ನವದೆಹಲಿ: ಅಮೆರಿಕದ ದೈತ್ಯ ಕಂಪನಿಗಳು ಲೇ ಆಫ್ (Layoffs) ಭರಾಟೆ ಎಗ್ಗಿಲ್ಲದೇ ಮುಂದುವರಿಸುತ್ತಿವೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೆರಿಕದವರಷ್ಟೇ ಅಲ್ಲ ಈ ಕಂಪನಿಗಳು ಇರುವ ಇತರ ದೇಶಗಳಲ್ಲಿನ ಉದ್ಯೋಗಿಗಳಿಗೂ ಕೆಲಸ ಇಲ್ಲವಾಗಿದೆ. ಅಮೇಜಾನ್, ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಹೀಗೆ ಲೇ ಆಫ್ ಮಾಡಿದ ಟೆಕ್ ಕಂಪನಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಾರತದಲ್ಲಿಯೂ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೆರಿಕಕ್ಕೆ ಹಲವು ಕನಸುಗಳನ್ನು ಕಟ್ಟಿಕೊಂಡು ಹೋದ ಭಾರತೀಯರ ಕಥೆ ಏನು? ಅಲ್ಲಿ ಅಕಸ್ಮಾತ್ ಆಗಿ ಕೆಲಸ ಕಳೆದುಕೊಂಡ ಭಾರತೀಯರು ಜೀವನಕ್ಕೆ ಏನು ಮಾಡಿಯಾರು? ಅವರ ಗತಿ ಏನು? ಎಷ್ಟು ದಿನ ಅವರು ಅಮೆರಿಕದಲ್ಲಿರಲು ಸಾಧ್ಯ?
ಅಮೆರಿಕದ ಐಟಿ ಕಂಪನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಭಾರತೀಯರೇ. ಹೀಗಾಗಿ, ಉದ್ಯೋಗಕಡಿತದ ವಿಚಾರ ಬಂದಾಗ ಸಹಜವಾಗಿ ಹೆಚ್ಚು ಬಾಧಿತವಾಗುವುದು ಭಾರತೀಯರೇ. ಒಂದು ಒಂದಾಜು ಪ್ರಕಾರ ಒಟ್ಟು 4 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರ ಪೈಕಿ ಅಮೆರಿಕದಲ್ಲಿರುವ 1 ಲಕ್ಷದಷ್ಟು ಭಾರತೀಯರಿಗೆ ಕೆಲಸ ಹೋಗಿದೆ. ಜನವರಿಯಲ್ಲಿ ಬಂದ ಮಾಹಿತಿ ಪ್ರಕಾರ 60-80,000 ದಷ್ಟು ಭಾರತೀಯರು ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಈಗ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಇದನ್ನೂ ಓದಿ: Germany: ಮಕಾಡೆ ಮಲಗಿದ ಜರ್ಮನಿ; ಬಲಿಷ್ಠ ದೇಶಕ್ಕೆ ಈ ಸ್ಥಿತಿ ಬರಲು ಏನು ಕಾರಣ? ಭಾರತಕ್ಕಿದೆಯಾ ಆತಂಕ?
ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿರುವ ಭಾರತೀಯರಲ್ಲಿ ಹೆಚ್ಚಿನವರು ವರ್ಕಿಂಗ್ ವೀಸಾ ಮೇಲೆ ಹೋದವರು. ಅಂದರೆ ಹೆಚ್-1ಬಿ ವೀಸಾ ಹೊಂದಿದವರು. ಇವರಿಗೆ ಕೆಲಸ ಹೋದ ಕೂಡಲೇ ಈ ವೀಸಾ ಕೂಡ ಖತಂ ಆಗುತ್ತದೆ. 2 ತಿಂಗಳವರೆಗೆ ಕಾಲಾವಕಾಶ ಕೊಡಲಾಗುತ್ತದೆ. ಅಷ್ಟರೊಳಗೆ ಬೇರೆ ಕೆಲಸ ಹುಡುಕಿಕೊಳ್ಳಬೇಕು. ಇಲ್ಲವೇ, ಬೇರೆ ಕಂಪನಿಗಳು ಇವರಿಗಾಗಿ ಎಚ್-1ಬಿ ವೀಸಾಗೆ ಅರ್ಜಿ ಹಾಕಬೇಕು. ಇಲ್ಲದಿದ್ದರೆ ಕೆಲಸ ಹೋಗಿ 2 ತಿಂಗಳ ಬಳಿಕ ಯಾವ ಮುಲಾಜೂ ನೋಡದೇ ಇವರನ್ನು ತವರು ದೇಶಕ್ಕೆ ಸಾಗಹಾಕಲಾಗುತ್ತದೆ.
ಅಮೆರಿಕದ ಗ್ರೀನ್ ಕಾರ್ಡ್ ಅಥವಾ ಅಲ್ಲಿನ ಪೌರತ್ವ ಹೊಂದಿರುವ ಭಾರತೀಯರಿಗೆ ಸಮಸ್ಯೆ ಇರುವುದಿಲ್ಲ. ವರ್ಕಿಂಗ್ ವೀಸಾ ಹೊಂದಿದವರು ಅಲ್ಲಿ ಕೆಲಸ ಮಾಡುವ ತನಕ ಮಾತ್ರ ವಾಸಿಸಲು ಸಾಧ್ಯ. ಹೀಗಾಗಿ, ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರು ವಿಲವಿಲ ಒದ್ದಾಡುವಂತಾಗಿದೆ. ಒಂದು ವೇಳೆ ಕನಿಕರ ದೃಷ್ಟಿಯಿಂದ ಅವರನ್ನು ಅಮೆರಿಕದಲ್ಲಿ ಕೆಲ ತಿಂಗಳು ಮುಂದುವರಿಯಲು ಬಿಟ್ಟರೂ ಕಷ್ಟವೇ. ಯಾಕೆಂದರೆ ಅಮೆರಿಕದಲ್ಲಿ ಜೀವನವೆಚ್ಚವೇ ಅಷ್ಟು ಅಗಾಧವಾಗಿರುತ್ತದೆ.
ಅಮೆರಿಕದಲ್ಲಿ ಕೆಲಸ ಸಿಗದಿದ್ದರೆ ಪ್ರಪಂಚವೇನೂ ಮುಳುಗಿಹೋಗುವುದಿಲ್ಲ ಎಂಬುದು ಹೌದು. ಆದರೆ, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಬಹುತೇಕ ಭಾರತೀಯರು ಐಟಿ ಕ್ಷೇತ್ರದಲ್ಲಿರುವವರೇ. ಈಗ ಟೆಕ್ ಕಂಪನಿಗಳು ಲೇ ಆಫ್ ಮಾಡುತ್ತಿರುವುದಲ್ಲದೇ ಹೊಸ ನೇಮಕಾತಿಗಳನ್ನೂ ತೀರಾ ಕುಗ್ಗಿಸಿವೆ. ಕೆಲವೊಂದು ಕಂಪನಿಗಳು ನೇಮಕಾತಿಯನ್ನು ಫ್ರೀಜ್ ಮಾಡಿವೆ. ಇದು ಭಾರತೀಯ ಉದ್ಯೋಗಿಗಳನ್ನು ಚಿಂತೆಗೀಡು ಮಾಡಿದೆ.
ಈಗ ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರಿಗೆ ಒಳ್ಳೆಯ ಆಯ್ಕೆಯಂತೂ ಇದೆ. ಅದುವೇ ಭಾರತಕ್ಕೆ ವಾಪಸ್ಸಾಗುವುದು. ಭಾರತದ ಐಟಿ ಉದ್ಯಮಕ್ಕೆ ನುರಿತ ತಂತ್ರಜ್ಞರ ಅವಶ್ಯಕತೆ ಇದೆ. ಅಮೆರಿಕ ರಿಟರ್ನ್ಡ್ ಎಂಜಿನಿಯರುಗಳಿಗೆ ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಸಿಗುವುದು ಅಷ್ಟೇನೂ ಕಷ್ಟವಾಗದು.