Foxconn: ವೇದಾಂತ ಜೊತೆಗಿನ ಸೆಮಿಕಂಡಕ್ಟರ್ ಯೋಜನೆಯಿಂದ ಫಾಕ್ಸ್ಕಾನ್ ಔಟ್; ಮುಂದೇನು?
Semiconductor Manufacturing in Gujarat: ಗುಜರಾತ್ನಲ್ಲಿ ವೇದಾಂತ ಸಂಸ್ಥೆ ಜೊತೆ ಸೇರಿ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸುವ ಯೋಜನೆಯಿಂದ ತೈವಾನ್ನ ಫಾಕ್ಸ್ಕಾನ್ ಸಂಸ್ಥೆ ಹಿಂದಕ್ಕೆ ಸರಿದಿದೆ. ವೇದಾಂತವೇ ಸ್ವತಂತ್ರವಾಗಿ ಸೆಮಿಕಂಡಕ್ಟರ್ ಉತ್ಪಾದನೆಗೆ ತೊಡಗುವ ನಿರೀಕ್ಷೆ ಇದೆ.
ವೇದಾಂತ ಸಂಸ್ಥೆ ಜೊತೆ ಜಂಟಿಯಾಗಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನೆ ಘಟಕ (Semiconductor and Display Fab Unit) ಸ್ಥಾಪಿಸುವ ಬೃಹತ್ ಯೋಜನೆಯಿಂದ ಫಾಕ್ಸ್ಕಾನ್ ಹಿಂದಕ್ಕೆ ಸರಿಯುತ್ತಿದೆ. ಗುಜರಾತ್ನಲ್ಲಿ 19.5 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಯಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಫಾಕ್ಸ್ಕಾನ್ ಮತ್ತು ವೇದಾಂತ ಲಿ ಸಂಸ್ಥೆಗಳು ಜಂಟಿ ಒಪ್ಪಂದಕ್ಕೆ ಸಹಿಹಾಕಿದ್ದವು. ವೇದಾಂತ ಸಂಸ್ಥೆ ಸದ್ಯ ಏಕಾಂಗಿಯಾಗಿ ಸೆಮಿಕಂಡಕ್ಟರ್ ಉತ್ಪಾದನೆಗೆ ಮುಂದಾಗಲಿದೆ. ವೇದಾಂತ ಫಾಕ್ಸ್ಕಾನ್ ಸೆಮಿಕಂಡಕ್ಟರ್ಸ್ ಪ್ರೈ ಲಿ (VFSPL) ಸಂಸ್ಥೆಯ ಪೂರ್ಣ ಮಾಲೀಕತ್ವ ಈಗ ವೇದಾಂತದ ಬಳಿ ಇದೆ. ಈಗ ಹೆಸರು ಸಮೇತ ಈ ಕಂಪನಿಯಿಂದ ಫಾಕ್ಸ್ಕಾನ್ ಹೊರಬೀಳುತ್ತಿದೆ. ಇದರೊಂದಿಗೆ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಫ್ಯಾಬ್ ವ್ಯವಹಾರ ನಡೆಸುವ ಮೊದಲ ಭಾರತೀಯ ಕಂಪನಿ ಎಂದು ವೇದಾಂತ ದಾಖಲೆ ಬರೆಯಲಿದೆ.
ಸೆಮಿಕಂಡಕ್ಟರ್ ಯೋಜನೆಯಿಂದ ಫಾಕ್ಸ್ಕಾನ್ ಯಾಕೆ ಹೊರಬೀಳುತ್ತಿದೆ?
ವೇದಾಂತ ಪ್ರೈ ಲಿ ಮತ್ತು ಫಾಕ್ಸ್ಕಾನ್ ಸಂಸ್ಥೆಗಳು ಜಂಟಿಯಾಗಿ ಸೆಮಿಕಂಡಕ್ಟರ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿತ್ತು. ಈ ಯೋಜನೆಗೆ ಯೂರೋಪಿನ ಚಿಪ್ ತಯಾರಕ ಸಂಸ್ಥೆ ಎಸ್ಟಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನೂ ಜೊತೆಗೆ ಸೇರಿಸಿಕೊಳ್ಳಲು ಮಾತುಕತೆ ನಡೆದಿತ್ತು. ಇದು ಫಲಪ್ರದವಾಗದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಮಂದಗತಿಯಲ್ಲಿ ಸಾಗಿತ್ತು.
ಇದನ್ನೂ ಓದಿ: India vs China: ಎಮರ್ಜಿಂಗ್ ದೇಶಗಳ ಪೈಕಿ ಇಂಡಿಯಾ ಮಿಂಚು; ಹೂಡಿಕೆ ಆಕರ್ಷಣೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ಇದೇ ವೇಳೆ, ಫಾಕ್ಸ್ಕಾನ್ ಜೊತೆ ಸೇರಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸುವುದಾಗಿ ಹಿಂದೆ ಹೇಳಿದ್ದ ವೇದಾಂತ ಸಂಸ್ಥೆ ನಂತರ ಈ ಯೋಜನೆಯನ್ನು ವೋಲ್ಕಾನ್ ಇನ್ವೆಸ್ಟ್ಮೆಂಟ್ಸ್ ಸಂಸ್ಥೆ ವಹಿಸಿಕೊಳ್ಳುತ್ತದೆ ಎಂದು ಹೇಳಿ ಗೊಂದಲ ಎಬ್ಬಿಸಿತ್ತು. ಈ ವಿಚಾರಕ್ಕೆ ವೇದಾಂತಕ್ಕೆ ಸೆಬಿಯಿಂದ ದಂಡ ಕೂಡ ಬಿದ್ದಿತ್ತು.
‘2023 ಜುಲೈ 7ರಂದು ನಿರ್ದೇಶಕರ ಮಂಡಳಿಯ ಸಭೆ ನಡೆಯಿತು. ಟ್ವಿನ್ ಸ್ಟಾರ್ ಟೆಕ್ನಾಲಜೀಸ್ ಲಿ (ಟಿಎಸ್ಟಿಎಲ್) ಸಂಸ್ಥೆಯ ಮಾಲಿಕತ್ವದ ವೇದಾಂತ ಫಾಕ್ಸ್ಕಾನ್ ಸೆಮಿಕಂಡಕ್ಟರ್ಸ್ ಪ್ರೈ ಲಿ ಹಾಗೂ ವೇದಾಂತ ಡಿಸ್ಪ್ಲೇಸ್ ಲಿ (ವಿಡಿಎಲ್) ಸಂಸ್ಥೆಗಳ ನೂರು ಪ್ರತಿಶತದಷ್ಟು ಪಾಲನ್ನು ಫೇಸ್ ವ್ಯಾಲ್ಯೂ ದರದಲ್ಲಿ ಷೇರು ರವಾನೆ ಮೂಲಕ ಖರೀದಿ ಮಾಡಲು ಮಂಡಳಿ ಸಭೆಯಲ್ಲಿ ಅನುಮೋದನೆ ಕೊಡಲಾಗಿದೆ,’ ಎಂದು ವೇದಾಂತ ಸಂಸ್ಥೆ ಸೆಬಿಗೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.
ಟ್ವಿನ್ ಸ್ಟಾರ್ ಟೆಕ್ನಾಲಜೀಸ್ ಲಿ ಸಂಸ್ಥೆ ವೋಲ್ಕಾನ್ ಇನ್ವೆಸ್ಟ್ಮೆಂಟ್ಸ್ ಲಿ ಸಂಸ್ಥೆಯ ಮಾಲಿಕತ್ವಕ್ಕೆ ಬರುತ್ತದೆ. ಈ ವೋಲ್ಕಾನ್ ಇನ್ವೆಸ್ಟ್ಮೆಂಟ್ಸ್ ಸಂಸ್ಥೆ ಅಂತಿಮವಾಗಿ ವೇದಾಂತ ಲಿ ಸಂಸ್ಥೆಯ ಹೋಲ್ಡಿಂಗ್ ಕಂಪನಿ ಆಗಿದೆ. ಅಂದರೆ ವೇದಾಂತ ಸಂಸ್ಥೆಗೆ ವೋಲ್ಕಾನ್ ಇನ್ವೆಸ್ಟ್ಮೆಂಟ್ಸ್ ಮಾಲೀಕ ಸಂಸ್ಥೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ