ರಾಯರ ದರ್ಶನ ಪಡೆದು ವಾಪಸ್ ಬರುವಾಗ ಅಪಘಾತ: ಬಿಜೆಪಿ ಮುಖಂಡ ಸೇರಿ ಮೂವರ ಸಾವು
ಆಂಧ್ರಪ್ರದೇಶದ ಕುರ್ನೂಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಬಿಜೆಪಿ ಮಾಜಿ ಅಧ್ಯಕ್ಷ ನವೀನ್, ಬಿಜೆಪಿ ಮುಖಂಡ ಸಂತೋಷ್ ಮತ್ತು ಲೋಕೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರು, ಮೇ 19: ಆಂಧ್ರದ (Andra Pradesh) ಕರ್ನೂಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಿಜೆಪಿಯ (BJP) ಮಾಜಿ ತಾಲೂಕು ಅಧ್ಯಕ್ಷ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ನವೀನ್ (48), ಬಿಜೆಪಿ ಮುಖಂಡ ಸಂತೋಷ್(35), ಲೋಕೇಶ್(38) ಮೃತ ದುರ್ದೈವಿಗಳು. ಮತ್ತು ಮೂವರಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ನಿವಾಸಿಗಳು ಎಂದು ತಿಳಿದುಬಂದಿದೆ. ನವೀನ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆರೂ ಜನ ಇನೋವಾ ಕಾರಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಮನೆ ಬಾಲ್ಕನಿಯಿಂದ ಬಿದ್ದು ಯುವತಿ ಸಾವು
ಮೈಸೂರು: ಮನೆ ಬಾಲ್ಕನಿಯಿಂದ ಬಿದ್ದು ಯುವತಿ ಮೃತಪಟ್ಟಿರುವ ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಎಸ್.ಆರ್ ರಸ್ತೆಯ ಅಕ್ಷತಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅನಿಕಾ ಇಲಾಯಿ (20) ಮೃತ ಯುವತಿ. ಅನಿಕಾ ಇಲಾಯಿ ಅವರು ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಬಿ.ಎ ಓದುತ್ತಿದ್ದರು. ರವಿವಾರ ರಾತ್ರಿ ಬಾಲ್ಕನಿಯಲ್ಲಿ ಓಡಾಡುತ್ತಾ ಓದುತ್ತಿದ್ದರು. ಬೆಳಗ್ಗೆ ನೋಡಿದಾಗ ಬಾಲ್ಕನಿ ಕೆಳಗೆ ಯುವತಿಯ ಮೃತದೇಹ ಪತ್ತೆಯಾಗಿದೆ.
ಬಾಲ್ಕನಿಯಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಪಾರ್ಟ್ಮೆಂಟ್ನ ಮೊದಲ ಮಹಡಿಯಲ್ಲಿ ಕುಟುಂಬ ವಾಸವಾಗಿದೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Mon, 19 May 25



