ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್​ನಲ್ಲಿ ಉಚಿತ ನ್ಯಾಯಸೇತು ಚಾಟ್​ಬೋಟ್ ಸೇವೆ

Get free legal advice, assistance from govt supported Nyaya Setu chatbot on WhatsApp: ಡಿವೋರ್ಸ್, ವರದಕ್ಷಿಣ, ಹಣಕಾಸು ವಂಚನೆ ಇತ್ಯಾದಿ ಪ್ರಕರಣಗಳಲ್ಲಿ ಕಾನೂನು ಸಲಹೆ ಮತ್ತು ಮಾರ್ಗದರ್ಶನವನ್ನು ಉಚಿತವಾಗಿ ಪಡೆಯಬಹುದು. ಸರ್ಕಾರವು ನ್ಯಾಯಸೇತು ಚಾಟ್​ಬೋಟ್ ಸೇವೆ ಆರಂಭಿಸಿದೆ. ವಾಟ್ಸಾಪ್​ನಲ್ಲಿ ಇದು ಉಚಿತವಾಗಿ ಲಭ್ಯ ಇದೆ. ಕೋರ್ಟ್​ನಲ್ಲಿ ಕೇಸ್ ಹಾಕುವುದು ಇತ್ಯಾದಿ ಕೆಲಸಗಳಿಗೆ ವೃತ್ತಿಪರ ವಕೀಲರನ್ನ ಸಂಪರ್ಕಿಸಬೇಕಾಗುತ್ತದೆ.

ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್​ನಲ್ಲಿ ಉಚಿತ ನ್ಯಾಯಸೇತು ಚಾಟ್​ಬೋಟ್ ಸೇವೆ
ನ್ಯಾಯಸೇತು

Updated on: Jan 05, 2026 | 1:39 PM

ನವದೆಹಲಿ, ಜನವರಿ 5: ಕಾರ್ಪೊರೇಟ್, ಅಪರಾಧ, ಕುಟುಂಬ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಕಾನೂನು ವ್ಯಾಜ್ಯಗಳಿದ್ದಲ್ಲಿ ವಾಟ್ಸಾಪ್​ನಲ್ಲಿ ಉಚಿತವಾಗಿ ತಜ್ಞರ ಸಲಹೆ (Free legal advice) ಪಡೆಯಬಹುದು. ಇಂಥದ್ದೊಂದು ಸೇವೆಯನ್ನು ಸರ್ಕಾರವೇ ಆರಂಭಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು (Ministry of law and justice) ವಾಟ್ಸಾಪ್​ನಲ್ಲಿ ನ್ಯಾಯ ಸೇತು (Nyaya Setu) ಎನ್ನುವ ಕಾನೂನು ಸೇವೆಯನ್ನು 2026ರ ಜನವರಿ 1ರಂದು ಆರಂಭಿಸಿದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ.

ಯಾವ ರೀತಿಯ ಕಾನೂನು ಸೇವೆಗಳು ಲಭ್ಯ?

ವಾಟ್ಸಾಪ್​ನಲ್ಲಿ ಲಭ್ಯ ಇರುವ ನ್ಯಾಯಸೇತು ಸೇವೆಯಲ್ಲಿ ಕಾನೂನು ಸಲಹೆ, ನೆರವು ಮತ್ತು ಸಮಾಲೋಚನೆಗಳನ್ನು ಪಡೆಯಬಹುದು. ಯಾವುದಾದರೂ ವ್ಯಾಜ್ಯ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ ಎಂಬ ಮಾಹಿತಿ ತಿಳಿಯಬಹುದು. ಅಥವಾ, ಆ ವ್ಯಾಜ್ಯದಲ್ಲಿ ನಿಮಗೆ ಯಾವ್ಯಾವ ಕಾನೂನು ಅವಕಾಶಗಳು, ಮಾರ್ಗಗಳು ಇವೆ ಎನ್ನುವ ಸಮಾಲೋಚನೆಗಳನ್ನು ಪಡೆಯಬಹುದು.

ಇದನ್ನೂ ಓದಿ: ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ

ವಾಟ್ಸಾಪ್​ನಲ್ಲಿ ನ್ಯಾಯಸೇತು ಸ್ಕೀಮ್​ಗೆ ಹೇಗೆ ನೊಂದಾಯಿಸುವುದು?

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಟ್ವೀಟ್ ಮಾಡಿದ್ದು, 7217711814 ವಾಟ್ಸಾಪ್ ನಂಬರ್ ಕೊಟ್ಟಿದೆ. ಯಾರು ಬೇಕಾದರೂ ಈ ನಂಬರ್ ಅನ್ನು ಸೇವ್ ಮಾಡಿಕೊಳ್ಳಬಹುದು. ಅಥವಾ ಆ ನಂಬರ್​ಗೆ ಹೈ ಮೆಸೇಜ್ ಕಳುಹಿಸಿದರೂ ಸಾಕು. ಟೆಲಿ-ಲಾ (Tele-Law) ಹೆಸರಿನಲ್ಲಿ ಸ್ವಯಂ ಆಗಿ ಸೇವ್ ಆಗುತ್ತದೆ.

ಕಾನೂನು ಸಚಿವಾಲಯದ ಟ್ವೀಟ್

ಮೂಲತಃ ಇದು ಒಂದು ಚಾಟ್​ಬೋಟ್ (Chatbot) ಆಗಿರುತ್ತದೆ. ನಿಮಗೆ ಮೂಲ ಕಾನೂನು ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ಇದು ಒದಗಿಸುತ್ತದೆ. ವರದಕ್ಷಿಣ ಕಿರುಕುಳ ಇತ್ಯಾದಿ ಕೌಟುಂಬಿಕ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ, ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಇತ್ಯಾದಿ ಸಲಹೆಯನ್ನು ಪಡೆಯಬಹುದು.

ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು

ಈ ಚಾಟ್​ಬೋಟ್ ಕೇವಲ ಕಾನೂನು ಸಲಹೆ ಮತ್ತು ಮಾರ್ಗಗಳನ್ನು ತಿಳಿಸುತ್ತದೆ. ಅದರೆ, ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲಸಗಳಿಗೆ ವೃತ್ತಿಪರ ವಕೀಲರ ನೆರವನ್ನು ಪಡೆಯಲೇಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Mon, 5 January 26