ನವದೆಹಲಿ: ಫೋರ್ಬ್ಸ್ (Forbes) ನಿಯತಕಾಲಿಕೆಯು 2022ನೇ ಸಾಲಿನ ಭಾರತದ 100 ಮಂದಿ ಶ್ರೀಮಂತರ (Richest Indians) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಶ್ರೀಮಂತ ಭಾರತೀಯರ ಆಸ್ತಿಯ ಒಟ್ಟು ಮೌಲ್ಯ 25 ಶತಕೋಟಿ ಡಾಲರ್ನಿಂದ 800 ಶತಕೋಟಿ ಡಾಲರ್ಗೆ ಹೆಚ್ಚಳವಾಗಿದೆ. ಷೇರುಮಾರುಕಟ್ಟೆಯಲ್ಲಿ ಅನಿಶ್ಚಿತತೆ, ರೂಪಾಯಿ ಮೌಲ್ಯ ಕುಸಿತದ ಹೊರತಾಗಿಯೂ ಭಾರತದ ಶ್ರೀಮಂತರ ಆಸ್ತಿ ಮೌಲ್ಯ ಹೆಚ್ಚಾಗಿದೆ. ಉದ್ಯಮಿ ಗೌತಮ್ ಅದಾನಿ (Gautam Adani) ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೆ, ಮುಕೇಶ್ ಅಂಬಾನಿ (Mukesh Ambani) ಎರಡನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಅವರು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಇದೇ ಮೊದಲಾಗಿದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಭಾರತದ 10 ಮಂದಿ ಶ್ರೀಮಂತ ಉದ್ಯಮಿಗಳ ಒಟ್ಟು ಆಸ್ತಿ ಮೌಲ್ಯ 385 ಶತಕೋಟಿ ಡಾಲರ್ ಆಗಿದೆ. ಅತಿ ಶ್ರೀಮಂತ ವ್ಯಕ್ತಿಯ ಆಸ್ತಿ ಮೌಲ್ಯ 150 ಶತಕೋಟಿ ಡಾಲರ್ ಆಗಿದ್ದರೆ ಅತಿ ಶ್ರೀಮಂತ ಮಹಿಳೆಯ ಆಸ್ತಿ ಮೌಲ್ಯ 16.4 ಶತಕೋಟಿ ಡಾಲರ್ ಆಗಿದೆ. ಭಾರತದ 100 ಮಂದಿ ಶ್ರೀಮಂತರ ಫೋರ್ಬ್ಸ್ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: India’s Richest People 2021: ಫೋರ್ಬ್ಸ್ ಸಿರಿವಂತರ ಪಟ್ಟಿ 2021; ಭಾರತದ ಶ್ರೀಮಂತ ವ್ಯಕ್ತಿಗಳಿವರು
ಟಾಪ್ 10 ಶ್ರೀಮಂತರ ಪಟ್ಟಿ ಹೀಗಿದೆ;
ಗೌತಮ್ ಅದಾನಿ
12,11,460.11 ಕೋಟಿ ರೂ. ಮೌಲ್ಯದ ಅದಾನಿ ಗ್ರೂಪ್ನ ಅಧ್ಯಕ್ಷ. 2021ಕ್ಕೆ ಹೋಲಿಸಿದರೆ ಇವರ ಸಂಪತ್ತಿನ ಮೌಲ್ಯದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಫೋರ್ಬ್ಸ್ ನಿಯತಕಾಲಿಕೆಯ ಭಾರತದ 100 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಮುಕೇಶ್ ಅಂಬಾನಿ
ಇವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ. ಕಂಪನಿಯ ಮೌಲ್ಯ 7,10,723.26 ಕೋಟಿ ರೂ. ಆಗಿದೆ. 2013ರ ನಂತರ ಈವರೆಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು. ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ರಾಧಾಕೃಷ್ಣನ್ ದಮನಿ
2,22,908.66 ಕೋಟಿ ರೂ. ಮೌಲ್ಯದ ಡಿಮಾರ್ಟ್ನ ಮಾಲೀಕರಾಗಿದ್ದಾರೆ ರಾಧಾಕೃಷ್ಣನ್ ದಮನಿ.
ಸೈರಸ್ ಪೂನವಾಲ
ಇವರು ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ಸೀರಂ ಇನ್ಸ್ಟಿಟ್ಯೂಟ್ ಇಂಡಿಯಾದ ಅಧ್ಯಕ್ಷ. ಕಂಪನಿಯು 1,73,642.62 ಕೋಟಿ ರೂ. ಮೌಲ್ಯ ಹೊಂದಿದೆ.
ಶಿವ ನಡಾರ್
ಇವರು ಎಚ್ಸಿಎಲ್ ಟೆಕ್ನಾಲಜೀಸ್ನ ಚೇರ್ಮನ್. ಕಂಪನಿಯು 1,72,834.97 ಕೋಟಿ ರೂ. ಮೌಲ್ಯ ಹೊಂದಿದೆ.
ಸಾವಿತ್ರಿ ಜಿಂದಾಲ್
1,32,452.97 ಕೋಟಿ ರೂ. ಮೌಲ್ಯ ಹೊಂದಿರುವ ಒ.ಪಿ.ಜಿಂದಾಲ್ ಗ್ರೂಪ್ನ ಅಧ್ಯಕ್ಷೆ. ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆಯಾಗಿದ್ದಾರೆ.
ದಿಲೀಪ್ ಶಾಂಘ್ವಿ
ಇವರು ಸನ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥಾಪಕ. ಕಂಪನಿಯು 1,25,184.21 ಕೋಟಿ ರೂ. ಮೌಲ್ಯ ಹೊಂದಿದೆ.
ಹಿಂದೂಜಾ ಸಹೋದರರು
1,22,761.29 ಕೋಟಿ ರೂ. ಮೌಲ್ಯದ ಹಿಂದೂಜಾ ಸಮೂಹದ ಒಡೆತನವನ್ನು ಸದ್ಯ ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಹಾಗೂ ಅಶೋಕ್ ಹೊಂದಿದ್ದಾರೆ.
ಕುಮಾರ್ ಬಿರ್ಲಾ
ಇವರು 1,21,146.01 ಕೋಟಿ ರೂ. ಮೌಲ್ಯದ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷರಾಗಿದ್ದಾರೆ.
ಬಜಾಜ್ ಕುಟುಂಬ
ಬಜಾಜ್ ಕುಟುಂಬವು ಬಜಾಜ್ ಸಮೂಹದಡಿ 40 ಕಂಪನಿಗಳ ಒಡೆತನ ಹೊಂದಿದೆ. ಸಮೂಹದ ಒಟ್ಟು ಮೌಲ್ಯ 1,17,915.45 ಕೋಟಿ ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ