
ನವದೆಹಲಿ, ನವೆಂಬರ್ 6: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಆರಂಭ ತುಸು ವಿಳಂಬವಾಗಲಿದೆ. ಈ ವರ್ಷದೊಳಗೆ ಗಗನಯಾನ ಮಿಷನ್ (Gaganyaan mission) ಚಾಲನೆಗೊಳ್ಳಬೇಕೆಂದು ಮೊದಲಿಗೆ ಗುರಿ ಇಡಲಾಗಿತ್ತು. ಬೇರೆ ಬೇರೆ ಕಾರಣಗಳಿಗೆ ತುಸು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರು ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಜನವರಿಯಲ್ಲಿ (2026) ಗಗನಯಾನ ಮಿಷನ್ನಲ್ಲಿ ಮೊದಲ ಸ್ಪೇಸ್ಫ್ಲೈಟ್ ಹಾರಬಹುದು.
ಅಮೆರಿಕದ ನಾಸಾ ಸಂಸ್ಥೆ ಬಾಹ್ಯಾಕಾಶದಲ್ಲಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ಅನ್ನು ನಿರ್ಮಿಸಿದ ರೀತಿಯಲ್ಲಿ ಭಾರತವೂ ಕೂಡ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ (ಭಾರತೀಯ ಅಂತರಿಕ್ಷ ನಿಲ್ದಾಣ) ನಿರ್ಮಿಸುವ ಯೋಜನೆಯನ್ನು 2028ಕ್ಕೆ ಆರಂಭಿಸುವ ನಿರೀಕ್ಷೆ ಇದೆ. 2027ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು (Crewed mission) ನಡೆಸುವ ಗುರಿ ಇಟ್ಟಿದೆ. ಅಷ್ಟರೊಳಗೆ ಮಾನವರಹಿತವಾದ (Uncrewed mission) ಮೂರು ಸ್ಪೇಸ್ಫ್ಲೈಟ್ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ: ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?
2027ಕ್ಕೆ ಗಗನಯಾನದಲ್ಲಿ ಮನುಷ್ಯರನ್ನು ಕಳುಹಿಸುವ ಮುನ್ನ ಈ ಮೂರೂ ಮಾನವರಹಿತ ಮಿಷನ್ ಪೂರ್ಣಗೊಳಿಸಲಾಗುತ್ತದೆ. ಅದಕ್ಕಾಗಿ, ವ್ಯೋಮಿತ್ರ ಎನ್ನುವ ಮಾನವ ರೂಪದ ರೋಬೋವನ್ನು ನಿರ್ಮಿಸಲಾಗಿದೆ. ಈ ಮೂರೂ ಮಿಷನ್ಗಳಲ್ಲಿ ವ್ಯೋಮಿತ್ರ ಪ್ರಯಾಣಿಸಲಿದ್ದು, ಬಾಹ್ಯಾಕಾಶದಲ್ಲಿ ಮನುಷ್ಯರ ಇರುವಿಕೆಗೆ ಇಷ್ಟ ಕಷ್ಟವಾಗುವ ಅಂಶಗಳೇನು ಎಂಬುದನ್ನು ಈ ವ್ಯೋಮಿತ್ರ ಸಹಾಯದಿಂದ ವಿವಿಧ ಪ್ರಯೋಗಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನುಷ್ಯರ ಪ್ರಯಾಣ ನೂರಕ್ಕೆ ನೂರು ಸುರಕ್ಷಿತ ಎಂಬುದು ಖಾತ್ರಿಯಾದ ಬಳಿಕವಷ್ಟೇ ಮಾನವಸಹಿತ ಗಗನಯಾನ ಮಿಷನ್ ಕೈಗೊಳ್ಳಲಾಗುತ್ತದೆ.
ಇಸ್ರೋ ಛೇರ್ಮನ್ ವಿ ನಾರಾಯಣನ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಗಗನಯಾನ ಮಿಷನ್ನ ಭಾಗವಾಗಿ 8,000ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಅಗತ್ಯ ತಯಾರಿ ನಡೆಯುತ್ತಿದೆ. ಗಗನನೌಕೆಗೆ ಬೇಕಾದ ಎಲ್ಲಾ ಹಾರ್ಡ್ವೇರ್ ಭಾಗಗಳು ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ತಲುಪಿವೆ. ಅವುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಪತ್ನಿಗೆ ಕೊಟ್ಟ 12 ಕೋಟಿ ರೂ ಬೆಲೆಯ ಫ್ಯಾಂಟಂ ಕಾರು
ಮೊದಲ ಮಾನವರಹಿತ ಗಗನಯಾನ್ ಮಿಷನ್ ಡಿಸೆಂಬರ್ನಲ್ಲಿ ಶುರುವಾಗಬೇಕಿತ್ತು. ಇದರ ಬದಲು ಜನವರಿಯಲ್ಲಿ ಶುರುವಾಗಿ ಮಾರ್ಚ್ ಅಥವಾ ಏಪ್ರಿಲ್ವರೆಗೂ ಮಿಷನ್ ಇರುತ್ತದೆ. ಅದಕ್ಕೆ ಜಿ1 ಮಿಷನ್ ಎಂದು ಹೆಸರಿಡಲಾಗಿದೆ. ಅದಾದ ಬಳಿಕ ಜಿ2 ಮತ್ತು ಜಿ3 ಮಿಷನ್ ನಡೆಯುತ್ತವೆ.
ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವ ದೇಶಗಳ ಸಂಖ್ಯೆ ಮೂರೇ ಇರುವುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಾಮರ್ಥ್ಯ ತೋರಿವೆ. 2027ಕ್ಕೆ ಭಾರತದ ಗಗನಯಾನ ಯೋಜನೆ ಯಶಸ್ವಿಯಾದರೆ ಈ ಪಟ್ಟಿಗೆ ಭಾರತ 4ನೇ ದೇಶವಾಗಿ ಸೇರ್ಪಡೆಯಾಗುತ್ತದೆ. ಭೂಮಿಯಿಂದ 400 ಕಿಮೀ ಎತ್ತರದ ಕಕ್ಷೆಗೆ ಗಗನಯಾನ ನೌಕೆ ಹೋಗುತ್ತದೆ. 2-3 ಮಂದಿ ಗಗನಯಾತ್ರಿಕರನ್ನು ಕರೆದೊಯ್ಯುವ ಗುರಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ