ಬೆಂಗಳೂರು: ಜಿ20 ದೇಶಗಳ ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಉಪಮುಖ್ಯಸ್ಥರ ಸಭೆ (G20 FCBD) ಬೆಂಗಳೂರಿನಲ್ಲಿ ಬುಧವಾರ ನಡೆಯಿತು. 20 ದೇಶಗಳ ಹಣಕಾಸು ಇಲಾಖೆ ಉನ್ನತ ಅಧಿಕಾರಿಗಳು, ಕಿರಿಯ ಸಚಿವರು, ಸೆಂಟ್ರಲ್ ಬ್ಯಾಂಕುಗಳ ಉಪಗವರ್ನರುಗಳ ಸಭೆ ಇದಾಗಿದ್ದು, ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಆರ್ಬಿಐ ಉಪಗವರ್ನರ್ ಮೈಕೇಲ್ ಡಿ ಪಾತ್ರ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಅನುರಾಗ್ ಠಾಕೂರ್, ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಜಿ20 ಸಭೆಯಲ್ಲಿ ವಸುದೈವ ಕುಟುಂಬಂ ಎಂಬ ಸಂದೇಶ ಅಡಕವಾಗಿರುವುದನ್ನು ಒತ್ತಿಹೇಳಿದರು. “ಕೋವಿಡ್ನ ಕಾಲಘಟ್ಟದಲ್ಲಿ ವಿವಿಧ ದೇಶಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಕಾಡುತ್ತಿವೆ. ಜಾಗತಿಕ ರಾಜಕೀಯ ಬಿಕ್ಕಟ್ಟು ಕಾಡುತ್ತಿವೆ. ಇವು ಅಭಿವೃದ್ಧಿಯ ಲಯಕ್ಕೆ ಭಂಗ ತರಬಹುದು. ಈ ಸಂದರ್ಭದಲ್ಲಿ ವಸುದೈವ ಕುಟುಂಬಕಂ ತತ್ವ ಬಹಳ ಉಪಯುಕ್ತವಾಗಿದೆ. ಪರಸ್ಪರ ಸಂವಾದ, ಸಮಾಲೋಚನೆಗಳಿಂದ ಸಂಕಷ್ಟಗಳನ್ನು ಎದುರಿಸಬಹುದು” ಎಂದು ಅನುರಾಗ್ ಠಾಕೂರ್ ಹೇಳಿದರು.
“ಇವತ್ತಿನದ್ದು ಯುದ್ಧದ ಕಾಲಘಟ್ಟವಲ್ಲ. ರಾಜತಾಂತ್ರಿಕತೆ ಮತ್ತು ಸಂವಾದಗಳು ದಾರಿದೀಪ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಈಗ ಪುನರುಚ್ಚರಿಸಬಯಸುತ್ತೇನೆ. ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವೇನು ಎಂಬುದು ಪ್ರಧಾನಿಗಳ ಈ ಮಾತು ಸೂಚಿಸುತ್ತದೆ” ಎಂದೂ ಕೇಂದ್ರ ಮಾಹಿತಿ ಮತ್ತು ಪ್ರಸರಣ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಇದನ್ನೂ ಓದಿ: UPI: ಬೆಂಗಳೂರು ಮತ್ತಿತರ ಕಡೆ ಜಿ20 ದೇಶಗಳ ನಾಗರಿಕರಿಗೆ ಯುಪಿಐ ಸೌಲಭ್ಯ
ಫೆಬ್ರುವರಿ 24 ಮತ್ತು 25ರಂದು ಬೆಂಗಳೂರಿನಲ್ಲೇ ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಮೊದಲ ಸಭೆ ನಡೆಯಲಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. 20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳು ಸೇರಿ 72 ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾಗತಿಕವಾಗಿ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದಿಂದ ಹಿಡಿದು ವಿವಿಧ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದೆ.
ಇಲ್ಲಿ ಜಿ20 ಗುಂಪಿನಲ್ಲಿ ಭಾರತದ ಜೊತೆ ಅಮೆರಿಕ, ಚೀನಾ, ರಷ್ಯಾ, ಬ್ರಿಟನ್, ಯೂರೋಪ್, ಸೌತ್ ಆಫ್ರಿಕಾ ಮೊದಲಾದ ಪ್ರಮುಖ 20 ದೇಶಗಳಿವೆ. ವಿಶ್ವದ ಬಹುತೇಕ ಆರ್ಥಿಕ ಶಕ್ತಿ ಈ 20 ದೇಶಗಳಲ್ಲಿ ಕೇಂದ್ರಿತವಾಗಿವೆ. ಹೀಗಾಗಿ, ಜಿ20 ಗುಂಪಿಗೆ ಅದರದ್ದೇ ಪ್ರಾಮುಖ್ಯತೆ ಇದೆ. ಕಳೆದ ಬಾರಿಯ ಜಿ20 ಸಭೆಯು ಚೀನಾ ನಾಯಕತ್ವದಲ್ಲಿ ನಡೆದಿತ್ತು. ಈ ಬಾರಿ ಭಾರತಕ್ಕೆ ಅಧ್ಯಕ್ಷತೆಯ ಅವಕಾಶ ಸಿಕ್ಕಿದೆ. ಜಿ20 ಶೃಂಗ ಸಭೆ ದೆಹಲಿಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ. ಅಲ್ಲಿಯವರೆಗೆ ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿವಿಧೆಡೆ ವಿವಿಧ ಜಿ20 ಸಭೆಗಳು ನಡೆಯುತ್ತಿರುತ್ತವೆ.
Published On - 1:40 pm, Wed, 22 February 23