸಿರುವ ಸುದ್ದಿ ಬಂದಿದೆ. ಇದರ ಬೆನ್ನಲ್ಲೇ ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಇಂಡಸ್​ಇಂಡ್ ಬ್ಯಾಂಕ್​ನ (IndusInd Bank) ಷೇರುಗಳು ಇವತ್ತಿನ (ಫೆ. 6) ಬೆಳಗಿನ ವಹಿವಾಟಿನಲ್ಲಿ ನೀರಸ ಆರಂಭ ಕಂಡಿವೆ. ಬೆಳಗ್ಗೆ 10 ಗಂಟೆಯ ವಹಿವಾಟಿನಲ್ಲಿ ಎರಡೂ ಷೇರುಗಳು ಶೇ. 0.50ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಶೇ. 9.50ಯಷ್ಟು ಪೇಯ್ಡ್ ಅಪ್ ಷೇರು ಮೊತ್ತ (Paid-up share capital) ಅಥವಾ ವೋಟಿಂಗ್ ರೈಟ್ಸ್ ಪಡೆಯಲು ಅನುಮತಿ ನೀಡಬೇಕೆಂದು ಎಚ್​ಡಿಎಫ್​ಸಿ ಸಲ್ಲಿಸಿದ ಅರ್ಜಿಗೆ ಆರ್​ಬಿಐ ಫೆ. 5ರಂದು ಸಮ್ಮತಿ ನೀಡಿದೆ. ಈ ವಿಷಯವನ್ನು ಇಂಡಸ್​ಇಂಡ್ ಬ್ಯಾಂಕ್ ಷೇರುವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ (exchange filing) ತಿಳಿಸಿದೆ.

ಹೂಡಿಕೆದಾರರು ಷೇರನ್ನು ನೇರವಾಗಿ ಕಂಪನಿಯಿಂದ ಖರೀದಿಸಿದರೆ, ಹಣವು ಕಂಪನಿಗೆ ಸಂದಾಯವಾಗುತ್ತದೆ. ಅಂಥ ಖರೀದಿಗೆ ಪೇಯ್ಡ್ ಅಪ್ ಕ್ಯಾಪಿಟಲ್ ಎನ್ನುತ್ತಾರೆ. ಐಪಿಒ ಇದಕ್ಕೆ ಉದಾಹರಣೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರು ಖರೀದಿಸಿದರೆ ಆ ಹಣ ಕಂಪನಿಗೆ ಹೋಗುವುದಿಲ್ಲ. ಹೀಗಾಗಿ ಅದು ಪೇಯ್ಡ್ ಅಪ್ ಕ್ಯಾಪಿಟಲ್ ಎನಿಸುವುದಿಲ್ಲ.

ಎಚ್​ಡಿಎಫ್​ಸಿ ಬ್ಯಾಂಕ್ ಒಂದು ವರ್ಷದ ಒಳಗೆ ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಪ್ರಮುಖ ಷೇರುಪಾಲನ್ನು ಖರೀದಿಸಬೇಕು. ಇಲ್ಲದಿದ್ದರೆ ಈ ಅನುಮೋದನೆ ಅನೂರ್ಜಿತಗೊಳ್ಳುತ್ತದೆ ಎಂದು ಆರ್​ಬಿಐ ನಿಬಂಧನೆ ಹಾಕಿದೆ.

ಇದನ್ನೂ ಓದಿ: ಡೀಪ್​ಫೇಕ್ ಆಟ; ನಕಲಿ ಸಿಎಫ್​ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು

ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಎಚ್​ಡಿಎಫ್​ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50ಕ್ಕಿಂತ ಹೆಚ್ಚಿರಬಾರದು, ಅಥವಾ ವೋಟಿಂಗ್ ರೈಟ್ಸ್ ಅನ್ನು ಮೀರಬಾರದು ಎಂದು ಆರ್​ಬಿಐ ಷರತ್ತು ಹಾಕಿದೆ. ಅಗ್ರಿಗೇಟ್ ಹೋಲ್ಡಿಂಗ್ ಎಂದರೆ ಎಚ್​ಡಿಎಫ್​ಸಿ ಗ್ರೂಪ್​ನ ಎಲ್ಲಾ ಸಂಸ್ಥೆಗಳೂ ಸೇರಿ ಇಂಡಸ್​ಇಂಡ್​ನಲ್ಲಿ ಹೊಂದಿರುವ ಒಟ್ಟೂ ಷೇರುಪಾಲು. ಈ ಒಟ್ಟೂ ಷೇರುಪಾಲು ಶೇ. 5ಕ್ಕಿಂತ ಕಡಿಮೆ ಆಗಿ ಹೋಗಿದ್ದು, ಅದನ್ನು ಶೇ. 5 ಅಥವಾ ಅದಕ್ಕಿಂತ ಮೇಲೆ ಹೆಚ್ಚಿಸಲು ಎಚ್​ಡಿಎಫ್​ಸಿ ಮತ್ತೆ ಆರ್​ಬಿಐನ ಅನುಮೋದನೆ ಪಡೆಯಬೇಕಾಗುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್ ಸ್ಪಷ್ಟನೆ

ಐಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಆರ್​ಬಿಐ ಅನುಮತಿ ನೀಡಿರುವ ಸುದ್ದಿಗೆ ಎಚ್​ಡಿಎಫ್​ಸಿ ಬ್ಯಾಂಕ್ ಪ್ರತಿಕ್ರಿಯಿಸಿದೆ. ಇಲ್ಲಿ ಅನುಮೋದನೆ ನೀಡಲಾಗಿರುವುದು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಅಲ್ಲ, ಎಚ್​ಡಿಎಫ್​ಸಿ ಗ್ರೂಪ್​ಗೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಪಾಲು ಖರೀದಿಸಲು ಆರ್​ಬಿಐ ನೀಡಿರುವ ಅನುಮೋದನೆಯು ಎಚ್​ಡಿಎಫ್​ಸಿ ಗ್ರೂಪ್​ನ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಇನ್ಷೂರೆನ್ಸ್ ವಿಭಾಗಗಳಿಗೆ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು

ಹಿಂದೂಜಾ ಗ್ರೂಪ್​ಗೆ ಸೇರಿದ ಇಂಡಸ್​ಇಂಡ್ ಬ್ಯಾಂಕ್ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ 2,297.8 ಕೋಟಿ ರೂ ನಿವ್ವಳ ಲಾಭ ಪಡೆದಿದೆ. ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಆ ಬ್ಯಾಂಕ್​ನ ಲಾಭ 6,628 ಕೋಟಿ ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ