ಶ್ರೀಲಂಕಾದಲ್ಲಿ (Sri Lanka) ಶುಕ್ರವಾರದಿಂದ ಅನ್ವಯ ಆಗುವಂತೆ ಅಲ್ಲಿನ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಾರ್ಪೊರೇಷನ್ ದೇಶದಲ್ಲಿ ವಾಹನಗಳಿಗೆ ತೈಲ ಪಡಿತರ ವ್ಯವಸ್ಥೆ ಆರಂಭಿಸಿದೆ. ದೇಶದಲ್ಲಿ ಈಗ ಐತಿಹಾಸಿಕ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ನೀಡಿರುವ ಹೇಳಿಕೆ ಪ್ರಕಾರ, ಒಮ್ಮೆ ಪೆಟ್ರೋಲ್ ಪಂಪ್ಗೆ ಭೇಟಿ ನೀಡಿದರೆ ಮೋಟಾರ್ ಸೈಕಲ್ಗಳು ಮತ್ತು ಇತರ ದ್ವಿಚಕ್ರ ವಾಹನಗಳು 1000 ರೂಪಾಯಿ (ಶ್ರೀಲಂಕಾ ರೂಪಾಯಿ) ಮೌಲ್ಯದ ತನಕ ತೈಲ ಖರೀದಿ ಮಾಡಬಹುದು. ಅದೇ ರೀತಿ ತ್ರಿಚಕ್ರ ವಾಹನಗಳು 1500 ರೂಪಾಯಿ ಮೌಲ್ಯದ ತೈಲ, ಕಾರು, ಜೀಪ್ ಮತ್ತು ವ್ಯಾನ್ಗಳು 5000 ರೂಪಾಯಿ ಮೌಲ್ಯದಷ್ಟನ್ನು ಭರ್ತಿ ಮಾಡಿಕೊಳ್ಳಬಹುದು. ಬಸ್ಗಳು, ಲಾರಿಗಳು ಮತ್ತು ವಾಣಿಜ್ಯ ವಾಹನಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ.
ಪೆಟ್ರೋಲ್- ಡೀಸೆಲ್ ಭರ್ತಿ ಮಾಡಿಸುವ ಸ್ಟೇಷನ್ಗಳಲ್ಲಿ ಭಾರೀ ಉದ್ದದ ಸಾಲುಗಳಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮನೆಗಳಲ್ಲಿ 12 ಗಂಟೆ ತನಕ ವಿದ್ಯುತ್ ಕಡಿತ ಅನುಭವಿಸುತ್ತಿದ್ದಾರೆ. ಶ್ರೀಲಂಕಾದ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಅಗತ್ಯ ವಸ್ತುಗಳಿಗೆ ಭಾರೀ ಕೊರತೆ ಕಂಡುಬಂದಿದೆ. ಈ ತನಕ ಕಂಡರಿಯದ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ಸಿಲುಕಿಕೊಂಡಿದೆ. ಈ ದ್ವೀಪ ರಾಷ್ಟ್ರ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಮೊದಲ ಬಾರಿಗೆ ವಿದೇಶೀ ಸಾಲವನ್ನು ಪಾವತಿಸಲು ಸಾಧ್ಯವಾಗಿಲ್ಲ. ಗಾಲೆಯಲ್ಲಿ ಪ್ರತಿಭಟನೆಗಳಾಗುತ್ತಿವೆ. ರಾಜಧಾನಿಯಲ್ಲಿ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ದಿನದಿನಕ್ಕೂ ಯುವಜನರು ಭಾಗವಹಿಸುವುದು ಹೆಚ್ಚಾಗಿದೆ. ಇಂಥ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸಲು ಸಾಧ್ಯವಾಗದ ಕಾರಣಕ್ಕೆ ಅಧ್ಯಕ್ಷರಾದ ಗೊಟಬಯ ತಮ್ಮ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ,
ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಇಡೀ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಿಪಿಸಿ ಅಧ್ಯಕ್ಷ ಸುಮಿತ್ ವಿಜೆ ಸಿಂಘೆ ಕಳೆದ ವಾರ ಮಾತನಾಡಿ, ಶ್ರೀಲಂಕಾದ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿಯ ಹೆಚ್ಚಿನ ಬೆಲೆಯಿಂದಾಗಿ ನಿಗಮಕ್ಕೆ ಒಂದು ದಿನಕ್ಕೆ 80 ಕೋಟಿಯಿಂದ 100 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸಿಪಿಸಿಗೆ ಒಂದು ಲೀಟರ್ ಡೀಸೆಲ್ಗೆ 110 ರೂಪಾಯಿ ಮತ್ತು ಪೆಟ್ರೋಲ್ ಒಂದು ಲೀಟರ್ಗೆ 52 ರೂಪಾಯಿ ನಷ್ಟ ಆಗುತ್ತಿದೆ ಎಂದು ವಿಜೆಸಿಂಘೆ ಹೇಳಿದ್ದಾರೆ, ಇನ್ನೂ ಮುಂದುವರಿದು, ಮತ್ತೊಂದು ತೈಲ ಸಾಲದ ಲೈನ್ಗಾಗಿ ನಾವು ಭಾರತವನ್ನು 500 ಮಿಲಿಯನ್ ಡಾಲರ್ಗಾಗಿ ಚರ್ಚಿಸಿದ್ದೇವೆ. ಶ್ರೀಲಂಕಾ ತೈಲ ಖರೀದಿಸಲಿ ಎಂಬ ಕಾರಣಕ್ಕರ ಕಳೆದ ತಿಂಗಳು ಭಾರತ 500 ಮಿಲಿಯನ್ ಯುಎಸ್ಡಿ ನೀಡಿತ್ತು.