ನೀವು ಪ್ರತಿಭಟಿಸುತ್ತಿದ್ದಂತೆ ನಾವು ಡಾಲರ್‌ಗಳನ್ನು ಕಳೆದುಕೊಳ್ಳುತ್ತಿರುತ್ತೇವೆ: ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ ಶ್ರೀಲಂಕಾ ಪ್ರಧಾನಿ
ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರವು ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಮಹಿಂದಾ ಹೇಳಿದ್ದಾರೆ.
ಕೊಲಂಬೊ: ತಮ್ಮ ಸರ್ಕಾರವು ತಮ್ಮ ಸಂಕಟಗಳನ್ನು ಪರಿಹರಿಸಲು ಹಗಲಿರುಳು ಕೆಲಸ ಮಾಡುತ್ತಿದೆ.ಆಂದೋಲನವನ್ನು ಕೊನೆಗೊಳಿಸಿ ಎಂದು ಶ್ರೀಲಂಕಾದ (Srilanka) ಪ್ರಧಾನಿ ಮಹಿಂದಾ ರಾಜಪಕ್ಸೆ(Mahinda Rajapaksa) ಸೋಮವಾರ ನಾಗರಿಕರಲ್ಲಿ ಮನವಿ ಮಾಡಿದರು. “ರಸ್ತೆಗಿಳಿದು ನೀವು ಪ್ರತಿಭಟಿಸುತ್ತಿರುವ ಕ್ಷಣದಲ್ಲಿ ನಾವು ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಪ್ರಧಾನ ಮಂತ್ರಿ ಹೇಳಿರುವುದಾಗಿ ಲಂಕಾದ ನ್ಯೂಸ್ ವೆಬ್‌ಸೈಟ್ ನ್ಯೂಸ್‌ವೈರ್ ವರದಿ ಮಾಡಿದೆ. ದ್ವೀಪ ರಾಷ್ಟ್ರವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ (Economic crisis) ನಂತರ ಅಧಿಕಾರದಿಂದ ಕೆಳಗಿಳಿಯುವಂತೆ ಪ್ರಧಾನಿ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ಸುದೀರ್ಘ ವಿದ್ಯುತ್ ಕಡಿತ ಮತ್ತು ಅನಿಲ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯ ಬಗ್ಗೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಜನರನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ ರಾಜಪಕ್ಸೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರವು ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಮಹಿಂದಾ ಹೇಳಿದ್ದಾರೆ. “ಈಗಿನ ಈ ಬಿಕ್ಕಟ್ಟಿನಿಂದ ಶ್ರೀಲಂಕಾವನ್ನು ಹೇಗೆ ಹೊರತರುವುದು ಎಂಬುದರ ಕುರಿತು ಪರಿಹಾರಗಳನ್ನು ರೂಪಿಸಲು ಅಧ್ಯಕ್ಷರು ಮತ್ತು ನಾನು ಪ್ರತಿ ಕ್ಷಣವನ್ನು ಕಳೆಯುತ್ತಿದ್ದೇವೆ” ಎಂದು ಅವರು ಹೇಳಿದರು
ಹೆಚ್ಚಿನ ಪ್ರತಿಭಟನೆಗಳನ್ನು ತಡೆಯುವ ಪ್ರಯತ್ನದಲ್ಲಿ, ಸಾಂಪ್ರದಾಯಿಕ ಸಿಂಹಳೀಯ ಮತ್ತು ತಮಿಳು ಹೊಸ ವರ್ಷಕ್ಕೆ ಹೊಂದಿಕೆಯಾಗುವಂತೆ ಸರ್ಕಾರವು ಕಳೆದ ವಾರ ಹೆಚ್ಚುವರಿ ಸಾರ್ವಜನಿಕ ರಜಾದಿನಗಳನ್ನು ಘೋಷಿಸಿತು. “2010ರ ಯುದ್ಧದಲ್ಲಿ ಗೆದ್ದ ನಂತರ ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ, ಜನರು ಕಥೆಯನ್ನು ಮರೆತಿದ್ದಾರೆ. ಆದರೆ ನನಗೆ ನೆನಪಿದೆ. ಭವಿಷ್ಯದಲ್ಲಿ ಎಂದಿಗೂ ಕತ್ತಲೆಯಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಾವು ವಿದ್ಯುತ್ ಸ್ಥಾವರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಹಿಂದಿನ ಸರ್ಕಾರವು ನಮ್ಮ ಪ್ರಸ್ತಾಪವನ್ನು ಬೆಂಬಲಿಸಲಿಲ್ಲ, ಅದಕ್ಕೆ ಅವರೇ ಹೊಣೆ” ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: Debt Burden On States: ರಾಜಕಾರಣದ ಜನಪ್ರಿಯ ಯೋಜನೆಗಳ ಭಾರಕ್ಕೆ ಒಂದು ಭಾರತದಲ್ಲಿ ಅದೆಷ್ಟು ಶ್ರೀಲಂಕಾ ಸೃಷ್ಟಿಯಾಗಬಹುದು?