ಒಂದು ವರ್ಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ 10 ಲಕ್ಷ ರೂ ಬಂದರೆ ಏನಾಗುತ್ತೆ? ಈ ನಿಯಮ ತಿಳಿದಿರಿ
Bank Account deposit over Rs 10 Lakh: ಬ್ಯಾಂಕ್ ಖಾತೆಗಳಿರುವುದೇ ಹಣವನ್ನು ಇರಿಸಿಕೊಳ್ಳಲು. ನಮ್ಮ ಆದಾಯ ಮತ್ತು ವ್ಯವಹಾರಕ್ಕೆ ಅನುಗುಣವಾಗಿ ಬ್ಯಾಂಕ್ ಖಾತೆಗೆ ಹಣ ಹರಿದುಬರುತ್ತದೆ. ಬ್ಯಾಂಕ್ ಖಾತೆಯಲ್ಲಿ ಇಷ್ಟೇ ಹಣ ಇಡಬೇಕು ಎನ್ನುವ ಮಿತಿ ಇಲ್ಲ. ಎಷ್ಟು ಬೇಕಾದರೂ ಜಮೆ ಮಾಡಬಹುದು. ಆದರೆ, 10 ಲಕ್ಷ ರೂಗಿಂತ ಹೆಚ್ಚು ಹಣ ಖಾತೆಗೆ ಬಂದರೆ ಆ ಹಣ ಯಾವ ಮೂಲದ್ದು ಎಂದು ಇಲಾಖೆ ಕೇಳಬಹುದು.
ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿಕೊಳ್ಳಬಹುದು. ಎಷ್ಟು ಬೇಕಾದರೂ ಹಣವನ್ನು ಖಾತೆಗಳಲ್ಲಿ ಇರಿಸಿಕೊಳ್ಳಬಹುದು. ಅದಕ್ಕೆ ಮಿತಿ ಎಂಬುದು ಇರುವುದಿಲ್ಲ. ಆದರೆ, ಹೆಚ್ಚು ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕುವ ಮುನ್ನ ಕೆಲವಿಷ್ಟು ನಿಯಮಗಳನ್ನು ತಿಳಿದಿರುವುದು ಉತ್ತಮ. ಒಂದು ನಿಯಮದ ಪ್ರಕಾರ ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಗೆ 10 ಲಕ್ಷ ರೂಗೂ ಹೆಚ್ಚು ಹಣವನ್ನು ನೀವು ಹಾಕಿದರೆ ಆ ಬ್ಯಾಂಕ್ ಅದರ ಮಾಹಿತಿಯನ್ನು ಸಿಬಿಡಿಟಿ ಅಥವಾ ಕೇಂದ್ರೀಯ ನೇರ ತೆರಿಗೆ ಮಂಡಳಿಯ ಗಮನಕ್ಕೆ ತರುತ್ತದೆ.
ಖಾತೆಗೆ ಕ್ಯಾಷ್ ಡೆಪಾಸಿಟ್ ಮಾಡಿದರೂ ಈ ನಿಯಮ ಇರುತ್ತದೆ. ಹಾಗೆಯೇ, ಮ್ಯೂಚುವಲ್ ಫಂಡ್, ಷೇರು, ಬಾಂಡು, ಎಫ್ಡಿ ಇತ್ಯಾದಿ ಹೂಡಿಕೆಗಳಿಗೂ ಈ ನಿಯಮ ಅನ್ವಯ ಆಗುತ್ತದೆ. 10 ಲಕ್ಷ ರೂ ಹಣ ಖಾತೆಗೆ ಬಂದರೆ ಅನಾಹುತ ಏನಿಲ್ಲ. ಆದರೆ, ಆದಾಯ ತೆರಿಗೆ ಇಲಾಖೆ ಆ ಹಣದ ಮೂಲವನ್ನು ಕೇಳಬಹುದು. ಕ್ಯಾಷ್ ಡೆಪಾಸಿಟ್ ಮಾಡಿದ್ದರೆ ಆ ನಗದು ಹಣ ಎಲ್ಲಿಂದ ಬಂತು ಎಂದು ಸಕಾರಣ ನೀಡಬೇಕು.
ಅಕ್ರಮ ಚಟುವಟಿಕೆ ಮೂಲಕ ಈ ಹಣ ಬಂದಿದೆ ಎಂಬುದು ಗೊತ್ತಾದರೆ ಆ ಹಣಕ್ಕೆ ಆದಾಯ ತೆರಿಗೆ ಇಲಾಖೆ ಶೇ. 60ರಷ್ಟು ತೆರಿಗೆ, ಶೇ. 25ರಷ್ಟು ಹೆಚ್ಚುವರಿ ತೆರಿಗೆ ಮತ್ತು ಶೇ. 4ರಷ್ಟು ಸೆಸ್ ವಿಧಿಸುತ್ತದೆ. ಅಂದರೆ, ನೂರಕ್ಕೆ ತೊಂಬತ್ತರಷ್ಟು ಹಣ ತೆರಿಗೆ ಪಾಲಾಗುತ್ತದೆ. ನಿಮಗೆ ಉಳಿಯುವುದು ಶೇ. 10 ಮಾತ್ರವೇ. ಆದ್ದರಿಂದ ನೀವು ದೊಡ್ಡ ಮೊತ್ತದ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಿದ್ದರೆ, ಆ ಹಣದ ಮೂಲ ಎಲ್ಲಿಯದು ಎಂಬುದರ ದಾಖಲೆ ಅಥವಾ ಪುರಾವೆ ನಿಮ್ಮ ಬಳಿ ಇರಬೇಕು.
ಇದನ್ನೂ ಓದಿ: ವಿದೇಶಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ಟಿಸಿಎಸ್; ಬಜೆಟ್ನಲ್ಲಿ ಘೋಷಣೆ ಸಾಧ್ಯತೆ
ಬಡ್ಡಿ ಆದಾಯಕ್ಕೆ ತೆರಿಗೆ
ಸೇವಿಂಗ್ಸ್ ಅಕೌಂಟ್ನಲ್ಲಿ ನೀವು ಎಷ್ಟು ಬೇಕಾದರೂ ಹಣವನ್ನು ಠೇವಣಿ ಇಡಬಹುದು. ಆದರೆ, ಇದರಿಂದ ಬ್ಯಾಂಕ್ ನೀಡುವ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. ಒಂದು ವರ್ಷದಲ್ಲಿ ಈ ರೀತಿಯ ಬಡ್ಡಿ ಹಣ 10,000 ರೂಗಿಂತ ಕಡಿಮೆ ಇದ್ದರೆ ಆಗ ತೆರಿಗೆ ಹಾಕಲಾಗುವುದಿಲ್ಲ. 60 ವರ್ಷ ವಯೋವೃದ್ಧರ ಠೇವಣಿಗೆ ಒಂದು ವರ್ಷದಲ್ಲಿ 50,000 ರೂ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ