ನವದೆಹಲಿ, ಫೆಬ್ರುವರಿ 8: ಒಂದು ಕಾಲದಲ್ಲಿ ವಿಶ್ವದ ಎರಡನೇ ಅತಿ ಶ್ರೀಮಂತ ಎನಿಸಲು ಕ್ಷಣಗಣನೆಯಲ್ಲಿದ್ದ ಗೌತಮ್ ಅದಾನಿ (Gautam Adani) 2022ರ ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ವರದಿ ಪರಿಣಾಮವಾಗಿ 30ಕ್ಕೂ ಹೆಚ್ಚು ಸ್ಥಾನಗಳಾಚೆ ತಳ್ಳಲ್ಪಟ್ಟಿದ್ದರು. ಅಂಬಾನಿಯನ್ನೂ ಮೀರಿಸಿ ಭಾರತದ ನಂಬರ್ ಒನ್ ಶ್ರೀಮಂತನೆಂಬ ಪಟ್ಟವನ್ನೂ ಕಳೆದುಕೊಂಡಿದ್ದರು. ಇತ್ತೀಚಿನ ಕೆಲ ದಿನಗಳಿಂದ ಅದಾನಿ ಮಿಂಚತೊಡಗಿದ್ದಾರೆ. ಅದಾನಿ ಗ್ರೂಪ್ ಕಂಪನಿಗಳ ಸ್ಟಾಕ್ಗಳು ಮೇಲೇರತೊಡಗಿವೆ. ಪರಿಣಾಮವಾಗಿ ಗೌತಮ್ ಅದಾನಿ ಸಂಪತ್ತು (Wealth) ಅದ್ವಿತೀಯವಾಗಿ ಏರತೊಡಗಿದೆ. ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪಟ್ಟಿಯಲ್ಲಿ ಅವರು 100 ಬಿಲಿಯನ್ ಡಾಲರ್ ಗುಂಪಿಗೆ ಸೇರಿದ್ದಾರೆ. ವಿಶ್ವ ಶ್ರೀಮಂತರಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಅಂಬಾನಿಗಿಂತ ಒಂದು ಸ್ಥಾನವಷ್ಟೇ ಹಿಂದಿದ್ದಾರೆ.
ಬ್ಲೂಮ್ಬರ್ಗ್ ಇಂಡೆಕ್ಸ್ ಪ್ರಕಾರ ಗೌತಮ್ ಅದಾನಿ ಸಂಪತ್ತು 101 ಬಿಲಿಯನ್ ಡಾಲರ್ ಇದೆ. ಅಂದರೆ ಸುಮಾರು 84,000 ಕೋಟಿ ರೂ ಆಸ್ತಿ ಒಡೆಯರಾಗಿದ್ದಾರೆ. ಮುಕೇಶ್ ಅಂಬಾನಿ ಸಂಪತ್ತು 108 ಬಿಲಿಯನ್ ಡಾಲರ್ ಇದೆ. ಹಿಂಡನ್ಬರ್ಗ್ ವರದಿ ಬರುವ ಮುನ್ನ ಅದಾನಿ ಹೊಂದಿದ್ದ ಸಂಪತ್ತಿಗೂ ಈಗ ಇರುವ ಸಂಪತ್ತಿಗೂ 60-70 ಬಿಲಿಯನ್ ಡಾಲರ್ನಷ್ಟು ವ್ಯತ್ಯಾಸ ಇದೆ. ಅವರ ಕಂಪನಿಗಳ ಷೇರುಬೆಲೆ ಎರಡು ವರ್ಷದ ಹಿಂದಿನ ಉಚ್ಛ ಮಟ್ಟಕ್ಕೆ ಮರಳಿದಲ್ಲಿ ಗೌತಮ್ ಅದಾನಿ ಟಾಪ್-5 ಪಟ್ಟಿಗೆ ಲಗ್ಗೆ ಇಡುವುದರಲ್ಲಿ ಸಂದೇಹ ಇಲ್ಲ.
ಈ ಶ್ರೀಮಂತರ ಪಟ್ಟಿಯಲ್ಲಿ ಇಲಾನ್ ಮಸ್ಕ್ ಮತ್ತೆ ನಂಬರ್ ಒನ್ ಪಟ್ಟ ಪಡೆದಿದ್ದಾರೆ. ಬರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಿಕ್ಕಿ ಜೆಫ್ ಬೇಜೋಸ್ ಎರಡನೇ ಸ್ಥಾನ ಪಡೆದಿದ್ದಾರೆ. ಟಾಪ್-100 ಪಟ್ಟಿಯಲ್ಲಿ ಭಾರತದ ಒಂಬತ್ತು ಮಂದಿ ಇರುವುದು ವಿಶೇಷ.
ಇದನ್ನೂ ಓದಿ: ವಿರಾಟ್ ಕೊಹ್ಲಿ-ಪ್ಯೂಮಾ 8 ವರ್ಷದ ಒಡನಾಟ ಅಂತ್ಯ; ಎಜಿಲಿಟಾಸ್ಗೆ ಇನ್ನು ವಿರಾಟ್ ಬಲ
ಇನ್ನು, ಫೋರ್ಬ್ಸ್ನ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಆರ್ನಾಲ್ಟ್ ಮೊದಲ ಸ್ಥಾನದಲ್ಲಿದ್ದಾರೆ. ಇಲಾನ್ ಮಸ್ಕ್ ಮತ್ತು ಜೆಫ್ ಬೇಜೋಸ್ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್ಬರ್ಗ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಫೋರ್ಬ್ಸ್ ಪಟ್ಟಿಯಲ್ಲೂ ಅದೇ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಆದರೆ, ಹಿರಿಯಣ್ಣ ವಿನೋದ್ ಅದಾನಿ ಅವರ ಷೇರುಸಂಪತ್ತು ಸೇರಿಸಿದರೆ ಅದಾನಿ ಕುಟುಂಬದ ಷೇರುಸಂಪತ್ತು ಮುಕೇಸ್ ಅಂಬಾನಿಗೆ ಸಮೀಪ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ