Naresh Goyal: ಏನೂ ಬೇಡ… ಜೈಲಿನಲ್ಲೇ ಸಾಯಲು ಬಿಡಿ… ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ನ್ಯಾಯಾಲಯದಲ್ಲೇ ಕಣ್ಣೀರು

Jet Airways Founder Burst to Tears: ತನಗೆ ಬದುಕಿನ ಬಗ್ಗೆ ಭರವಸೆಯೇ ಹೋಗಿದೆ. ಜೆಜೆ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸುವ ಬದಲು ಈ ಜೈಲಿನಲ್ಲೇ ಸಾಯಲು ಬಿಡಿ ಎಂದು ನರೇಶ್ ಗೋಯಲ್ ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದಾರೆ. ಬ್ಯಾಂಕ್ ಸಾಲ ಮರುಪಾವತಿಸದೇ ವಂಚಿಸಿದ ಆರೋಪದ ಮೇಲೆ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನರೇಶ್ ಗೋಯಲ್ ಪತ್ನಿ ಅನಿತಾ ಕ್ಯಾನ್ಸರ್ ರೋಗಿಯಾಗಿದ್ದು, ಕೊನೆಯ ಹಂತದ ಕ್ಯಾನ್ಸರ್ ಹೊಂದಿದ್ದಾರೆ. ಅವರ ಒಬ್ಬಳೇ ಮಗಳಿಗೂ ಅನಾರೋಗ್ಯ ಇದೆಯಂತೆ.

Naresh Goyal: ಏನೂ ಬೇಡ... ಜೈಲಿನಲ್ಲೇ ಸಾಯಲು ಬಿಡಿ... ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ನ್ಯಾಯಾಲಯದಲ್ಲೇ ಕಣ್ಣೀರು
ನರೇಶ್ ಗೋಯಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 07, 2024 | 10:40 AM

ನವದೆಹಲಿ, ಜನವರಿ 7: ನೂರಾರು ಕೋಟಿ ರೂ ವಂಚನೆ ಎಸಗಿದ ಆರೋಪ ಇರುವ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿರುವ ಜೆಟ್ ಏರ್ವೇಸ್ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯಲ್ (Jet Airways founder Naresh Goyal) ಕೋರ್ಟ್ ಸಮ್ಮುಖದಲ್ಲೇ ಕಣ್ಣೀರು ಹಾಕಿದ ಘಟನೆ ಶನಿವಾರ (ಜ. 6) ನಡೆದಿದೆ. ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ 74 ವರ್ಷದ ಗೋಯಲ್ ವಿಶೇಷ ಕೋರ್ಟ್​ನ ನ್ಯಾಯಾಧೀಶರ ಬಳಿ ದುಃಖ ತೋಡಿಕೊಂಡು, ಜೈಲಿನಲ್ಲೇ ತನ್ನನ್ನು ಸಾಯಲು ಬಿಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ಅನಾರೋಗ್ಯ ವಿಚಾರವಾಗಿ ಅವರ ದುಃಖ ಕೋರ್ಟ್​ನಲ್ಲಿ ಉಮ್ಮಳಿಸಿ ಬಂದಿತ್ತು. ನರೇಶ್ ಗೋಯಲ್​ರನ್ನು ಅಸಹಾಯಕ ಸ್ಥಿತಿಯಲ್ಲಿ ಇರಲು ಬಿಡುವುದಿಲ್ಲ ಎಂದು ಅದೇ ವೇಳೆ ನ್ಯಾಯಾಧೀಶರು ಭರವಸೆ ಕೂಡ ನೀಡಿದ್ದಾರೆ.

ಹೆಂಡತಿ, ಮಗಳಿಗೂ ಅನಾರೋಗ್ಯ, ಬದುಕೇ ಬೇಡವಾಗಿದೆ ಎನ್ನುವ ಗೋಯಲ್

ಒಂದು ಕಾಲದಲ್ಲಿ ಸಾವಿರಾರು ಕೋಟಿ ರೂ ಒಡೆಯರಾಗಿದ್ದ ನರೇಶ್ ಗೋಯಲ್ ಇದೀಗ ಬಹಳ ಚಿಂತಾಕ್ರಾಂತ ಸ್ಥಿತಿಯಲ್ಲಿದ್ದಂತೆ ವ್ಯಕ್ತವಾಗುತ್ತಿದೆ. ದೆಹಲಿಯ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರು ಸಾಕಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ವಿಶೇಷ ಕೋರ್ಟ್​ನ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರ ಬಳಿ ಜಾಮೀನು ಅರ್ಜಿ ಸಲ್ಲಿಸಿರುವ ಅವರು, ವಿಚಾರಣೆ ವೇಳೆ ಜಡ್ಜ್ ಬಳಿ ತಮ್ಮ ಅನಾರೋಗ್ಯ ಸ್ಥಿತಿ ಬಗ್ಗೆ ವೈಯಕ್ತಿಕವಾಗಿ ನಿವೇದನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ಸಿಜೆಐ ಎದುರೇ 2 ವಿಸ್ಕಿ ಬಾಟಲಿಗಳನ್ನು ತಂದಿರಿಸಿದ ವಕೀಲರು, ಏನಿದು ಪ್ರಕರಣ?

ತನ್ನ ಕಾಲುಗಳು ಊದಿಕೊಂಡಿದ್ದು ನೋಯುತ್ತಿದೆ. ಕಾಲು ಮಡಚಲೂ ಕೂಡ ಆಗುವುದಿಲ್ಲ. ಮೂತ್ರ ಮಾಡುವಾಗ ಬಹಳ ನೋವಾಗುತ್ತದೆ. ಕೆಲವೊಮ್ಮೆ ಮೂತ್ರದಲ್ಲಿ ರಕ್ತವೂ ಬೆರೆತಿರುತ್ತದೆ. ಬಹಳಷ್ಟು ಬಾರಿ ತನಗೆ ಸಹಾಯವೇ ದೊರೆಯುವುದಿಲ್ಲ ಎಂದು ಹೇಳಿರುವ ನರೇಶ್ ಗೋಯಲ್, ತನ್ನ ಚಿಕಿತ್ಸೆಗೆ ಜೆಜೆ ಆಸ್ಪತ್ರೆಗೆ ಕಳುಹಿಸುವುದಕ್ಕೂ ಆಕ್ಷೇಪಿಸಿದ್ದಾರೆ.

ಆರ್ಥರ್ ರೋಡ್ ಬಂದೀಖಾನೆಯ ಸಿಬ್ಬಂದಿ ವೇಳಾಪಟ್ಟಿ ಪ್ರಕಾರ ಇತರ ಜೈಲುವಾಸಿಗಳೊಂದಿಗೆ ಜೆಜೆ ಆಸ್ಪತ್ರೆಗೆ ಹೋಗುವುದು ಬಹಳ ತ್ರಾಸದ ಕೆಲಸ. ಆಸ್ಪತ್ರೆಯಲ್ಲಿ ರೋಗಿಗಳ ಉದ್ದುದ್ದ ಕ್ಯೂ ಇರುತ್ತದೆ. ಸಮಯಕ್ಕೆ ಸರಿಯಾಗಿ ವೈದ್ಯರು ಸಿಗುವುದಿಲ್ಲ. ಫಾಲೋ ಅಪ್ ಕೂಡ ಸಾಧ್ಯವಾಗುವುದಿಲ್ಲ. ಇದರಿಂದ ತನ್ನ ಆರೋಗ್ಯಕ್ಕೆ ಇನ್ನಷ್ಟು ಬಾಧೆಯಾಗುತ್ತಿದೆ ಎಂದು ನರೇಶ್ ಗೋಯಲ್ ದುಃಖ ತೋಡಿಕೊಂಡಿದ್ದಾರೆ.

ತನ್ನ ಪತ್ನಿ ಅನಿತಾ ಕ್ಯಾನ್ಸರ್ ರೋಗದ ಕೊನೆಯ ಸ್ಟೇಜ್​ನಲ್ಲಿದ್ದಾರೆ. ತನ್ನ ಏಕೈಕ ಮಗಳಿಗೂ ಅನಾರೋಗ್ಯ ಇದೆ. ಪತ್ನಿಯನ್ನು ನೋಡಿಕೊಳ್ಳಲು ಯಾರೂ ಇಲ್ಲವಾಗಿದೆ. ತನಗೆ ಬದುಕಿನ ಬಗ್ಗೆ ಭರವಸೆಯೇ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿ ಇರುವ ತನಗೆ ಜೈಲಿನಲ್ಲೇ ಸಾಯುವುದು ಮೇಲೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

ನರೇಶ್ ಗೋಯಲ್ ಅವರ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಸ್ಪಂದಿಸಿ, ಉತ್ತರವನ್ನು ಕೋರ್ಟ್​ಗೆ ಸಲ್ಲಿಸಿದೆ. ಜನವರಿ 16ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಅಂತಿಮ ಕಕ್ಷೆ ಸೇರಿದ ಆದಿತ್ಯ ಎಲ್1; ಇದು ದೀರ್ಘ ಪ್ರಯಾಣದ ಅಂತ್ಯ: ಇಸ್ರೋ ಮುಖ್ಯಸ್ಥ ಸೋಮನಾಥ್

ನರೇಶ್ ಗೋಯಲ್ ವಿರುದ್ಧದ ಪ್ರಕರಣ ಏನು?

ಜೆಟ್ ಏರ್ವೇಸ್ ಸಂಸ್ಥೆ ಕೆನರಾ ಬ್ಯಾಂಕ್​ನಿಂದ ಪಡೆದ ಒಟ್ಟು 848.86 ಕೋಟಿ ರೂ ಮೊತ್ತದ ಸಾಲದ ಪೈಕಿ 538 ಕೋಟಿ ರೂನಷ್ಟು ಸಾಲ ಬಾಕಿ ಉಳಿಸಿಕೊಂಡಿದೆ. ಕೆನರಾ ಬ್ಯಾಂಕ್​ನಿಂದ ಪಡೆದ ಸಾಲವನ್ನು ನರೇಶ್ ಗೋಯಲ್ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಇದು ಅಕ್ರಮ ಹಣ ವರ್ಗಾವಣೆಯ ಪ್ರಕರಣ ಎನಿಸಿದೆ. ಮೊದಲಿಗೆ ಸಿಬಿಐ ತನಿಖೆ ನಡೆಸಿ ಪ್ರಕರಣ ದಾಖಲಿಸಿತ್ತು. ಈಗ ಜಾರಿ ನಿರ್ದೇಶನಾಲಯದಿಂದ ತನಿಖೆ ಆಗುತ್ತಿದೆ. ಚಾರ್ಜ್​ಶೀಟ್ ಕೂಡ ಸಲ್ಲಿಕೆಯಾಗಿದೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು. ಆಗಿನಿಂದಲೂ ಅವರು ಜುಡಿಷಿಯಲ್ ಕಸ್ಟಡಿಯಲ್ಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ