ನವದೆಹಲಿ, ಜುಲೈ 21: ಬ್ಯಾಂಕ್ ಉದ್ಯೋಗಿಗಳ ಬಹುನಿರೀಕ್ಷಿತ ಬೇಡಿಕೆಯಾದ ವಾರಕ್ಕೆ ಎರಡು ದಿನ ರಜೆ ಸೌಲಭ್ಯ (2 Weekly Holidays) ಈಡೇರುವ ಕಾಲ ಸಮೀಪಿಸಿದೆ. ವಾರಕ್ಕೆ ಐದು ದಿನ ಕೆಲಸ, 2 ವೀಕಾಫ್ ಸೌಲಭ್ಯ ಮತ್ತಿತರ ಕೆಲ ವಿಚಾರಗಳ ಬಗ್ಗೆ ಭಾರತೀಯ ಬ್ಯಾಂಕಿಂಗ್ ಸಂಸ್ಥೆ (IBA- Indian Banking Association) ಜುಲೈ 28ರಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್ ಯೂನಿಯನ್ಗಳು ಮತ್ತು ಐಬಿಎ ಮಧ್ಯೆ ಜುಲೈ 28ರಂದು ಸಭೆ ನಡೆಯಲಿದೆ. ಈ ವೇಳೆ ವಾರಕ್ಕೆ ಐದು ದಿನ ಕೆಲಸ, ಸಂಬಳ ಹೆಚ್ಚಳ, ನಿವೃತ್ತರಿಗೆ ಗ್ರೂಪ್ ಇನ್ಷೂರೆನ್ಸ್ ಮೊದಲಾದ ಸಂಗತಿಗಳನ್ನು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (UFBU) ಸಂಘಟನೆ ಬ್ಯಾಂಕ್ ಕಾರ್ಯದಿನಗಳ ವಿಚಾರದ ಬಗ್ಗೆ ಈ ಹಿಂದೆ ಐಬಿಎ ಮಾತುಕತೆ ನಡೆಸಿದ್ದಾಗಿ ಮೊನ್ನೆ (ಜುಲೈ 19) ಹೇಳಿತ್ತು. ಬ್ಯಾಂಕ್ನ ವಾರದ ಕಾರ್ಯದಿನಗಳನ್ನು ಐದಕ್ಕೆ ಇಳಿಸುವ ವಿಚಾರವನ್ನು ಪರಿಗಣಿಸಿ, ಸಂಬಂಧಿತರೊಂದಿಗೆ ಮಾತನಾಡುತ್ತಿರುವುದಾಗಿ ಐಬಿಎ ತನಗೆ ತಿಳಿಸಿದ್ದಾಗಿ ಬ್ಯಾಂಕುಗಳ ವೇದಿಕೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: SBI FD Scheme: ಎಸ್ಬಿಐ ವೀ ಕೇರ್, ಹಣ ಡಬಲ್ ಮಾಡಬಲ್ಲ ಸರ್ಕಾರಿ ಬ್ಯಾಂಕ್ ಎಫ್ಡಿ ಸ್ಕೀಮ್
ಸದ್ಯ, ಬ್ಯಾಂಕುಗಳಿಗೆ ವಾರಕ್ಕೊಮ್ಮೆ ರಜೆ ಇದೆ. ತಿಂಗಳಿಗೆ ಎರಡು ಶನಿವಾರಗಳೂ ರಜೆ ಇವೆ. ಅಲ್ಲಿಗೆ ಒಂದು ತಿಂಗಳಲ್ಲಿ ಬ್ಯಾಂಕುಗಳಿಗೆ ವಾರದ ರಜೆಗಳ ಸಂಖ್ಯೆ 6ರಿಂದ 7 ಆಗುತ್ತದೆ. ಈಗ ವಾರಕ್ಕೆ ಎರಡು ಆಫ್ ಸಿಕ್ಕರೆ ಗ್ಯಾರಂಟಿ ರಜೆಯ ಸಂಖ್ಯೆ 8ರಿಂದ 10ಕ್ಕೆ ಹೋಗುತ್ತದೆ.
ಬ್ಯಾಂಕ್ ಉದ್ಯೋಗಿಗಳ ಎರಡು ವೀಕಾಫ್ ಬೇಡಿಕೆಗೆ ತನ್ನದೇನೂ ಅಭ್ಯಂತರ ಇಲ್ಲ ಎಂದು ಹಣಕಾಸ ಸಚಿವಾಲಯ ಹೇಳಿದೆ. ಆದರೆ, ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ವೀಕಾಫ್ ಕೊಡುವುದಾದರೆ ದಿನದಲ್ಲಿ ಅವರ ಕೆಲಸದ ಅವಧಿಯನ್ನು 40 ನಿಮಿಷಗಳಷ್ಟು ವಿಸ್ತರಿಸಿ ಎನ್ನುವಂತಹ ಸಲಹೆಯೊಂದನ್ನು ಸರ್ಕಾರಕ್ಕೆ ಐಬಿಎ ಕೊಟ್ಟಿರುವುದು ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ