ಇಪಿಎಫ್ ಅಕೌಂಟ್ನಿಂದ ಎಲ್ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ? ಇಲ್ಲಿದೆ ಡೀಟೇಲ್ಸ್
Steps to pay LIC policy premium using EPF account: ಎಲ್ಐಸಿ ಪ್ರೀಮಿಯಮ್ ಹಣ ಕಟ್ಟಲು ಸಾಲ ಮಾಡಬೇಕೆಂದಿದ್ದೀರಾ? ಹಾಗಿದ್ದರೆ ಇಪಿಎಫ್ ಅಕೌಂಟ್ ಬಳಸಿ ಎಲ್ಐಸಿ ಹಣ ಕಟ್ಟಿರಿ. ಇಂಥದ್ದೊಂದು ಸೌಲಭ್ಯವನ್ನು ಇಪಿಎಫ್ಒ ಒದಗಿಸಿದೆ. ನಿಮ್ಮಲ್ಲಿ ಸಕ್ರಿಯವಾಗಿರುವ ಇಪಿಎಫ್ ಅಕೌಂಟ್ ಇದ್ದು ನಿಮ್ಮದೇ ಎಲ್ಐಸಿ ಪಾಲಿಸಿ ಇದ್ದರೆ ಅದಕ್ಕೆ ಪಾವತಿಸಬಹುದು.

ಇಪಿಎಫ್ ಅಕೌಂಟ್ನಲ್ಲಿರುವ ಹಣವನ್ನು ಹಿಂಪಡೆಯುವುದು ಈಗ ಸುಲಭ. ಇದೇ ವೇಳೆ, ಇಪಿಎಫ್ ಹಣವನ್ನು ಎಲ್ಐಸಿ ಪಾಲಿಸಿಯ ಪ್ರೀಮಿಯಮ್ ಕಟ್ಟಲು ಬಳಸುವ ಅವಕಾಶ ಇದೆ. ಇಪಿಎಫ್ ಸ್ಕೀಮ್ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಇಪಿಎಫ್ (EPFO) ಮೂಲಕ ಒಂದೇ ಎಲ್ಐಸಿ ಪ್ರೀಮಿಯಮ್ ಕಟ್ಟಬಹುದು, ಅಥವಾ ಇಡೀ ಪಾಲಿಸಿ ಅವಧಿಗೆ ಇಪಿಎಫ್ನಿಂದ ಪ್ರೀಮಿಯಮ್ ಹಣ ಕಾಲ ಕಾಲಕ್ಕೆ ಸ್ವಯಂ ಆಗಿ ಸಂದಾಯವಾಗುವಂತೆ ಮಾಡಬಹುದು.
ಎಲ್ಐಸಿ ಪಾಲಿಸಿ ನಿಮ್ಮ ಹೆಸರಲ್ಲೇ ಇರಬೇಕು…
ಇಪಿಎಫ್ ಅಕೌಂಟ್ನಿಂದ ಎಲ್ಐಸಿ ಪ್ರೀಮಿಯಮ್ ಹಣ ಪಾವತಿಸಲು ಕೆಲ ಮಾನದಂಡಗಳು ಮತ್ತು ನಿಯಮಗಳಿವೆ:
- ನಿಮ್ಮಲ್ಲಿ ಸಕ್ರಿಯವಾದ ಇಪಿಎಫ್ ಅಕೌಂಟ್ ಇರಬೇಕು
- ಇಪಿಎಫ್ ಅಕೌಂಟ್ನಲ್ಲಿ ಕನಿಷ್ಠ ಎರಡು ತಿಂಗಳ ವೇತನದಷ್ಟಾದರೂ ಬ್ಯಾಲನ್ಸ್ ಇರಬೇಕು.
- ಎಲ್ಐಸಿ ಪಾಲಿಸಿಯು ನಿಮ್ಮ ಹೆಸರಲ್ಲೇ ಇರಬೇಕು.
- ಇನ್ಷೂರೆನ್ಸ್ ಪಾಲಿಸಿಯು ಎಲ್ಐಸಿಯದ್ದೇ ಆಗಿರಬೇಕು. ಬೇರೆ ಖಾಸಗಿ ಕಂಪನಿಗಳ ಇನ್ಷೂರೆನ್ಸ್ ಪಾಲಿಸಿಗೆ ಅನ್ವಯ ಆಗಲ್ಲ.
ಇದನ್ನೂ ಓದಿ: ಆಸ್ತಿ ಮಾರಾಟ; ತೆರಿಗೆ ಉಳಿಸಲು ಸೆಕ್ಷನ್ 54 ಮತ್ತು 54ಎಫ್ ಅವಕಾಶ ಬಳಸಿ
ಇಪಿಎಫ್ನಿಂದ ಎಲ್ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ?
- ಇಪಿಎಫ್ಒಗೆ ಫಾರ್ಮ್-14 ಅನ್ನು ಸಲ್ಲಿಸಿದರೆ ಇದರ ಪ್ರಕ್ರಿಯೆ ಆರಂಭವಾಗುತ್ದೆ.
- ಇಪಿಎಫ್ಒ ವೆಬ್ಸೈಟ್ಗೆ ಹೋಗಿ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು.
- ನಂತರ ಕೆವೈಸಿ ಸೆಕ್ಷನ್ಗೆ ಹೋಗಿ ಎಲ್ಐಸಿ ಪಾಲಿಸಿ ಎಂಬುದನ್ನು ಆಯ್ಕೆ ಮಾಡಿ.
- ನಿಮ್ಮ ಎಲ್ಐಸಿ ಪಾಲಿಸಿ ನಂಬರ್ ಮತ್ತಿತರ ವಿವರವನ್ನು ತುಂಬಿಸಿ, ವೆರಿಫಿಕೇಶನ್ ಪಡೆಯಿರಿ.
- ಇಪಿಎಫ್ಒದಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಯಶಸ್ವಿಯಾಗಿ ಲಿಂಕ್ ಆದಲ್ಲಿ, ನಿಗದಿತ ದಿನದಂದು ಪಾಲಿಸಿ ಹಣ ತನ್ನಂತಾನೆ ಪಾವತಿಯಾಗುತ್ತದೆ.
ವರ್ಷದಲ್ಲಿ ಹೆಚ್ಚು ಮೊತ್ತದ ಪ್ರೀಮಿಯಮ್ ಕಟ್ಟುವ ಅಗತ್ಯ ಇದ್ದಾಗ ಈ ಸೌಲಭ್ಯ ಬಹಳ ಉಪಯುಕ್ತ ಎನಿಸುತ್ತದೆ. ಅದರಲ್ಲೂ ಹೆಚ್ಚಾಗಿ, ಪ್ರೀಮಿಯಮ್ ಕಟ್ಟಲು ನೀವು ಸಾಲ ಮಾಡಬೇಕಾಗಿ ಬರುವಂತಹ ಸಂದರ್ಭ ಇದ್ದರೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಇಪಿಎಫ್ ಎಂಬುದು ರಿಟೈರ್ಮೆಂಟ್ ಅನುಕೂಲಕ್ಕೆಂದು ಇರುವ ಒಂದು ಸ್ಕೀಮ್. ಇದರಲ್ಲಿರುವ ಹಣವನ್ನು ನಿವೃತ್ತಿಯವರೆಗೂ ಉಳಿಸಿಕೊಳ್ಳುವುದು ಬಹಳ ಮುಖ್ಯ. ಉತ್ತಮ ವಾರ್ಷಿಕ ಬಡ್ಡಿ ಸಿಗುತ್ತದೆ. ಅನಿವಾರ್ಯ ಎಂದ ಸಂದರ್ಭದಲ್ಲಿ ಮಾತ್ರ ಇಪಿಎಫ್ ಹಣ ಹಿಂಪಡೆಯುವುದು ಜಾಣತನ. ಹೀಗಾಗಿ, ಎಲ್ಐಸಿ ಪಾಲಿಸಿ ಪ್ರೀಮಿಯಮ್ ಕಟ್ಟಲೋ ಅಥವಾ ಮತ್ತೊಂದು ಕಾರಣಕ್ಕೋ ಇಪಿಎಫ್ ಹಣ ವಿತ್ಡ್ರಾ ಮಾಡುವ ಮುನ್ನ ಯೋಚಿಸುವುದು ಉತ್ತಮ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




