11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ: ಪೆಟ್ರೋಲ್​​, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಜಾಗತಿಕ ಕಚ್ಚಾ ತೈಲ ದರ ಹೆಚ್ಚಳದಿಂದಾಗಿ 11 ದಿನಗಳಲ್ಲಿ ಇದು 4ನೇ ಬಾರಿ ದರ ಏರಿಕೆಯಾಗಿದೆ. ಈಗಾಲೇ ದರ ಏರಿಕೆಯ ಅಬ್ಬರಕ್ಕೆ ತತ್ತರಿಸಿದ್ದ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರದ ನಿರ್ಧಾರ ಶಾಕ್​​ ನೀಡಿದ್ದು, ಇಂಧನಗಳ ಬೆಲೆ ಸತತ ಹೆಚ್ಚಳದಿಂದ ಅಗತ್ಯ ವಸ್ತುಗಳ ದರದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.

11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ: ಪೆಟ್ರೋಲ್​​, ಡೀಸೆಲ್ ಬೆಲೆ ಮತ್ತೆ ಹೆಚ್ಚಳ
ಸಾಂದರ್ಭಿಕ ಚಿತ್ರ
Image Credit source: shutterstock.com

Updated on: May 25, 2026 | 7:54 AM

ನವದೆಹಲಿ, ಮೇ 25: ವಾಹನ ಸವಾರರಿಗೆ ಮತ್ತೆ ಪೆಟ್ರೋಲ್​, ಡೀಸೆಲ್ ದರ ಏರಿಕೆ ಶಾಕ್​ ಸಿಕ್ಕಿದ್ದು, ಕೇಂದ್ರ ಸರ್ಕಾರ 11 ದಿನಗಳಲ್ಲಿ 4ನೇ ಬಾರಿ ದರ ಏರಿಕೆ ಮಾಡಿದೆ. ಪೆಟ್ರೋಲ್​ ದರ ಲೀಟರ್​ಗೆ 2.61 ರೂ. ಮತ್ತು ಡೀಸೆಲ್​​​ 2.71 ರೂ. ಹೆಚ್ಚಳವಾಗಿದೆ. ಪರಿಷ್ಕೃತ ಪೆಟ್ರೋಲ್​, ಡೀಸೆಲ್ ದರ ತಕ್ಷಣದಿಂದಲೇ ಜಾರಿಯಾಗಿದ್ದು, ಆ ಮೂಲಕ ದೆಹಲಿಯಲ್ಲಿಯೇ ಲೀಟರ್​ ಪೆಟ್ರೋಲ್​ ದರ 100 ರೂ. ಗಡಿ ದಾಟಿದೆ. ರಾಜಧಾನಿಯಲ್ಲಿಂದು ಲೀಟರ್ ಪೆಟ್ರೋಲ್ ದರ 102.12 ರೂ. ಮತ್ತು ಲೀಟರ್ ಡೀಸೆಲ್ ದರ 95.20 ರೂ. ಆಗಿದೆ.

ಮುಖ್ಯಾಂಶಗಳು

  • ಮತ್ತೆ ಪೆಟ್ರೋಲ್​, ಡೀಸೆಲ್ ದರ ಏರಿಕೆ ಶಾಕ್
  • 11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ
  • ಸತತ ಬೆಲೆ ಏರಿಕೆಗೆ ವಾಹನ ಸವಾರರು ಕಂಗಾಲು

ಬೆಂಗಳೂರಲ್ಲಿ ದರ ಎಷ್ಟು?

ಇಂಧನ ದರ ಹೆಚ್ಚಳದ ಬಳಿಕ ಬೆಂಗಳೂರಲ್ಲಿ ಲೀಟರ್​​ ಪೆಟ್ರೋಲ್​​ ದರ 110.93 ರೂ. ಮತ್ತು 95.99 ರೂಪಾಯಿಗಳಿಗೆ ಏರಿಕೆಯಾಗಿದೆ.

ಮೇ 15ರಿಂದ ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಸರ್ಕಾರಿ ಸ್ವಾಮ್ಯದ ಆಯಿಲ್​​ ಆ್ಯಂಡ್​​ ನ್ಯಾಚುರಲ್​​ ಗ್ಯಾಸ್​​ ಕಾರ್ಪೊರೇಷನ್​​ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್​​ ಲಿಮಿಟೆಡ್​​ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟವೇ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಮತ್ತಷ್ಟು ಹೆಚ್ಚಳ; ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ

ಹಾರ್ಮುಜ್ ಜಲಸಂಧಿಯಲ್ಲಿ ಹಲವು ತಿಂಗಳುಗಳಿಂದ ಉಂಟಾಗಿರುವ ತಡೆ ಮತ್ತು ವ್ಯತ್ಯಯಗಳಿಂದ ಜಾಗತಿಕ ಇಂಧನ ಸಾಗಣೆ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿದ್ದು, ಮಧ್ಯಪ್ರಾಚ್ಯದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡುವ ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಸಂಘರ್ಷದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 65-70 ಡಾಲರ್‌ನಿಂದ 110-115 ಡಾಲರ್‌ಗೆ ಏರಿಕೆಯಾಗಿದೆ. ಭಾರತ ತನ್ನ ಅಗತ್ಯದ ಸುಮಾರು ಶೇಕಡಾ 85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಹೆಚ್ಚಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:10 am, Mon, 25 May 26

Follow Us