Foxconn: ಫಾಕ್ಸ್​ಕಾನ್ ಮತ್ತು ವೇದಾಂತ ಬೇರ್ಪಟ್ಟಿದ್ದು ಸಕಾರಾತ್ಮಕ ಬೆಳವಣಿಗೆಯಾ? ಹೆಚ್ಚುವರಿ ಸೆಮಿಕಂಡಕ್ಟರ್ ಘಟಕ ಶುರುವಾಗುತ್ತಾ?

|

Updated on: Jul 11, 2023 | 1:12 PM

Semiconductor Chip Making: ಭಾರತ ಸರ್ಕಾರ ಸೆಮಿಕಂಡಕ್ಟರ್ ತಯಾರಿಕಾ ನೀತಿ ಅಡಿಯಲ್ಲಿ ನೀಡುವ ಪ್ರೋತ್ಸಾಹಕಗಳಿಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವುದಾಗಿ ಹೇಳುವ ಮೂಲಕ ಫಾಕ್ಸ್​ಕಾನ್, ಸೆಮಿಕಂಡಕ್ಟರ್ ಯೋಜನೆಯಿಂದ ಹಿಂದಕ್ಕೆ ಸರಿಯದಿರುವ ಸುಳಿವು ನೀಡಿದೆ.

Foxconn: ಫಾಕ್ಸ್​ಕಾನ್ ಮತ್ತು ವೇದಾಂತ ಬೇರ್ಪಟ್ಟಿದ್ದು ಸಕಾರಾತ್ಮಕ ಬೆಳವಣಿಗೆಯಾ? ಹೆಚ್ಚುವರಿ ಸೆಮಿಕಂಡಕ್ಟರ್ ಘಟಕ ಶುರುವಾಗುತ್ತಾ?
ಫಾಕ್ಸ್​ಕಾನ್
Follow us on

ನವದೆಹಲಿ: ತೈವಾನ್ ದೇಶದ ಫಾಕ್ಸ್​ಕಾನ್ ಸಂಸ್ಥೆ ತಾನು ವೇದಾಂತ ಸಂಸ್ಥೆ ಜೊತೆಗಿನ ಸೆಮಿಕಂಡಕ್ಟರ್ ತಯಾರಿಕೆ ಯೋಜನೆಯಿಂದ (Semiconductor Manufacturing) ಹಿಂದಕ್ಕೆ ಸರಿಯುತ್ತಿರುವುದಾಗಿ ಹೇಳಿತ್ತು. ಈ ಬೆಳವಣಿಗೆ ಬಗ್ಗೆ ಇಂದು (ಜುಲೈ 11) ಮತ್ತೆ ಮಾತನಾಡಿರುವ ಫಾಕ್ಸ್​ಕಾನ್, ತಾನು ಭಾರತಕ್ಕೆ ಬದ್ಧವಾಗಿದ್ದು, ಇಲ್ಲಿ ಸೆಮಿಕಂಡಕ್ಟರ್ ತಯಾರಿಕೆ ವ್ಯವಸ್ಥೆ ರೂಪುಗೊಳಿಸಲು ಸಹಾಯವಾಗುವುದಾಗಿ ಹೇಳಿದೆ. ಭಾರತ ಸರ್ಕಾರ ಸೆಮಿಕಂಡಕ್ಟರ್ ತಯಾರಿಕಾ ನೀತಿ ಅಡಿಯಲ್ಲಿ ನೀಡುವ ಪ್ರೋತ್ಸಾಹಕಗಳಿಗೆ (Incentives) ಅರ್ಜಿ ಸಲ್ಲಿಸಲು ಯೋಜಿಸುತ್ತಿರುವುದಾಗಿ ಹೇಳುವ ಮೂಲಕ ಫಾಕ್ಸ್​ಕಾನ್, ಸೆಮಿಕಂಡಕ್ಟರ್ ಯೋಜನೆಯಿಂದ ಹಿಂದಕ್ಕೆ ಸರಿಯದಿರುವ ಸುಳಿವು ನೀಡಿದೆ.

‘ಫಾಕ್ಸ್​ಕಾನ್ ಭಾರತಕ್ಕೆ ಬದ್ಧವಾಗಿದೆ. ದೇಶದಲ್ಲಿ ಉತ್ತಮವಾದ ಸೆಮಿಕಂಡಕ್ಟರ್ ತಯಾರಿಕಾ ವ್ಯವಸ್ಥೆ ರೂಪುಗೊಳ್ಳುವುದನ್ನು ನೋಡಲು ಬಯಸುತ್ತದೆಸೆಮಿಕಂಡಕ್ಟರ್ ತಯಾರಿಕೆಗೆ ಸರ್ಕಾರ ಕೊಡುವ ಪ್ರೋತ್ಸಾಹಕ ಪಡೆಯಲು ಫಾಕ್ಸ್​ಕಾನ್ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ’ ಎಂದು ಸಂಸ್ಥೆ ಮಂಗಳವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿFoxconn: ವೇದಾಂತ ಜೊತೆಗಿನ ಸೆಮಿಕಂಡಕ್ಟರ್ ಯೋಜನೆಯಿಂದ ಫಾಕ್ಸ್​ಕಾನ್ ಔಟ್; ಮುಂದೇನು?

ವೇದಾಂತ ಸಂಸ್ಥೆ ಮತ್ತು ಫಾಕ್ಸ್​ಕಾನ್ ಎರಡೂ ಸೇರಿ ಜಂಟಿಯಾಗಿ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸುವ ಯೋಜನೆ ಹಾಕಲಾಗಿತ್ತು. ವೇದಾಂತ ಫಾಕ್ಸ್​ಕಾನ್ ಸೆಮಿಕಂಡಕ್ಟರ್ಸ್ ಪ್ರೈ ಲಿ ಎಂಬ ಸಂಸ್ಥೆಯೂ ಸಿದ್ಧವಾಗಿತ್ತು. ಆದರೆ, ಬೇರೆ ಬೇರೆ ಕಾರಣಗಳಿಗೆ ಈ ಜಂಟಿ ವ್ಯವಹಾರಕ್ಕೆ ತಡೆಯುಂಟಾಗಿತ್ತು. ಜಂಟಿಯಾಗಿ ನಡೆಯಲು ಸಾಧ್ಯ ಇಲ್ಲ ಎನಿಸಿದಾಗ ಬೇರ್ಪಡಲು ಎರಡೂ ಕಡೆಯಿಂದ ಅಭಿಪ್ರಾಯಗಳು ಬಂದಿದ್ದವು ಎಂದು ಮೂಲಗಳು ಹೇಳುತ್ತವೆ. ಫಾಕ್ಸ್​ಕಾನ್ ಕೂಡ ಈ ಬೇರ್ಪಡಿಕೆಯ ಬೆಳವಣಿಗೆಯನ್ನು ನಕಾರಾತ್ಮಕವಾಗಿ ಭಾವಿಸಬಾರದು ಎಂದು ಮನವಿ ಮಾಡಿದೆ.

‘ಈ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬುದನ್ನು ಎರಡೂ ಕಡೆಗಳಲ್ಲಿ ಗುರುತಿಸಲಾಗಿತ್ತು. ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ ಇನ್ನೂ ಕೆಲ ಸವಾಲುಗಳಿದ್ದವುಇದು ನಕಾರಾತ್ಮಕವಲ್ಲ’ ಎಂದು ಫಾಕ್ಸ್​ಕಾನ್ ಹೇಳಿದೆ.

ಇದನ್ನೂ ಓದಿಫಾಕ್ಸ್‌ಕಾನ್, ವೇದಾಂತ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧ: ಸಚಿವ ಅಶ್ವಿನಿ ವೈಷ್ಣವ್

ಚೀನಾದಲ್ಲಿ ಅತಿಹೆಚ್ಚು ಎಲೆಕ್ಟ್ರಾನಿಕ್ ಉತ್ಪನ್ನಗಳು ತಯಾರಾಗುತ್ತಿದ್ದು, ಭಾರತವೂ ಪೈಪೋಟಿಗೆ ಬೀಳಲು ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಪ್ರಮುಖವಾಗಿ ಬೇಕಾಗುವ ಸೆಮಿಕಂಡಕ್ಟರ್ ತಯಾರಿಕೆಗೆ ಸರ್ಕಾರ ಗಮನ ಹರಿಸುತ್ತಿದೆ. ಅಮೆರಿಕದ ಮೈಕ್ರೋನ್ ಕಾರ್ಪೊರೇಷನ್ ಸಂಸ್ಥೆ ಇತ್ತೀಚೆಗೆ ಗುಜರಾತ್ ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿತ್ತು. ಗುಜರಾತ್​ನಲ್ಲಿ ಮೈಕ್ರೋನ್​ನಿಂದ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಾಗಲಿದೆ. ಇದರ ಜೊತೆಗೆ ಫಾಕ್ಸ್​ಕಾನ್ ಮತ್ತು ವೇದಾಂತ ಜಂಟಿಯಾಗಿ ಸೆಮಿಕಂಡಕ್ಟರ್ ಚಿಪ್ ತಯಾರಿಸುವುದಿತ್ತು. ಈಗ ಎರಡೂ ಸಂಸ್ಥೆಗಳು ಬೇರ್ಪಡುತ್ತಿರುವುದರಿಂದ ಪ್ರಶ್ನೆ ಎದುರಾಗಿದೆ.

ವರದಿಗಳು ಹೇಳುವ ಪ್ರಕಾರ ವೇದಾಂತ ಮತ್ತು ಫಾಕ್ಸ್​ಕಾನ್ ಪ್ರತ್ಯೇಕವಾಗಿ ಸೆಮಿಕಂಡಕ್ಟರ್ ಚಿಪ್​ಗಳ ತಯಾರಿಕೆಗೆ ಮುಂದಾಗಬಹುದು. ಇದು ಸಾಕಾರಗೊಂಡರೆ ಭಾರತದಲ್ಲಿ ಮೂರು ಸಂಸ್ಥೆಗಳಿಂದ ಸೆಮಿಕಂಡಕ್ಟರ್ ತಯಾರಿಕೆ ನಡೆಯುತ್ತದೆ. ಫಾಕ್ಸ್​ಕಾನ್ ಈಗಾಗಲೇ ಭಾರತದಲ್ಲಿ ಐಫೋನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರು ಬಳಿ ವಿಶಾಲ ಜಾಗದಲ್ಲಿ ಐಫೋನ್ ಫ್ಯಾಕ್ಟರಿ ಸ್ಥಾಪಿಸಲಿದೆ. ಈಗ ಸೆಮಿಕಂಡಕ್ಟರ್ ಘಟಕ ಸ್ಥಾಪಿಸುವುದಾದರೆ ಫಾಕ್ಸ್​ಕಾನ್ ಕರ್ನಾಟಕದಲ್ಲಿ ಜಾಗ ಹುಡುಕುತ್ತಾ ಎಂಬ ಕುತೂಹಲ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ