Travel Scams: ಆನ್ಲೈನ್ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ
Beware of Online Scams: ಅಧ್ಯಯನ ವರದಿಯೊಂದರ ಪ್ರಕಾರ ಪ್ರವಾಸಕ್ಕೆ ಬುಕ್ ಮಾಡುವ ಅರ್ಧದಷ್ಟು ಭಾರತೀಯರು ಹಣ ಉಳಿಸುವ ಆಸೆಯಲ್ಲಿ ಅನ್ಲೈನ್ ಸ್ಕ್ಯಾಮ್ಗಳಿಗೆ ಬಲಿಯಾಗುತ್ತಾರೆ ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ನೀವು ಆನ್ಲೈನ್ನಲ್ಲಿ ಟ್ರಾವೆಲ್ ಬುಕಿಂಗ್ ಮಾಡುವಾಗ ಏನೇನು ಎಚ್ಚರ ವಹಿಸಬಹುದು, ಎಂಬ ವಿವರ ಇಲ್ಲಿದೆ.
ಬೆಂಗಳೂರು: ಈಗ ಎಲ್ಲಾದರೂ ಪ್ರವಾಸ ಹೋಗಬೇಕಾದರೆ ಆನ್ಲೈನ್ನಲ್ಲೇ ಎಲ್ಲವನ್ನೂ ಮುಂಗಡವಾಗಿ ಬುಕ್ ಮಾಡುವ ಸೌಲಭ್ಯ ಇದೆ. ಬಹಳ ಮಂದಿ ಈ ಸೌಲಭ್ಯ ಬಳಸಿಕೊಳ್ಳುತ್ತಾರೆ. ಕೆಲವರು ಡಿಸ್ಕೌಂಟ್ ಆಸೆಯಲ್ಲಿ ಕೆಲ ವಿಚಾರಗಳನ್ನು ಮರೆಯುವುದುಂಟು. ವಿಶ್ವಾಸಾರ್ಹ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಟ್ರಿಪ್ ಬುಕಿಂಗ್ ಮಾಡಬಹುದಾದರೂ, ಸೋಷಿಯಲ್ ಮೀಡಿಯಾಗಳಲ್ಲಿ ಡಿಸ್ಕೌಂಟ್ ಆಫರ್ ಇರುವ ಜಾಹೀರಾತುಗಳನ್ನು ನೋಡಿ ಕ್ಲಿಕ್ ಮಾಡುತ್ತೇವೆ. ಅಥವಾ ವಾಟ್ಸಾಪ್ನಲ್ಲಿ ಭರ್ಜರಿ ಡಿಸ್ಕೌಂಟ್ ಇರುವ ಟ್ರಿಪ್ ಇದೆ ಎಂದು ತಿಳಿಸಿ ಲಿಂಕ್ ಫಾರ್ವರ್ಡ್ ಆಗಿರುತ್ತದೆ. ಡಿಸ್ಕೌಂಟ್ ಆಸೆಯಲ್ಲಿ ಕ್ಲಿಕ್ ಮಾಡಿದರೆ ನೀವು ಯಾವುದಾದರೂ ವಂಚಕ ತಾಣಕ್ಕೆ ನೀವು ಸಿಕ್ಕಿಬಿಡಬಹುದು.
ಮೆಕ್ಯಾಫೀ ಕಾರ್ಪ್ ಎಂಬ ಸಂಸ್ಥೆಯ ಅಧ್ಯಯನ ವರದಿಯೊಂದರ ಪ್ರಕಾರ ಪ್ರವಾಸಕ್ಕೆ ಬುಕ್ ಮಾಡುವ ಅರ್ಧದಷ್ಟು ಭಾರತೀಯರು ಹಣ ಉಳಿಸುವ ಆಸೆಯಲ್ಲಿ ಅನ್ಲೈನ್ ಸ್ಕ್ಯಾಮ್ಗಳಿಗೆ ಬಲಿಯಾಗುತ್ತಾರೆ ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ನೀವು ಆನ್ಲೈನ್ನಲ್ಲಿ ಟ್ರಾವೆಲ್ ಬುಕಿಂಗ್ ಮಾಡುವಾಗ ಏನೇನು ಎಚ್ಚರ ವಹಿಸಬಹುದು, ಎಂಬ ವಿವರ ಇಲ್ಲಿದೆ. ಆನ್ಲೈನ್ನಲ್ಲಿ ಬುಕಿಂಗ್ ಮಾಡುವವರಿಗೆ ಇದು ಪ್ರಯೋಜನ ಆಗಬಹುದು.
ನೈಜ ಯುಆರ್ಎಲ್ ಮರೆಮಾಚುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ
ನೀವು ಪ್ರವಾಸಕ್ಕೆ ಟಿಕೆಟ್ ಮತ್ತು ಹೋಟೆಲ್, ರೆಸಾರ್ಟ್ ಇತ್ಯಾದಿ ಬುಕ್ ಮಾಡುವಾಗ ಅಧಿಕೃತ ವೆಬ್ಸೈಟ್ಗೆ ಹೋಗಿದ್ದೀರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಗೂಗಲ್ನಲ್ಲಿ ನೀವೇ ಸರ್ಚ್ ಮಾಡಿದಾಗ ಹೆಚ್ಚಿನ ಪಾಲು ಅಧಿಕೃತ ಜಾಲತಾಣಗಳೇ ಟಾಪ್ನಲ್ಲಿ ಸಿಗುತ್ತವೆ. ಇವನ್ನು ನೀವು ಬಳಸಲಡ್ಡಿ ಇಲ್ಲ. ಆದರೆ, ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ, ವಾಟ್ಸಾಪ್ಗಳಲ್ಲಿ ನೈಜ ಯುಆರ್ಎಲ್ ಮರೆಮಾಚುವ ಲಿಂಕ್ಗಳು ಬಂದಿರುತ್ತವೆ. ತೀರಾ ಕಡಿಮೆ ಬೆಲೆಯಲ್ಲಿ ಪ್ರವಾಸಕ್ಕೆ ಹೋಗಬಹುದು ಎಂದು ನಿಮ್ಮನ್ನು ಆಕರ್ಷಿಸಬಹುದು. ಅದು ಯಾವುದೋ ವಂಚಕ ತಾಣವಿದ್ದಿರಬಹುದು ಹುಷಾರ್.
ಇದನ್ನೂ ಓದಿ: TCS: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್: 7 ಲಕ್ಷ ರೂ ಮೇಲ್ಪಟ್ಟ ವೆಚ್ಚಕ್ಕೆ ಮಾತ್ರ ಶೇ. 20 ಟಿಸಿಎಸ್- ಸರ್ಕಾರ ಸ್ಪಷ್ಟನೆ
ಟ್ರಾವೆಲ್ ಬುಕಿಂಗ್ ಮಾಡುವಾಗ ವಿಪಿಎನ್ ಬಳಸಿ
ನೀವು ಪಬ್ಲಿಕ್ ವೈಫೈ ಕನೆಕ್ಷನ್ ಮೂಲಕ ಬುಕಿಂಗ್ ಮಾಡುತ್ತಿದ್ದರೆ ಆಗ ವಿಪಿಎನ್ ನೆಟ್ವರ್ಕ್ ಬಳಸುವುದು ಕ್ಷೇಮಕರ. ಸಾರ್ವಜನಿಕ ವೈಫೈ ಕನೆಕ್ಟ್ ಆಗಿದ್ದರೆ ಹ್ಯಾಕಿಂಗ್ ಸುಲಭವಾಗುತ್ತದೆ. ನಿಮ್ಮ ಮೊಬೈಲ್ನಲ್ಲಿರುವ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.
ಟ್ರಾವೆಲ್ ಬುಕ್ ಮಾಡುವ ಮುನ್ನ ತುಸು ಸಂಶೋಧನೆ ಮಾಡಿ
ನೀವು ಪ್ರವಾಸ ವೆಬ್ಸೈಟ್ನಲ್ಲಿ ಯಾವುದಾದರೂ ಹೋಟೆಲ್ ಅಥವ ರೆಸಾರ್ಟ್ ಬುಕ್ ಮಾಡುವ ಮುನ್ನ ಒಂದಿಷ್ಟು ಸಂಶೋಧನೆ ಮಾಡುವುದು ಉತ್ತಮ. ಆ ಹೋಟೆಲ್ ಬೇರೆ ಬುಕಿಂಗ್ ಸೈಟ್ಗಳಲ್ಲಿ ಅಸ್ತಿತ್ವದಲ್ಲಿದೆಯಾ ಎಂದು ಪರಿಶೀಲಿಸಿ. ಅದರಲ್ಲಿ ಕೊಟ್ಟಿರುವ ಕಾಂಟ್ಯಾಕ್ಟ್ ನಂಬರ್ ಮೂಲಕ ಸಂಪರ್ಕಿಸಿ ಆ ಹೋಟೆಲ್ ನಿಜವಾಗಿಯೂ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅವಕಾಶ ಇದ್ದರೆ ಪೇ ಲೇಟರ್ ಆಪ್ಷನ್ ಉಪಯೋಗಿಸಿ.
ಇದನ್ನೂ ಓದಿ: LIC: ಎಲ್ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್
ರಿವೀವ್ಸ್, ರೀಫಂಡ್ ಪಾಲಿಸಿಗಳನ್ನು ಗಮನಿಸಿ
ನೀವು ಹೊಸ ಬುಕಿಂಗ್ ಸೈಟ್ಗೆ ಹೋಗಿದ್ದರೆ ಅದರ ರೀಫಂಡ್ ಪಾಲಿಸಿ ಓದಿ. ಹಾಗೆಯೇ, ಗೂಗಲ್ ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಈ ವೆಬ್ಸೈಟ್ನ ಬಗ್ಗೆ ರಿವ್ಯೂಗಳಿವೆಯಾ ಪರಿಶೀಲಿಸಿ. ತೀರಾ ನಗಣ್ಯವೆನಿಸುವಷ್ಟು ರಿವ್ಯೂಗಳಿದ್ದರೆ ಅಲ್ಲಿಂದ ನಿರ್ಗಮಿಸುವುದು ಒಳ್ಳೆಯದು. ಹೆಚ್ಚು ರಿವ್ಯೂಗಳಿದ್ದರೆ ಅದರಲ್ಲಿ ನೆಗಟಿವ್ ಆಗಿ ಬರೆದಿರುವ ರಿವ್ಯೂಗಳನ್ನು ಹೆಚ್ಚು ಗಮನಿಸಿ.