ಎಚ್​ಎಎಲ್ ಮತ್ತು ಗೇಲ್ ಭರ್ಜರಿ ಲಾಭ; ಎರಡು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಉತ್ತಮ ಹಣಕಾಸು ಸಾಧನೆ

|

Updated on: May 16, 2024 | 6:09 PM

HAL, GAIL Q4 Results Out: ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ನಾಲ್ಕನೇ ಕ್ವಾರ್ಟರ್​ನಲ್ಲಿ 4,309 ಕೋಟಿ ರೂ ನಿವ್ವಳ ಲಾಭ ಕಂಡಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಲಾಭದಲ್ಲಿ ಶೇ. 52ರಷ್ಟು ಹೆಚ್ಚಾಗಿದೆ. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆ ಇದೇ ಅವಧಿಯಲ್ಲಿ 2,176 ಕೋಟಿ ರೂ ನಿವ್ವಳ ಲಾಭ ತೋರಿದೆ. ಹಿಂದಿನ ವರ್ಷದ ಕ್ವಾರ್ಟರ್​ಗೆ ಹೋಲಿಸಿದರೆ ಶೇ. 260ರಷ್ಟು ಲಾಭ ಹೆಚ್ಚಳವಾಗಿದೆ.

ಎಚ್​ಎಎಲ್ ಮತ್ತು ಗೇಲ್ ಭರ್ಜರಿ ಲಾಭ; ಎರಡು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಉತ್ತಮ ಹಣಕಾಸು ಸಾಧನೆ
ಹಿಂದೂಸ್ತಾನ್ ಏರೋನಾಟಿಕ್ಸ್
Follow us on

ನವದೆಹಲಿ, ಮೇ 16: ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ (HAL) ನಾಲ್ಕನೇ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಭರ್ಜರಿ ಲಾಭ ತೋರಿದೆ. ಇಂದು ಗುರುವಾರ ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಎಚ್​ಎಎಲ್ ಸಂಸ್ಥೆ ತನ್ನ ತ್ರೈಮಾಸಿಕ ಹಣಕಾಸು ವರದಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ 4,309 ಕೋಟಿ ರೂ ಆಗಿದೆ. ಮತ್ತೊಂದು ಸರ್ಕಾರಿ ಸ್ವಾಮ್ಯದ ಜಿಎಐಎಲ್ ಸಂಸ್ಥೆಯ (GAIL) ತ್ರೈಮಾಸಿಕ ವರದಿ ಬಿಡುಗಡೆ ಆಗಿದ್ದು, ಅದರ ನಿವ್ವಳ ಲಾಭದಲ್ಲಿ ಶೇ. 260ರಷ್ಟು ಏರಿಕೆ ಆಗಿದೆ.

ದೇಶದ ಪ್ರಮುಖ ಏರೋಸ್ಪೇಸ್ ತಯಾರಿಕಾ ಕಂಪನಿಯಾದ ಎಚ್​ಎಎಲ್ 2024ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಗಳಿಸಿರುವ ನಿವ್ವಳ ಲಾಭ ಹಿಂದಿನ ವರ್ಷದ ಅದೇ ಅವಧಿಯಲ್ಲಿಗಿಂತ ಶೇ. 52ರಷ್ಟು ಹೆಚ್ಚಿದೆ. ರಕ್ಷಣಾ ಸಚಿವಾಲಯದಿಂದ ವಿವಿಧ ಏರ್​ಕ್ರಾಫ್ಟ್​ಗಳ ತಯಾರಿಕೆಗೆ ಗುತ್ತಿಗೆ ಸಿಕ್ಕಿದ್ದು ಎಚ್​ಎಎಲ್​ಗೆ ಭರ್ಜರಿ ಲಾಭ ಹೆಚ್ಚಲು ಕಾರಣವಾಗಿದೆ. ಮೂರನೇ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,261.50 ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ. 341ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

25 ಡಾರ್ನಿಯರ್ ಏರ್​ಕ್ರಾಫ್ಟ್​ಗಳ ಸರಬರಾಜು, ಮಿಗ್-29 ಏರ್​ಕ್ರಾಫ್ಟ್ ಎಂಜಿನ್​ಗಳ ತಯಾರಿಕೆ ಮೊದಲಾದವುಗಳಿಗೆ ಎಚ್​ಎಎಲ್ ಗುತ್ತಿಗೆ ಪಡೆದಿದೆ. ಎಚ್​ಎಎಲ್ ಕೇವಲ ಭಾರತೀಯ ರಕ್ಷಣಾ ಇಲಾಖೆಗೆ ಮಾತ್ರವಲ್ಲ, ಏರ್​ಬಸ್, ಬೋಯಿಂಗ್ ಮೊದಲಾದ ಏರೋಸ್ಪೇಸ್ ಸಂಸ್ಥೆಗಳೊಂದಿಗೂ ಸಹಯೋಗ ಹೊಂದಿದೆ. ತ್ರೈಮಾಸಿಕ ಅವಧಿಯಲ್ಲಿ ಅದರ ಒಟ್ಟಾರೆ ಆದಾಯ 14,769 ಕೋಟಿ ರೂ ಆಗಿದೆ.

ಗ್ಯಾಸ್ ಅಥಾರಿಟಿ ಲಾಭದಲ್ಲಿ ಏರಿಕೆ

ಸರ್ಕಾರಿ ಸ್ವಾಮ್ಯದ ಜಿಎಐಎಲ್ ಅಥವಾ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ ಸಂಸ್ಥೆಯ ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ ಮಿಶ್ರ ಫಲ ಕಂಡಿದೆ. 2024ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​​ನಲ್ಲಿ 2,176.97 ಕೋಟಿ ರೂ ನಿವ್ವಳ ಲಾಭ ಬಂದಿದೆ. ಮೂರನೇ ಕ್ವಾರ್ಟರ್​ಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 22ರಷ್ಟು ಇಳಿಕೆ ಆಗಿದೆ. 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಅದು 3,193 ಕೋಟಿ ರೂ ಲಾಭ ತೋರಿತ್ತು.

ಇದನ್ನೂ ಓದಿ: ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್

ಆದರೆ, ಹಿಂದಿನ ವರ್ಷದ ನಾಲ್ಕನೇ ಕ್ವಾರ್ಟರ್​ಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಬರೋಬ್ಬರಿ ಶೇ. 260ರಷ್ಟು ಜಂಪ್ ಆಗಿದೆ. 2023ರ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಗೇಲ್ ಗಳಿಸಿದ ನಿವ್ವಳ ಲಾಭ ಕೇವಲ 603.52 ಕೋಟಿ ರೂ ಇತ್ತು. ಈಗ ಅದು 2,176 ಕೋಟಿ ರೂಗೆ ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ