ಹೈದರಾಬಾದ್: ಈ ಬಾರಿ ಬೇಸಿಗೆ ಸಿಕ್ಕಾಪಟ್ಟೆ ಸುಡುಸುಡುತ್ತಿದ್ದು ಜನರು ಸಹಜವಾಗಿಯೇ ತಂಪು ಪಾನೀಯಗಳತ್ತ ಮುಗಿಬೀಳುತ್ತಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಜನರು ಬಿಯರ್ (Beer) ಮೊರೆ ಹೋಗಿದ್ದಂತಿದೆ. ಬೇಸಿಗೆ ಸೀಸನ್ ಉಚ್ಛ ಸ್ಥಿತಿಯಲ್ಲಿರುವ ಮೇ ತಿಂಗಳಲ್ಲಿ ತೆಲಂಗಾಣದಲ್ಲಿ ದಾಖಲೆ ಪ್ರಮಾಣದಲ್ಲಿ ಬಿಯರ್ ಮಾರಾಟವಾಗಿರುವುದು ತಿಳಿದುಬಂದಿದೆ. ಟಿವಿ9 ತೆಲುಗು ವಾಹಿನಿಯ ವರದಿ ಪ್ರಕಾರ ತೆಲಂಗಾಣದಲ್ಲಿ ಮೇ ತಿಂಗಳಲ್ಲಿ ಬಿಯರ್ ಸೇಲ್ಸ್ ಭರ್ಜರಿಯಾಗಿದೆ. ಮೇ 1ರಿಂದ 18ರವರೆಗೆ ರಾಜ್ಯಾದ್ಯಂತ 583 ಕೋಟಿ ರೂ ಮೌಲ್ಯದ ಬಿಯರ್ ಮಾರಾಟವಾಗಿದೆಯಂತೆ. ಹಾಗಂತ ತೆಲಂಗಾಣ ಅಬಕಾರಿ ಇಲಾಖೆ ಮಾಹಿತಿ ನೀಡಿದ್ದಾಗಿ ಟಿವಿ9 ತೆಲುಗು ವರದಿ ಮಾಡಿದೆ. ಮೇ ತಿಂಗಳು ಪೂರ್ಣಗೊಳ್ಳಲು ಇನ್ನೂ ಸಮಯ ಇದೆ. ಈ ಒಂದು ತಿಂಗಳಲ್ಲಿ 1,000 ಕೋಟಿ ರೂ ಮೌಲ್ಯದ ಬಿಯರ್ ತೆಲಂಗಾಣದಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಅಂದರೆ ಬಿಯರ್ವೊಂದರಿಂದಲೇ ಸರ್ಕಾರಕ್ಕೆ ಒಂದು ತಿಂಗಳಲ್ಲಿ 1,000ಕೋಟಿ ಆದಾಯ ಬರಲಿದೆ.
ಅಬಕಾರಿ ಇಲಾಖೆ ದತ್ತಾಂಶದ ಪ್ರಕಾರ ಮೇ 1ರಿಂದ 18ರವರೆಗೂ ತೆಲಂಗಾಣದ ವಿವಿಧೆಡೆ 35,25,247 ಕ್ಯಾನ್ಗಳಷ್ಟು ಬಿಯರ್ ಮಾರಾಟವಾಗಿದೆ. ನಲಗೊಂಡ ಜಿಲ್ಲೆಯಲ್ಲಿ ಅತಿಹೆಚ್ಚು ಬಿಯರ್ ಮಾರಾಟವಾಗಿದೆ. ಇಲ್ಲಿ 48.14 ಕೋಟಿ ರೂ ಮೌಲ್ಯದ ಬಿಯರ್ ಸೇಲ್ ಆಗಿದೆ. ನಲಗೊಂಡ ಜಿಲ್ಲೆಯ ನಂತರದ ಸ್ಥಾನ ಕರೀಮ್ನಗರದ್ದು.
ಕುತೂಹಲ ಎಂದರೆ ಜನವರಿ ತಿಂಗಳ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೇವಲ 3 ದಿನದ ಅವಧಿಯಲ್ಲಿ 450 ಕೋಟಿ ರೂಗೂ ಹೆಚ್ಚು ಮೌಲ್ಯದ ಬಿಯರ್ ಮಾರಾಟ ತೆಲಂಗಾಣದಲ್ಲಿ ಆಗಿತ್ತು. ಮದ್ಯ ಮಾರಾಟ ಯಾವುದೇ ಸರ್ಕಾರಕ್ಕೂ ಪ್ರಮುಖ ಆದಾಯ ಮೂಲವಾಗಿದೆ. ಬಿಯರ್ ಮೇಲಿನ ಎಂಪಿಅರ್ ದರಕ್ಕೆ ರಾಜ್ಯ ಸರ್ಕಾರ ಶೇ. 50ರಷ್ಟು ಅಬಕಾರಿ ಸುಂಕ ವಿಧಿಸುತ್ತದೆ. ಬೇರೆ ಮದ್ಯಗಳಿಗೆ ಎಕ್ಸೈಸ್ ಡ್ಯೂಟಿ ಶೇ. 80-85 ಇದೆ. ಬಿಯರ್ ಸೇರಿದಂತೆ ಒಟ್ಟಾರೆ ಮದ್ಯ ಮಾರಾಟದಿದ ತೆಲಂಗಾಣ ಸರ್ಕಾರಕ್ಕೆ 40,000 ಕೋಟಿ ರೂ ಆದಾಯ ಬರುವ ನಿರೀಕ್ಷೆ ಇದೆ.
ಇನ್ನು ಕರ್ನಾಟಕದಲ್ಲೂ ಮದ್ಯ ಮಾರಾಟ ಪ್ರಮಾಣ ಕಡಿಮೆ ಏನಿಲ್ಲ. ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಬರುವ ಆದಾಯ ವರ್ಷಕ್ಕೆ 25,000 ಕೋಟಿಗಿಂತಲೂ ಹೆಚ್ಚು. ಈ ಹಣಕಾಸು ವರ್ಷದಲ್ಲಿ 35,000 ಕೋಟಿ ರೂ ಆದಾಯ ಗಳಿಸುವ ಗುರಿ ಇಟ್ಟುಕೊಂಡಿದೆ.
(ಗಮನಿಸಿ: ಬಿಯರ್ ಸೇರಿದಂತೆ ಯಾವುದೇ ಮದ್ಯದಲ್ಲಿ ಆಲ್ಕೋಹಾಲ್ ಅಂಶಗಳಿರುವುದರಿಂದ ಅದರ ಸೇವನೆ ಆರೋಗ್ಯಕ್ಕೆ ಮಾರಕ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿರುವ ಸಂಗತಿ. ಯಾವುದೇ ರೀತಿಯ ಮದ್ಯದ ಸೇವನೆ ಮಾಡದಿರಿ)