ಜಿ20 ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಟ್ಯಾಸ್ಕ್ ಫೋರ್ಸ್​ನ ಅಂತಿಮ ವರದಿ ಬಿಡುಗಡೆ; ಭಾರತದ ಅದ್ವಿತೀಯ ಯಶಸ್ಸು ಈ ವರದಿಯಲ್ಲಿ ಹೈಲೈಟ್

|

Updated on: Jul 15, 2024 | 6:47 PM

Report of G20 Task Force on Digital Public Infrastructure: ಜಿ20 ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಟ್ಯಾಸ್ಕ್ ಫೋರ್ಸ್​ನ ಅಂತಿಮ ವರದಿ ಇಂದು (ಜುಲೈ 15) ಬಿಡುಗಡೆ ಆಗಿದೆ. ಡಿಪಿಐ ಕಾರಣದಿಂದ ಕಳೆದ 9 ವರ್ಷದಲ್ಲಿ ಆಗಿರುವ ಪರಿವರ್ತನೆ 50 ವರ್ಷವಾದರೂ ಸಾಧ್ಯವಾಗುತ್ತಿರಲಿಲ್ಲ ಎಂದು ಟ್ಯಾಸ್ಕ್ ಫೋರ್ಸ್​ನ ಸಹ-ಅಧ್ಯಕ್ಷ ಅಮಿತಾಭ್ ಕಾಂತ್ ಹೇಳಿದ್ದಾರೆ. ಭಾರತದಲ್ಲಿ ಯಶಸ್ವಿಯಾದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಜಗತ್ತಿನ ವಿವಿಧೆಡೆ ವಿಸ್ತರಿಸುವ ಇರಾದೆಯಲ್ಲಿ ಟ್ಯಾಸ್ಕ್ ಫೋರ್ಸ್ ಮಾರ್ಗಾನ್ವೇಷಣೆ ಮಾಡಿದೆ.

ಜಿ20 ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಟ್ಯಾಸ್ಕ್ ಫೋರ್ಸ್​ನ ಅಂತಿಮ ವರದಿ ಬಿಡುಗಡೆ; ಭಾರತದ ಅದ್ವಿತೀಯ ಯಶಸ್ಸು ಈ ವರದಿಯಲ್ಲಿ ಹೈಲೈಟ್
ಭಾರತದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್
Follow us on

ನವದೆಹಲಿ, ಜುಲೈ 15: ಆರ್ಥಿಕ ಪರಿವರ್ತನೆ, ಹಣಕಾಸು ಒಳಗೊಳ್ಳುವಿಕೆ ಮತ್ತು ಅಭಿವೃದ್ಧಿಗೆ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಪಡಿಸಲೆಂದು ರಚಿಸಲಾದ ಭಾರತದ ಜಿ20 ಟ್ಯಾಸ್ಕ್ ಫೋರ್ಸ್ ತನ್ನ ಅಂತಿಮ ವರದಿಯನ್ನು ಇಂದು ಬಿಡುಗಡೆ ಮಾಡಿದೆ. ಭಾರತದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್​ನ ಜಿ20 ಟ್ಯಾಸ್ಕ್ ಫೋರ್ಸ್ ವರದಿಯಲ್ಲಿ ಭಾರತದ ಯಶೋಗಾಥೆಯನ್ನು ಎತ್ತಿ ಹೇಳಲಾಗಿದೆ. 2023ರ ಜಿ20 ಶೃಂಗಸಭೆಯ ನೇತೃತ್ವವನ್ನು ಭಾರತ ವಹಿಸಿತ್ತು. ಆ ಸಂದರ್ಭದಲ್ಲಿ ಈ ಕಾರ್ಯಪಡೆಯನ್ನು ರಚಿಸಲಾಗಿತ್ತು. ಆ ಜಿ20 ಸಭೆಯಲ್ಲಿ ಭಾರತದ ಶೆರ್ಪಾ ಆಗಿದ್ದ ಅಮಿತಾಭ್ ಕಾಂತ್ ಮತ್ತು ಯುಐಡಿಎಐ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಈ ಟ್ಯಾಸ್ಕ್ ಫೋರ್ಸ್​ನ ಅಧ್ಯಕ್ಷತೆ ವಹಿಸಿದ್ದರು. ನೀತಿ ಆಯೋಗ್, ಎನ್​ಪಿಸಿಐ, ಯುಐಡಿಎಐ, ಆರ್​ಬಿಐ ಮೊದಲಾದ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಪಡೆಯ ಸದಸ್ಯರಾಗಿದ್ದರು.

50 ವರ್ಷದಲ್ಲಿ ಆಗುವಂಥದ್ದು 9 ವರ್ಷದಲ್ಲಿ ಆಗಿದೆ: ಅಮಿತಾಭ್ ಕಾಂತ್

ಜಿ20 ಡಿಪಿಐನ ಟ್ಯಾಸ್ಕ್ ಫೋರ್ಸ್​ನ ಸಹ-ಅಧ್ಯಕ್ಷರಾಗಿರುವ ಅಮಿತಾಭ್ ಕಾಂತ್ ಅವರು ಭಾರತದಲ್ಲಿ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಕಳೆದ 9 ವರ್ಷದಲ್ಲಿ ಅದ್ವಿತೀಯವಾಗಿ ಬೆಳೆದಿರುವುದನ್ನು ಎತ್ತಿ ತೋರಿಸಿದ್ದಾರೆ. ಈ ಡಿಪಿಐನಲ್ಲಿ ಭಾರತ ಭರ್ಜರಿ ಜಿಗಿತ ಸಾಧಿಸಿದೆ. ಈಗ 9 ವರ್ಷದಲ್ಲಿ ಭಾರತ ಮಾಡಿರುವ ಸಾಧನೆಯನ್ನು ಡಿಪಿಐ ಇಲ್ಲದೇ ಮಾಡಬೇಕಾದರೆ 50 ವರ್ಷ ಬೇಕಾಗುತ್ತಿತ್ತು ಎಂದು ಹೇಳುವ ಮೂಲಕ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಎಷ್ಟು ಮಹತ್ವದ್ದು ಎಂಬುದನ್ನು ಅಮಿತಾಭ್ ಕಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ 10 ಲಕ್ಷ ರೂ ಬಂದರೆ ಏನಾಗುತ್ತೆ? ಈ ನಿಯಮ ತಿಳಿದಿರಿ

ಇವತ್ತು ಭಾರತದಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್​ವರೆಗೂ ಎಲ್ಲಾ ಮಟ್ಟದಲ್ಲೂ ಯುಪಿಐ ಬಳಸಲಾಗುತ್ತಿದೆ. ಜಾಗತಿಕವಾಗಿ ನಡೆಯುವ ಡಿಜಿಟಲ್ ವಹಿವಾಟಿನಲ್ಲಿ ಭಾರತದ ಪಾಲು ಶೇ. 46ರಷ್ಟಿದೆ. 16 ಕೋಟಿ ಜನರ ಬ್ಯಾಂಕ್ ಖಾತೆಗಳಿಗೆ 4.5 ಬಿಲಿಯನ್ ಡಾಲರ್ ಹಣ ವರ್ಗಾವಣೆ ಇರಲಿ, 25 ಲಕ್ಷ ಜನರಿಗೆ ಎರಡು ವರ್ಷದಲ್ಲಿ ಲಸಿಕೆ ಹಾಕುವುದಿರಲಿ, ಎಲ್ಲದರಲ್ಲೂ ಭಾರತದ ಡಿಜಿಟಲ್ ಮೂಲಸೌಕರ್ಯ ಉತ್ಕೃಷ್ಟವಾಗಿದೆ. ಜಗತ್ತಿಗೇ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಧಾರ್​ನಿಂದ ಸರ್ಕಾರಕ್ಕೆ ಬಹಳಷ್ಟು ಹಣ ಸೋರಿಕೆ ತಡೆ

ಟ್ಯಾಸ್ಕ್ ಫೋರ್ಸ್​ನ ಮತ್ತೊಬ್ಬ ಮುಖ್ಯಸ್ಥರಾದ ನಂದನ್ ನಿಲೇಕಣಿ ಅವರು ಕೂಡ ಭಾರತದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ತಂದಿರುವ ಪರಿವರ್ತನೆಯನ್ನು ಹೈಲೈಟ್ ಮಾಡಿ ಹೇಳಿದ್ದಾರೆ. ಭಾರತದ ಹೆಮ್ಮೆಯ ಆಧಾರ್ ಯೋಜನೆಯ ರೂವಾರಿಯಾದ ಅವರು ಆಧಾರ್ ಆಧರಿತವಾಗಿ ನೇರ ಹಣ ವರ್ಗಾವಣೆ ವ್ಯವಸ್ಥೆಯಿಂದ ಹಣದ ಸೋರಿಕೆ ಕಡಿಮೆ ಆಗಿ ಸರ್ಕಾರಕ್ಕೆ 41 ಬಿಲಿಯನ್ ಡಾಲರ್ ಹಣ ಉಳಿಸಿದೆ. ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆ ಈಗ ಬಹಳ ಅವಶ್ಯಕ ಎನಿಸಿದೆ. ಈ ವರದಿಯು ಜಾಗತಿಕವಾಗಿ ಡಿಪಿಐ ಅನ್ನು ಅಪ್ಪಿಕೊಳ್ಳುವಂತಾಗಲು ದಾರಿದೀಪವಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ರೀಟೇಲ್ ಬಳಿಕ ಹೋಲ್​ಸೇಲ್ ಹಣದುಬ್ಬರ ಏರಿಕೆ ಸರದಿ; ಜೂನ್ ತಿಂಗಳಲ್ಲಿ ಶೇ. 3.4ರಷ್ಟು ಡಬ್ಲ್ಯುಪಿಐ ಇನ್​ಫ್ಲೇಶನ್

ಭಾರತದಲ್ಲಿ ಯಶಸ್ವಿಯಾಗಿರುವ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಯನ್ನು ಜಗತ್ತಿನ ವಿವಿಧೆಡೆ ಹೇಗೆ ಅಳವಡಿಸಬಹುದು ಎಂಬುದನ್ನು ಜಿ20 ಟ್ಯಾಸ್ಕ್ ಫೋರ್ಸ್​ನ ಈ ವರದಿಯು ಅನ್ವೇಷಿಸುವ ಪ್ರಯತ್ನ ಮಾಡಿದೆ. ಬ್ರೆಜಿಲ್ ಮತ್ತು ಸೌತ್ ಆಫ್ರಿಕಾ ಅಧ್ಯಕ್ಷತೆಯಲ್ಲಿ ನಡೆಯುವ ಮುಂದಿನೆರಡು ಜಿ20 ಶೃಂಗಸಭೆಯಲ್ಲಿ ಈ ವರದಿಯ ಅಂಶಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳಿಗೆ ಶಿಫಾರಸು ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ