ನವದೆಹಲಿ: ಗೋಫಸ್ಟ್ ಏರ್ಲೈನ್ ಸಂಸ್ಥೆ ಹಣಕಾಸು ಬಿಕ್ಕಟ್ಟು ಪರಿಹಾರಕ್ಕೆ ಸಲ್ಲಿಸಿರುವ ಇನ್ಸಾಲ್ವೆನ್ಸಿ (Insolvency) ಅರ್ಜಿಯನ್ನು ಸ್ವೀಕರಿಸಿದ ಎನ್ಸಿಎಲ್ಟಿ (NCLT) ಆದೇಶವನ್ನು ಎನ್ಸಿಎಲ್ಎಟಿ (NCLAT) ಎತ್ತಿಹಿಡಿದಿದೆ. ಗೋಫಸ್ಟ್ ಸಂಸ್ಥೆಗೆ ವಿಮಾನ ಗುತ್ತಿಗೆ ನೀಡಿರುವ ಮಾಲೀಕರು (Lessors) ಬೇಕಾದರೆ ಎನ್ಸಿಎಲ್ಟಿಗೆ ಸೂಕ್ತ ಅರ್ಜಿಯನ್ನು ಸಲ್ಲಿಸಬಹುದು ಎಂದು ಮೇಲ್ಮನವಿ ನ್ಯಾಯಮಂಡಳಿ ಸೂಚಿಸಿದೆ. ಈ ಬೆಳವಣಿಗೆಯು ಗೋ ಫಸ್ಟ್ ಸಂಸ್ಥೆಗೆ ನಿರಾಳತೆ ತಂದಿದೆ. ಗೋಫಸ್ಟ್ ಏರ್ಲೈನ್ಸ್ಗೆ ವಿಮಾನಗಳನ್ನು ಗುತ್ತಿಗೆಯಾಗಿ ನೀಡಿರುವ ಎಸ್ಎಂಬಿಸಿ ಏವಿಯೇಶನ್ ಕ್ಯಾಪಿಟಲ್, ಎಸ್ಎಫ್ವಿ ಏರ್ಕ್ರಾಫ್ಟ್ ಹೋಲ್ಡಿಂಗ್ಸ್, ಜಿವೈ ಏವಿಯೇಶನ್ ಲೀಸ್ ಮೊದಲಾದ ಕಂಪನಿಗಳು ಎನ್ಸಿಎಲ್ಟಿ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್ಸಿಎಲ್ಎಟಿ) ಮೆಟ್ಟಿಲೇರಿದ್ದವು.
ಇನ್ಸಾಲ್ವೆನ್ಸಿ ಪ್ರಕ್ರಿಯೆ ಮೂಲಕ ಗೋಫಸ್ಟ್ ಸಂಸ್ಥೆ ತನ್ನದಲ್ಲದ ವಿಮಾನಗಳನ್ನು ಇಟ್ಟುಕೊಳ್ಳುವ ತಂತ್ರ ಅನುಸರಿಸುತ್ತಿದೆ ಎಂಬುದು ಈ ವಿಮಾನ ಮಾಲೀಕರ ಆರೋಪವಾಗಿತ್ತು. 26 ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದರೂ ಮತ್ತು ಮುಂಗಡವಾಗಿ ವಿಮಾನದ ಟಿಕೆಟ್ಗಳನ್ನು ಕಾಯ್ದಿರಿಸಿದರೂ ಗೋ ಫಸ್ಟ್ ಸ್ವಯಂಪ್ರೇರಿತವಾಗಿ ಇನ್ಸಾಲ್ವೆನ್ಸಿ ಅರ್ಜಿಯನ್ನು ಹಾಕುವ ಔಚಿತ್ಯವೇನು ಎಂಬುದು ಎಸ್ಎಂಬಿಸಿ ಏವಿಯೇಶನ್ನ ಪ್ರಶ್ನೆಯಾಗಿತ್ತು.
ಗೋಫಸ್ಟ್ ಏರ್ಲೈನ್ಸ್ ಸಂಸ್ಥೆ ತನಗೆ 700-800 ಕೋಟಿ ರೂ ಬಾಕಿ ಹಣ ಉಳಿಸಿಕೊಂಡಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ತಮ್ಮ ವಾದವನ್ನು ಸರಿಯಾಗಿ ಆಲಿಸದೆಯೇ, ಒಟ್ಟಾರೆ ಪರಿಸ್ಥಿತಿ ಅಂದಾಜಿಸದೆಯೇ, ಗೋಫಸ್ಟ್ನ ಇನ್ಸಾಲ್ವೆನ್ಸಿ ಅರ್ಜಿಯನ್ನು ಒಪ್ಪಿಕೊಂಡಿತು ಎಂದು ಎಸ್ಎಂಬಿಸಿ ಏವಿಯೇಶನ್ ಸಂಸ್ಥೆ ದೂರಿದೆ.
ಗೋಫಸ್ಟ್ ಸಲ್ಲಿಸಿದ ಇನ್ಸಾಲ್ವೆನ್ಸಿ ಅರ್ಜಿಯನ್ನು ಸ್ವೀಕರಿಲು ನಿರ್ಧರಿಸಿದ ಎನ್ಸಿಎಲ್ಟಿ ಮೇ 10ರಂದು ನೀಡಿದ ಆದೇಶದಲ್ಲಿ, ಗೋಫಸ್ಟ್ನ ವಿಮಾನಗಳ ಮಾಲೀಕರು 6 ತಿಂಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿತ್ತು. ಗೋಫಸ್ಟ್ ಆಪರೇಟ್ ಮಾಡುತ್ತಿದ್ದ 55 ವಿಮಾನಗಳಲ್ಲಿ 45 ವಿಮಾನಗಳನ್ನು ಅವುಗಳ ಮಾಲೀಕರು ಸುಪರ್ದಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಗೋಫಸ್ಟ್ ಮನವಿ ಮೇರೆಗೆ ಎನ್ಸಿಎಲ್ಟಿ ಆ ಆದೇಶ ನೀಡಿತ್ತು.
ಗೋಫಸ್ಟ್ಗೆ ಅತಿಹೆಚ್ಚು ವಿಮಾನಗಳನ್ನು ಲೀಸ್ಗೆ ನೀಡಿರುವ ಐರ್ಲೆಂಡ್ ಮೂಲದ ಎಸ್ಎಂಬಿಸಿ ಏವಿಯೇಷನ್ ಕ್ಯಾಪಿಟಲ್ ವಿಶ್ವದ ಅತಿದೊಡ್ಡ ವಿಮಾನ ಗುತ್ತಿಗೆದಾರ ಸಂಸ್ಥೆಯಾಗಿದೆ. ಎನ್ಸಿಎಲ್ಟಿ ಆದೇಶ ಬರುವ ಮುನ್ನವೇ ತಾವು ಗೋಫಸ್ಟ್ಗೆ ನೀಡಿದ್ದ ಲೀಸ್ ಒಪ್ಪಂದವನ್ನು ಕಡಿತಗೊಳಿಸಿದ್ದೇವೆ. ಹೀಗಾಗಿ, ವಿಮಾನವನ್ನು ಇಟ್ಟುಕೊಳ್ಳಲು ಗೋಫಸ್ಟ್ಗೆ ಆಗುವುದಿಲ್ಲ. ಲೀಸ್ ಮುಗಿದ ಬಳಿಕ ವಿಮಾನ ಹಾರಾಟ ನಡೆಸುವಂತಿಲ್ಲ ಎಂಬುದು ಎಸ್ಎಂಬಿಸಿ ಏವಿಯೇನ್ ಕ್ಯಾಪಿಟಲ್ ಸಂಸ್ಥೆಯ ವಾದ.
ಇದೀಗ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಲಿಯು (ಎನ್ಸಿಎಲ್ಎಟಿ) ವಿಮಾನ ಮಾಲೀಕ ಸಂಸ್ಥೆಗಳಿಗೆ ಎನ್ಸಿಎಲ್ಟಿ ಬಳಿಕ ಬೇರೊಂದು ಸೂಕ್ತ ಅರ್ಜಿ ಸಲ್ಲಿಸಿ ತಮ್ಮ ದೂರು ದಾಖಲಿಸುವಂತೆ ತಿಳಿಸಿದೆ. ಈಗ ಮುಂದಿನ ಬೆಳವಣಿಗೆ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ.
ಇನ್ನೊಂದು ಅಂಶವೆಂದರೆ, ಮೇ 10ರ ಆದೇಶದ ವೇಳೆ ಎನ್ಸಿಎಲ್ಟಿ ನ್ಯಾಯಮಂಡಳಿಯು ಗೋಫಸ್ಟ್ನ ಇನ್ಸಾಲ್ವೆನ್ಸಿ ಅರ್ಜಿ ಇತ್ಯರ್ಥಪಡಿಸಲು ಐಆರ್ಪಿಯೊಬ್ಬರನ್ನು ನೇಮಿಸಿತ್ತು. ಇವರ ಪ್ರಕಾರ ಗೋಫಸ್ಟ್ ಸಂಸ್ಥೆ ತನ್ನ ವಿಮಾನ ಸರಬರಾಜುದಾರರಿಗೆ 1,000 ರೂ ಸಾಲ ಬಾಕಿ ಉಳಿಸಿಕೊಂಡಿದೆ. ಈ ಸಾಲದ ಮರುಪಾವತಿ ಮಾಡಲು ಇನ್ಸಾಲ್ವೆನ್ಸಿ ಪ್ರಕ್ರಿಯೆ ಸಹಾಯಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.