ಡಿಸೆಂಬರ್ ಮೊದಲ ಎರಡು ವಾರದಲ್ಲಿ ಎಫ್​ಪಿಐಗಳಿಂದ 22,766 ಕೋಟಿ ರೂ ಒಳಹರಿವು

|

Updated on: Dec 15, 2024 | 6:58 PM

Foreign Portfolio Investments in India: ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳು ಭಾರತದ ಈಕ್ವಿಟಿ ಮಾರುಕಟ್ಟೆಗಳತ್ತ ಲಗ್ಗೆ ಹಾಕುವುದು ಪುನಾರಂಭಗೊಂಡಿದೆ. ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ಭಾರೀ ಪ್ರಮಾಣದಲ್ಲಿ ಹೊರಹೋಗಿದ್ದ ಎಫ್​ಪಿಐಗಳು ಈಗ ಸ್ವಲ್ಪಸ್ವಲ್ಪವಾಗಿ ಬರತೊಡಗಿವೆ. ಡಿಸೆಂಬರ್ ಮೊದಲೆರಡು ವಾರದಲ್ಲಿ ಎಫ್​ಪಿಐಗಳ ನಿವ್ವಳ ಒಳಹರಿವು 22,766 ಕೋಟಿ ರೂ ಇದೆ.

ಡಿಸೆಂಬರ್ ಮೊದಲ ಎರಡು ವಾರದಲ್ಲಿ ಎಫ್​ಪಿಐಗಳಿಂದ 22,766 ಕೋಟಿ ರೂ ಒಳಹರಿವು
ಹೂಡಿಕೆ
Follow us on

ನವದೆಹಲಿ, ಡಿಸೆಂಬರ್ 15: ಎರಡು ತಿಂಗಳು ಭಾರತೀಯ ಷೇರು ಮಾರುಕಟ್ಟೆಯಿಂದ ಹೊರಹೋಗಿದ್ದ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳು ಡಿಸೆಂಬರ್​ನಲ್ಲಿ ವಾಪಸ್ ಬರತೊಡಗಿವೆ. ವರದಿ ಪ್ರಕಾರ ಡಿಸೆಂಬರ್​ನ ಮೊದಲೆರಡು ವಾರದಲ್ಲಿ ವಿದೇಶೀ ಹೂಡಿಕೆದಾರರಿಂದ ಆಗಿರುವ ನಿವ್ವಳ ಹೂಡಿಕೆ 22,766 ಕೋಟಿ ರೂ ಎನ್ನಲಾಗಿದೆ. ನಿವ್ವಳ ಹೂಡಿಕೆ ಎಂದರೆ ಹೊರಹರಿವಿಗಿಂತ ಒಳಹರಿವು ಹೆಚ್ಚಳವಾಗಿರುವುದು. ಅಮೆರಿಕದ ಫೆಡರಲ್ ರಿಸರ್ವ್​ನಿಂದ ಬಡ್ಡಿದರ ಕಡಿತ ಆಗುವ ನಿರೀಕ್ಷೆ ದಟ್ಟವಾಗಿರುವುದರಿಂದ ಎಫ್​ಪಿಐಗಳು ಭಾರತೀಯ ಮಾರುಕಟ್ಟೆಯತ್ತ ಹರಿದುಬರಲು ಪ್ರಮುಖ ಕಾರಣ ಎನ್ನಲಾಗಿದೆ.

ಡಿಸೆಂಬರ್​ನಲ್ಲಿ ಸೆಪ್ಟೆಂಬರ್ ತಿಂಗಳ ಲಯ ಕಾಣುತ್ತಿದೆ. ಸೆಪ್ಟೆಂಬರ್​ನಲ್ಲಿ ಎಫ್​ಪಿಐಗಳಿಂದ ಆದ ನಿವ್ವಳ ಹೂಡಿಕೆ 57,724 ಕೋಟಿ ರೂ ಇತ್ತು. ಅದಾದ ಬಳಿಕ ಎರಡು ತಿಂಗಳು ಸಾಕಷ್ಟು ಹೂಡಿಕೆಗಳು ಕಳೆದುಹೋಗಿವೆ. ಅದರಲ್ಲೂ ಅಕ್ಟೋಬರ್ ತಿಂಗಳಲ್ಲಿ ಹೊರಹರಿವು ತೀವ್ರವಾಗಿದೆ. ಆ ಒಂದು ತಿಂಗಳಲ್ಲೇ 94,017 ಕೋಟಿ ರೂನಷ್ಟು ಎಫ್​ಪಿಐ ನಿವ್ವಳ ಹೊರಹರಿವು ಆಗಿದೆ. ನವೆಂಬರ್​ನಲ್ಲಿ ಇದು 21,612 ಕೋಟಿ ರೂನಷ್ಟಿದೆ.

ಇದನ್ನೂ ಓದಿ: ಕೋವಿಡ್ ನಂತರ 17 ರಾಜ್ಯಗಳು ಶೇ. 9ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳವಣಿಗೆ; 25 ರಾಜ್ಯಗಳದ್ದು ಶೇ. 7ರ ಮೇಲ್ಪಟ್ಟ ಪ್ರಗತಿ

ಅಕ್ಟೋಬರ್​ನಲ್ಲಿ ಭಾರೀ ಪ್ರಮಾಣದಲ್ಲಿ ಹೊರಹರಿವು ಆಗಿತ್ತಾದರೂ ವಾರ್ಷಿಕ ಲೆಕ್ಕ ತೆಗೆದುಕೊಂಡರೆ 2024 ಪಾಸಿಟಿವ್ ಆಗಿದೆ. ಪ್ರಸಕ್ತ ಕ್ಯಾಲಂಡರ್ ವರ್ಷದಲ್ಲಿ ನಿವ್ವಳ ಎಫ್​ಪಿಐ ಹೂಡಿಕೆ ಇಲ್ಲಿಯವರೆಗೆ 7,747 ಕೋಟಿ ರೂ ದಾಖಲಾಗಿದೆ.

ಮುಂದಿನ ಅಮೆರಿಕಾ ವಾತಾವರಣದ ಮೇಲೆ ಹೂಡಿಕೆಗಳ ಹರಿವು ಅವಲಂಬನೆ

ಮುಂಬರುವ ದಿನಗಳಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಗೆ ವಿದೇಶೀ ಹೂಡಿಕೆಗಳು ಎಷ್ಟು ಹರಿದುಬರಬಹುದು, ಅಥವಾ ಎಷ್ಟು ಹೂಡಿಕೆಗಳ ಹೊರಹರಿವು ಆಗಬಹುದು ಎನ್ನುವುದು ಹಲವು ಸಂಗತಿಗಳ ಮೇಲೆ ಅವಲಂಬಿಸಿದೆ. ಡೊನಾಲ್ಡ್ ಟ್ರಂಪ್ ಅಧಿಕಾರದ ಗದ್ದುಗೆಗೆ ಕುಳಿತು ಯಾವ್ಯಾವ ನೀತಿಗಳನ್ನು ಜಾರಿಗೆ ತರುತ್ತಾರೆ ಎನ್ನುವುದು ಈ ಸಂಗತಿಗಳಲ್ಲಿ ಒಂದು. ಹಣದುಬ್ಬರ, ಬಡ್ಡಿದರ ಇತ್ಯಾದಿ ಸಂಗತಿಗಳೂ ಕೂಡ ಎಫ್​ಪಿಐಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಹಣದುಬ್ಬರ ಶೇ. 5.48ಕ್ಕೆ ಇಳಿಕೆ; ಹೆಚ್ಚು ಆದಾಯದ ರಾಜ್ಯಗಳಲ್ಲಿ ಬೆಲೆ ಏರಿಕೆ ಕಡಿಮೆ

ಜಾಗತಿಕವಾಗಿ ಹಣಕಾಸು ಹರಿವು ಸಲೀಸಾಗಿರುವುದರಿಂದ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಗೆ ಬಂಡವಾಳ ಹರಿದುಬರಲು ಸಾಧ್ಯವಾಗಿದೆ ಎಂದೆನ್ನುತ್ತಾರೆ ಮತ್ತೊಬ್ಬ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ