ನವದೆಹಲಿ, ಸೆಪ್ಟೆಂಬರ್ 7: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ‘ಮೇಕ್ ಇನ್ ಇಂಡಿಯಾ (Make In India)’ ಪರಿಕಲ್ಪನೆಯನ್ನು ಫಾಕ್ಸ್‌ಕಾನ್ ಅಧ್ಯಕ್ಷ (Foxconn Chairman) ಯಾಂಗ್ ಲಿಯು (Young Liu) ಬೆಂಬಲಿಸಿದ್ದಾರೆ. ಇತ್ತೀಚೆಗೆ, ಮಾಧ್ಯಮ ಸಂವಾದವೊಂದರ ಸಂದರ್ಭದಲ್ಲಿ ಅವರು, ಭಾರತದಲ್ಲಿನ ಸುಧಾರಣೆಗಳು ಮತ್ತು ನೀತಿಗಳು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ದೊಡ್ಡ ಅವಕಾಶಗಳನ್ನು ಸೃಷ್ಟಿಸಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಲಿಯು ಅವರು ಹಾಂಘೈ ಗ್ರೂಪ್‌ನ ಝೊಂಗ್ಯುವಾನ್ ಪುದು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಭವಿಷ್ಯದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲದಿದ್ದರೆ, ಭಾರತವು ವಿಶ್ವದಲ್ಲೇ ಹೊಸ ಉತ್ಪಾದನಾ ಕೇಂದ್ರವಾಗಲಿದೆ. ಚೀನಾದಲ್ಲಿ ಪೂರೈಕೆ ಸರಪಳಿ ನಿರ್ಮಿಸಲು 30 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ನಂತರ ಇದೀಗ ಆ ವ್ಯವಸ್ಥೆಯು ಭಾರತಕ್ಕೆ ವರ್ಗಾಯಿಸಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅದೃಷ್ಟವಶಾತ್, ನಾವು ಈಗಾಗಲೇ ಈ ಪ್ರದೇಶದಲ್ಲಿ ಅನುಭವವನ್ನು ಹೊಂದಿರುವುದರಿಂದ ಸಮಯವು ತುಲನಾತ್ಮಕವಾಗಿ ಕಡಿಮೆ ಸಾಕಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಅಭಿವೃದ್ಧಿಪಡಿಸಲು ದೊಡ್ಡ ಅವಕಾಶಗಳಿವೆ ಎಂದು ಯಾಂಗ್ ಲಿಯು ಹೇಳಿದ್ದಾರೆ.
ಗ್ರಾಹಕರ ಅಗತ್ಯಗಳಿಗೆ ಪೂರಕವಾಗಿ ಫಾಕ್ಸ್‌ಕಾನ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣಾ ಕಾರ್ಯವನ್ನು ಮುಂದುವರೆಸುತ್ತಿದೆ ಎಂದು ಲಿಯು ಹೇಳಿದ್ದಾರೆ.
ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಯಾಂಗ್ ಲಿಯು ತಿಳಿಸಿದ್ದಾರೆ. ಘಟಕವು ತಮಿಳುನಾಡಿನಲ್ಲಿ ಸ್ಥಾಪನೆಯಾಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳೂ ತಿಳಿಸಿವೆ.
ಇದನ್ನೂ ಓದಿ: ಆಸಿಯಾನ್-ಭಾರತ ಸಹಕಾರವನ್ನು ಬಲಪಡಿಸಲು 12 ಅಂಶಗಳ ಯೋಜನೆ ಪ್ರಸ್ತಾಪಿಸಿದ ಮೋದಿ
ಫಾಕ್ಸ್‌ಕಾನ್ ಶೀಘ್ರದಲ್ಲೇ ಭಾರತದಲ್ಲಿ ಇವಿ ಘಟಕವನ್ನು ಹೊಂದಲಿದೆ. ಇಷ್ಟೇ ಅಲ್ಲದೆ, ಓಹಿಯೋ ಮತ್ತು ಥಾಯ್ಲೆಂಡ್‌ನಲ್ಲಿ ಇವಿ ಘಟಕಗಳನ್ನು ನಿರ್ಮಿಸಲು ಕಂಪನಿಯು ಯೋಜಿಸಿದೆ ಎಂದು ಲಿಯು ಹೇಳಿದ್ದಾರೆ. ಲಿಯು ಇತ್ತೀಚೆಗೆ ಗುಜರಾತ್‌ನಲ್ಲಿ ‘ಸೆಮಿಕಾನ್ ಇಂಡಿಯಾ 2023’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.
ಭಾರತವು ‘ವಿಶ್ವದ ಹೊಸ ಉತ್ಪಾದನಾ ಕೇಂದ್ರ’ವಾಗಿ ಹೊರಹೊಮ್ಮಲು ಸಿದ್ಧವಾಗಿದೆ ಎಂದು ಲಿಯು ಬಣ್ಣಿಸಿದ್ದಾರೆ. ಪೂರೈಕೆ ಪರಿಸರ ವ್ಯವಸ್ಥೆಯು ಚೀನಾದಲ್ಲಿ ತೆಗೆದುಕೊಂಡ ಸಮಯಕ್ಕಿಂತ ವೇಗವಾಗಿ ಭಾರತದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ