Forex: ಭಾರತದ ಫಾರೆಕ್ಸ್ ರಿಸರ್ವ್ಸ್ 623 ಬಿಲಿಯನ್ ಡಾಲರ್ಗೆ ಹೆಚ್ಚಳ; ಸತತ 7ನೇ ವಾರ ಏರಿಕೆ; 22 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ
India's forex Reserves Reach 623 billion Dollar: ಭಾರತದ ಫಾರೆಕ್ಸ್ ರಿಸರ್ವ್ಸ್ ಡಿಸೆಂಬರ್ 29ರಂದು ಅಂತ್ಯಗೊಂಡ ವಾರದಲ್ಲಿ 2.759 ಬಿಲಿಯನ್ ಡಾಲರ್ನಷ್ಟು ಏರಿ, 623 ಬಿಲಿಯನ್ ಡಾಲರ್ ತಲುಪಿದೆ. ದೇಶದ ವಿದೇಶೀ ವಿನಿಮಯ ಮೀಸಲು ನಿಧಿ ಸತತ ಏಳನೇ ವಾರ ಏರಿಕೆ ಆಗಿದೆ. ಕಳೆದ 22 ವಾರದಲ್ಲೇ ಗರಿಷ್ಠ ಮಟ್ಟ ಮುಟ್ಟಿದೆ. 2021ರ ಅಕ್ಟೋಬರ್ನಲ್ಲಿ ಮೀಸಲು ನಿಧಿ 645 ಬಿಲಿಯನ್ ಡಾಲರ್ ಇತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ.
ನವದೆಹಲಿ, ಜನವರಿ 7: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿನ (Foreign Exchange Reserves) ಸಂಗ್ರಹ ಹೆಚ್ಚುತ್ತಲೇ ಇದೆ. ಸತತ ಏಳನೇ ವಾರ ಫಾರೆಕ್ಸ್ ರಿಸರ್ವ್ಸ್ ಹೆಚ್ಚಾಗಿದೆ. ಡಿಸೆಂಬರ್ 29ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.759 ಬಿಲಿಯನ್ ಡಾಲರ್ನಷ್ಟು ಏರಿದೆ. ಆರ್ಬಿಐ ಮೊನ್ನೆ (ಜ. 5) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಭಾರತದ ಫಾರೀನ್ ಎಕ್ಸ್ಚೇಂಜ್ ಮೀಸಲು ನಿಧಿ 623.20 ಬಿಲಿಯನ್ ಡಾಲರ್ನಷ್ಟಾಗಿದೆ. ಇದು ಕಳೆದ 22 ತಿಂಗಳಲ್ಲೇ ಗರಿಷ್ಠ ಮೊತ್ತವಾಗಿದೆ. ಹಿಂದಿನ ವಾರದಲ್ಲಿ (ಡಿಸೆಂಬರ್ 22ಕ್ಕೆ ಅಂತ್ಯಗೊಂಡ ವಾರ) 4.47 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಏರಿತ್ತು.
ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್, ಡಿಸೆಂಬರ್ 29ರ ವಾರದಲ್ಲಿ…
- ಫಾರೀನ್ ಕರೆನ್ಸಿ ಆಸ್ತಿ: 551.62 ಬಿಲಿಯನ್ ಡಾಲರ್ (1.87 ಬಿಲಿಯನ್ ಡಾಲರ್ನಷ್ಟು ಏರಿಕೆ)
- ಗೋಲ್ಡ್ ರಿಸರ್ವ್ಸ್ ಆಸ್ತಿ: 48.33 ಬಿಲಿಯನ್ ಡಾಲರ್ (853 ಮಿಲಿಯನ್ ಡಾಲರ್ನಷ್ಟು ಏರಿಕೆ)
- ಎಸ್ಡಿಆರ್: 18.37 ಬಿಲಿಯನ್ ಡಾಲರ್ (38 ಮಿಲಿಯನ್ ಡಾಲರ್ನಷ್ಟು ಏರಿಕೆ)
- ಐಎಂಎಫ್ನಲ್ಲಿ ಇರಿಸಿರುವ ಮೀಸಲು: 4.89 ಬಿಲಿಯನ್ ಡಾಲರ್ (2 ಮಿಲಿಯನ್ ಡಾಲರ್ನಷ್ಟು ಇಳಿಕೆ)
ಇದನ್ನೂ ಓದಿ: ಭಾರತದಲ್ಲಿ ವಿಡಿಯೋ ಮಾರುಕಟ್ಟೆ ಅಗಾಧ, ವಿಶ್ವದಲ್ಲೇ 3ನೇ ಸ್ಥಾನ: ವಿಡಿಯೋಗಳಿಂದಲೇ ಸಿಗೋ ಆದಾಯ ಎಷ್ಟು ಗೊತ್ತೇ?
ವಿದೇಶೀ ವಿನಿಮಯ ಮೀಸಲ ನಿಧಿಯಲ್ಲಿ ಮೇಲಿನ ನಾಲ್ಕು ಆಸ್ತಿಗಳು ಒಳಗೊಂಡಿರುತ್ತದೆ. ಅದರಲ್ಲಿ ವಿದೇಶೀ ಕರೆನ್ಸಿ ಆಸ್ತಿ ಪ್ರಮುಖವಾದುದು. ನಂತರದ ಮೌಲ್ಯ ಚಿನ್ನದ ಮೀಸಲಿನದ್ದು.
ಇನ್ನು ಎಸ್ಡಿಆರ್ ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಅಮೆರಿಕನ್ ಡಾಲರ್, ಯೂರೋಪ್, ಚೀನೀ ರೆನ್ಮಿನ್ಬಿ, ಜಪಾನೀ ಯೆನ್, ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ ಈ ಐದು ಕರೆನ್ಸಿಗಳ ಗುಂಪಿನ ಮೌಲ್ಯದ ಮೇಲೆ ಎಸ್ಡಿಆರ್ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: Naresh Goyal: ಏನೂ ಬೇಡ… ಜೈಲಿನಲ್ಲೇ ಸಾಯಲು ಬಿಡಿ… ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ನ್ಯಾಯಾಲಯದಲ್ಲೇ ಕಣ್ಣೀರು
ಫಾರೆಕ್ಸ್ ರಿಸರ್ವ್ಸ್ ಗರಿಷ್ಠ ಮಟ್ಟದತ್ತ ದಾಪುಗಾಲು
2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ 645 ಬಿಲಿಯನ್ ಡಾಲರ್ ತಲುಪಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಅದಾದ ಬಳಿಕ ರುಪಾಯಿ ಕರೆನ್ಸಿ ಮೌಲ್ಯ ಕುಸಿತ ತಡೆಯಲು ಸೇರಿದಂತೆ ವಿವಿಧ ಕಾರಣಕ್ಕೆ ಭಾರತದ ಫಾರೆಕ್ಸ್ ಸಂಪತ್ತು ಕರಗುತ್ತಾ ಹೋಗಿತ್ತು. ಈಗ ಕಳೆದ ಕೆಲ ವಾರಗಳಿಂದ ಅದು ಹೆಚ್ಚುತ್ತಾ ಬರುತ್ತಿದೆ. 2021ರ ಆ ಮಟ್ಟ ತಲುಪಲು 23 ಬಿಲಿಯನ್ ಡಾಲರ್ ಮಾತ್ರವೇ ಬಾಕಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ