24 ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರಿಂದ ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ

|

Updated on: Nov 20, 2024 | 4:43 PM

Indian domestic air passenger traffic: ನವೆಂಬರ್ 17, ಭಾನುವಾರ ಒಂದೇ ದಿನದಂದು ಭಾರತದೊಳಗೆ 5 ಲಕ್ಷಕ್ಕೂ ಹೆಚ್ಚು ಜನರು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಭಾರತದ ವೈಮಾನಿಕ ಇತಿಹಾಸದಲ್ಲೇ ಯಾವುದೇ ದಿನದಲ್ಲೂ 5 ಲಕ್ಷ ಜನರು ವಿಮಾನ ಪ್ರಯಾಣಿಸಿರಲಿಲ್ಲ. ಆ ಮಟ್ಟಿಗೆ ದಾಖಲೆ ಎನಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ಈ ಮಾಹಿತಿ ತಿಳಿದುಬಂದಿದೆ.

24 ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರಿಂದ ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ
ಫ್ಲೈಟ್
Follow us on

ನವದೆಹಲಿ, ನವೆಂಬರ್ 20: ಭಾರತದಲ್ಲಿ ವಿಮಾನ ಪ್ರಯಾಣಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುವುದಕ್ಕೆ ಸಾಕ್ಷ್ಯ ಎಂಬಂತೆ ದಾಖಲೆ ಸಂಖ್ಯೆಯಲ್ಲಿ ಜನರು ವಿಮಾನ ಪ್ರಯಾಣ ಮಾಡಿರುವ ಮಾಹಿತಿ ತಿಳಿದುಬಂದಿದೆ. ನವೆಂಬರ್ 17, ಭಾನುವಾರದಂದು ಒಂದೇ ದಿನದಲ್ಲಿ ಭಾರತದೊಳಗೆ ವಿಮಾನಗಳಲ್ಲಿ ಹಾರಾಡಿದವರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ವಿವಿಧ ವಿಮಾನಗಳಲ್ಲಿ ಅಂದು 5,05,412 ಜನರು ಪ್ರಯಾಣಿಸಿದ್ದಾರೆ. ಹಾಗೆಯೇ, ಭಾನುವಾರ 3,173 ಫ್ಲೈಟ್​ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿವೆ.

ಭಾರತದಲ್ಲಿ ಒಂದು ದಿನದ ಲೆಕ್ಕ ತೆಗೆದುಕೊಂಡರೆ 5 ಲಕ್ಷ ಜನರು ವಿಮಾನಗಳಲ್ಲಿ ಪ್ರಯಾಣಿಸಿರುವುದು ಅದೇ ಮೊದಲು. ಹಬ್ಬದ ಸೀಸನ್ ಇದ್ದ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ ವಿಮಾನ ಪ್ರಯಾಣಿಕರ ಸಂಖ್ಯೆ ಏರಿತ್ತು. ನವೆಂಬರ್ 17, ಭಾನುವಾರವಾದ್ದರಿಂದಲೂ ಅತ್ಯಧಿಕ ಪ್ರಯಾಣಿಕರು ಕಂಡುಬಂದಿದ್ದಿರಬಹುದು.

ಇದನ್ನೂ ಓದಿ: ಭಾರತದ ಮೊದಲ ಮೊಬೈಲ್ ಕರೆ ಯಾರು ಮಾಡಿದ್ದು, ಯಾವ ಹ್ಯಾಂಡ್​ಸೆಟ್, ಆಗ ನಿಮಿಷಕ್ಕೆ ಎಷ್ಟು ದುಡ್ಡಿತ್ತು, ಇಲ್ಲಿದೆ ಡೀಟೇಲ್ಸ್

ನವೆಂಬರ್ 17, ಭಾನುವಾರದ ವಿಶೇಷತೆ ಎಂದರೆ, ಅಂದು ಚಾಲನೆಯಲ್ಲಿದ್ದ 3,173 ಫ್ಲೈಟ್​​ಗಳಲ್ಲಿ ಸರಾಸರಿಯಾಗಿ ಶೇ. 90ರಷ್ಟು ಸೀಟುಗಳು ಭರ್ತಿಯಾಗಿದ್ದವು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಟೈಮ್ ಪಾಲಿಸಲು ತಡವರಿಸಿದ ವಿಮಾನಗಳು…

ಸಚಿವಾಲಯದಿಂದ ಬಂದ ಇನ್ನೊಂದು ಕುತೂಹಲದ ಮಾಹಿತಿ ಎಂದರೆ ವಿಮಾನಗಳ ಸಮಯಪಾಲನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ವಿಮಾನಗಳು ಸರಿಯಾದ ಸಮಯಕ್ಕೆ ಹೊರಡುವುದು ಅಥವಾ ಸರಿಯಾದ ಸಮಯಕ್ಕೆ ಗಮ್ಯಸ್ಥಾನ ತಲುಪುವುದು ವಿಳಂಬವಾಗಿದೆಯಂತೆ.

ಇದನ್ನೂ ಓದಿ: ಭಾರತದ ಬಾಹ್ಯಾಕಾಶ ಉದ್ಯಮದ ಭವಿಷ್ಯದ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದ ಇಸ್ರೋ ಮುಖ್ಯಸ್ಥ ಸೋಮನಾಥ್

ವಿಮಾನ ಸಾಗಾಟದ ಸಮಯಪಾಲನೆಯನ್ನು ಆನ್ ಟೈಮ್ ಪರ್ಫಾರ್ಮೆನ್ಸ್ ಅಥವಾ ಒಟಿಪಿ ಎಂದು ಕರೆಯಲಾಗುತ್ತದೆ. ಇಂಡಿಗೋದ ಒಟಿಪಿ ಶೇ. 74.2ರಷ್ಟಿದೆ. ಅಂದರೆ ನೂರು ಫ್ಲೈಟ್​ಗಳಲ್ಲಿ 74.2 ಬಾರಿ ಈ ವಿಮಾನ ಸಕಾಲಕ್ಕೆ ಹಾರಾಟ ನಡೆಸಿದೆ.

ಇನ್ನು, ಸ್ಪೈಸ್​ಜೆಟ್​ನ ಒಟಿಪಿ ಶೇ. 66.1ರಷ್ಟಿದ್ದರೆ, ಏರ್ ಇಂಡಿಯಾದ ಸಾಧನೆ ಕಳಪೆಯಾಗಿದೆ. ಇದರ ಒಟಿಪಿ ಶೇ. 57.1ರಷ್ಟಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ