International Bullion Exchange: ಭಾರತದ ಮೊದಲ ಜಾಗತಿಕ ಚಿನ್ನ-ಬೆಳ್ಳಿ ವಿನಿಮಯ ಕೇಂದ್ರಕ್ಕೆ ಇಂದು ನರೇಂದ್ರ ಮೋದಿ ಚಾಲನೆ
IIBX: ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ ಸ್ಥಾಪನೆಯಾಗಿರುವ ಈ ವಿನಿಮಯ ಕೇಂದ್ರವು ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ವಹಿವಾಟಿನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಲಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭಾರತದ ಮೊದಲ ‘ಜಾಗತಿಕ ಚಿನ್ನ ವಿನಿಮಯ ಕೇಂದ್ರ’ವನ್ನು (India International Bullion Exchange – IIBX) ಉದ್ಘಾಟಿಸಲಿದ್ದಾರೆ. ಗುಜರಾತ್ ರಾಜಧಾನಿ ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ (Gujarat International Finance Tec-City – GIFT) ಸ್ಥಾಪನೆಯಾಗಿರುವ ಈ ವಿನಿಮಯ ಕೇಂದ್ರವು ಭಾರತದ ಹಣಕಾಸು ವಿದ್ಯಮಾನದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳಿಗೂ ಕಾರಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ.
ಈ ವಿನಿಮಯ ಕೇಂದ್ರದ ಮೂಲಕ ಚಿನ್ನ ಬೆಲೆ ಮತ್ತು ಆರ್ಥಿಕ ಮೌಲ್ಯ ಮತ್ತಷ್ಟು ವೃದ್ಧಿಯಾಗಲಿದೆ. ಉತ್ತಮ ಗುಣಮಟ್ಟದ ಚಿನ್ನವನ್ನು ನಿಖರ ಬೆಲೆಯಲ್ಲಿ ಒದಗಿಸುವ ಜವಾಬ್ದಾರಿಯನ್ನು ಈ ಕೇಂದ್ರ ಹೊರಲಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರ ಪ್ರಾಧಿಕಾರ (International Financial Service Centres Authority – IFSC) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಚಿನ್ನ ವಿನಿಮಯ ಕೇಂದ್ರ ಸ್ಥಾಪನೆಯಾಗಬೇಕು ಎನ್ನುವ ಹೂಡಿಕೆದಾರರ ನಿರೀಕ್ಷೆ ಐಐಬಿಎಕ್ಸ್ ಮೂಲಕ ಸಾಕಾರಗೊಳ್ಳುತ್ತಿದೆ. ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಲವು ವಿನಿಮಯ ಕೇಂದ್ರಗಳು ಮತ್ತು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಾಂಗ್ಕಾಂಗ್, ಸಿಂಗಾಪುರ, ದುಬೈ, ಲಂಡನ್ ಮತ್ತು ನ್ಯೂಯಾರ್ಕ್ ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಹಲವು ಹಣಕಾಸು ಸೇವೆಗಳನ್ನು ಐಐಬಿಎಕ್ಸ್ ಉತ್ತಮ ಬೆಲೆಗೆ ಒದಗಿಸಲಿದೆ. ಹಲವು ರೀತಿಯ ಹೂಡಿಕೆ ಉತ್ಪನ್ನಗಳು ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸಲೂ ಐಐಬಿಎಕ್ಸ್ ಸಜ್ಜಾಗಿದೆ.
ಚಿನ್ನ-ಬೆಳ್ಳಿಯ ಧಾರಣೆ ತಿಳಿಸಲು ಇಲ್ಲಿ ಕ್ಲಿಕ್ ಮಾಡಿ
ಮೊದಲ ದಿನವಾದ ಇಂದು 995ರಷ್ಟು ಪರಿಶುದ್ಧತೆಯ 1 ಕೆಜಿ ಚಿನ್ನ ಮತ್ತು 999 ಪರಿಶುದ್ಧತೆಯ 100 ಗ್ರಾಮ್ ಚಿನ್ನದ ವಹಿವಾಟು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ವಿನಿಮಯ ಕೇಂದ್ರವು ವಹಿವಾಟು ನಡೆಯುವ ದಿನವೇ ಹಣಕಾಸು ಮೌಲ್ಯ ಇತ್ಯರ್ಥ ಪಡಿಸುವ (T+0) ಸೌಲಭ್ಯವನ್ನೂ ಒದಗಿಸುವ ಸಾಧ್ಯತೆಯಿದೆ. ಐಐಬಿಎಕ್ಸ್ ಮೂಲಕ ನಡೆಯುವ ಲಿಸ್ಟಿಂಗ್, ಟ್ರೇಡ್ ಮತ್ತು ಸೆಟ್ಲ್ಮೆಂಟ್ ಅಮೆರಿಕದ ಡಾಲರ್ ಮೌಲ್ಯದಲ್ಲಿ ಇರಲಿದೆ.
ಬುಲಿಯನ್ ಎಂದರೇನು?
ಪರಿಶುದ್ಧ ಚಿನ್ನ ಅಥವಾ ಬೆಳ್ಳಿಯನ್ನು ಬಾರ್, ಗಟ್ಟಿ ಅಥವಾ ನಾಣ್ಯಗಳ ರೂಪದಲ್ಲಿ ಸಂಗ್ರಹಹಿಸುವುದನ್ನು ಬುಲಿಯನ್ ಎನ್ನುತ್ತಾರೆ. ಜನಸಾಮಾನ್ಯರು ಭೌತಿಕ ಚಿನ್ನ-ಬೆಳ್ಳಿಯನ್ನು ಆಪದ್ಧನ ಎನ್ನುವ ಕಾರಣಕ್ಕೆ ಸಂಗ್ರಹಿಸಿಡುತ್ತಾರೆ. ರಿಸರ್ವ್ ಬ್ಯಾಂಕ್ ಕರೆನ್ಸಿ ಮೌಲ್ಯ ಕಾಪಾಡುವ ದೃಷ್ಟಿಯಿಂದ ಮತ್ತು ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ದೃಷ್ಟಿಯಿಂದ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡುವುದು ವಾಡಿಕೆ.
ಪ್ರಮುಖ ಬೆಳವಣಿಗೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಬಜೆಟ್ನಲ್ಲಿ ಐಐಬಿಎಕ್ಸ್ ಕಾರ್ಯಾರಂಭ ಮಾಡುವುದನ್ನು ಘೋಷಿಸಿದ್ದರು. ‘ಜಾಗತಿಕ ಹಣಕಾಸು ಸೇವೆಗಳ ಕೇಂದ್ರ’ವು (ಐಎಫ್ಎಸ್ಸಿಎ) ಈ ವಿನಿಮಯ ಕೇಂದ್ರವನ್ನು ನಿಯಂತ್ರಿಸಲಿದೆ. ಮುಂದಿನ ದಿನಗಳಲ್ಲಿ ವಿದೇಶಗಳಿಂದ ಚಿನ್ನ-ಬೆಳ್ಳಿ ಆಮದು ಮಾಡಿಕೊಳ್ಳಲು ಐಐಬಿಎಕ್ಸ್ ಅನ್ನೇ ಗೇಟ್ವೇ ಆಗಿ ಬಳಸಬೇಕು ಎಂದು ಸರ್ಕಾರವು ತನ್ನ ಅಧಿಸೂಚನೆಯಲ್ಲಿ ಸೂಚಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ‘ಅರ್ಹ ಒಡವೆ ತಯಾರಕರು’ (Qualified Jewellers) ಐಐಬಿಎಕ್ಸ್ ಮೂಲಕವೇ ಚಿನ್ನ ಆಮದು ಮಾಡಿಕೊಳ್ಳಲಿದ್ದಾರೆ. ಇದಕ್ಕೆ ಬೇಕಿರುವ ಅಗತ್ಯ ಹಣಕಾಸು ಪಾವತಿ ನಿಯಮಾವಳಿಗಳನ್ನು ಆರ್ಬಿಐ ರೂಪಿಸಿದೆ.
Published On - 8:38 am, Fri, 29 July 22