ಭಾರತದ ಅತ್ಯಂತ ಹಳೆಯ ಬಿಸಿನೆಸ್ ಫ್ಯಾಮಿಲಿಗಳಲ್ಲಿ ಒಂದೆನಿಸಿರುವ ಗೋದ್ರೇಜ್ ಗ್ರೂಪ್ ಕೊನೆಗೂ ವಿಭಜನೆ ಆಗಿದೆ. ಬೀಗ ತಯಾರಿಕೆಯಿಂದ (locksmithing) ಹಿಡಿದು ಗೃಹೋಪಕರಣ ವಸ್ತುಗಳ ತಯಾರಿಕೆವರೆಗೂ ಗೋದ್ರೇಜ್ ಗ್ರೂಪ್ ಬಿಸಿನೆಸ್ ಸಾಮ್ರಾಜ್ಯ (godrej group business) ವಿಸ್ತರಣೆ ಇದ್ದು ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲೊಂದೆನಿಸಿದೆ. ಗುಜರಾತ್ ಮೂಲದ ಪಾರ್ಸಿ ಜನಾಂಗಕ್ಕೆ (Parsis) ಸೇರಿದ ಗೋದ್ರೇಜ್ ಫ್ಯಾಮಿಲಿ ಬಿಸಿನೆಸ್ ಬಹುತೇಕ ಮುಂಬೈನಲ್ಲಿ ನೆಲೆ ನಿಂತಿದೆ. 127 ವರ್ಷಗಳ ಕಾಲ ಒಗ್ಗಟಿನಿಂದ ಬಿಸಿನೆಸ್ ನಡೆಸಿಕೊಂಡು ಬರುತ್ತಿದ್ದ ಈ ಕುಟುಂಬ ಸದಸ್ಯರು ಈಗ ಗೌರವ ಪೂರ್ವಕವಾಗಿ ಮತ್ತು ಸರ್ವಸಮ್ಮತದಿಂದ ವ್ಯವಹಾರದ ಪಾಲು ಹಂಚಿಕೊಂಡಿದ್ದಾರೆ. ಇದೀಗ ಆದಿ ಗೋದ್ರೇಜ್ ಮತ್ತು ನಾದಿರ್ ಗೋದ್ರೇಜ್ ಫ್ಯಾಮಿಲಿ ಸೇರಿ ಒಂದು ಪಾಲು ಪಡೆದಿದ್ದಾರೆ. ಜಮ್ಶಿದ್ ಗೋದ್ರೇಜ್ ಮತ್ತು ಸ್ಮಿತಾ ಗೋದ್ರೇಜ್ ಕ್ರಿಷ್ನಾ ಕುಟುಂಬದವರು ಸೇರಿ ಇನ್ನೊಂದು ಪಾಲು ಪಡೆದಿದ್ದಾರೆ.
ಗೋದ್ರೇಜ್ ಕುಟುಂಬದವರು ಇರಾನೀ ಮೂಲದ ಪಾರ್ಸಿ ಜನಾಂಗದವರು. ಗುಜರಾತ್ನಿಂದ ಮುಂಬೈಗೆ ಬಂದು ನೆಲಸಿದ್ದಾರೆ. ವೈದ್ಯಕೀಯ ಉಪಕರಣ ಮಾರಾಟದ ಬಿಸಿನೆಸ್ನಲ್ಲಿ ವಿಫಲವಾದ ಬಳಿಕ 1897ರಲ್ಲಿ ಬೀಗ ತಯಾರಿಸಿ ಮಾರಾಟ ಮಾಡುವ ವ್ಯವಹಾರ ಆರಂಭಿಸಿದರು. ಅರ್ದೇಶಿರ್ ಗೋದ್ರೇಜ್ ಮತ್ತು ಪಿರೋಜ್ಶಾ ಗೋದ್ರೇಜ್ ಸಹೋದರರು ಸೇರಿ ಶುರುವಿಟ್ಟ ಬಿಸಿನೆಸ್ ಇದು. ಮುಂಬೈನಲ್ಲಿ ಕಳ್ಳತನ ಹೆಚ್ಚುತ್ತಿದ್ದರಿಂದ ಬೀಗದ ಅವಶ್ಯಕತೆ ಕಂಡು ಶುರು ಮಾಡಿದ ಆ ಬಿಸಿನೆಸ್ ಗೋದ್ರೇಜ್ ಫ್ಯಾಮಿಲಿಯ ಕೈಹಿಡಿಯಿತು. ಅಲ್ಲಿಂದ ಈ ಫ್ಯಾಮಿಲಿ ತಿರುಗಿ ನೋಡಿದ್ದೇ ಇಲ್ಲ. ಇವರ ಮೊಮ್ಮಕ್ಕಳು ಬಿಸಿನೆಸ್ ಅನ್ನು ಬೇರೆ ಬೇರೆ ಸ್ತರಕ್ಕೆ ಕೊಂಡೊಯ್ದಿದ್ದಾರೆ.
ಗೋದ್ರೇಜ್ ಗ್ರೂಪ್ನ ಮೂಲ ಸಂಸ್ಥಾಪಕರು ಅರ್ದೇಶಿರ್. ಇವರಿಗೆ ಸಹಾಯವಾಗಿದ್ದವರು ಪಿರೋಜ್ಷಾ. ಇಲ್ಲಿ ಅರ್ದೇಶಿರ್ ಗೋದ್ರೇಜ್ಗೆ ಸಂತಾನ ಇರಲಿಲ್ಲ. ಪಿರೋಜ್ಶಾ ಅವರಿಗೆ ಸೊಹ್ರಾಬ್, ದೋಸಾ, ಬುರ್ಜೋರ್ ಮತ್ತು ನಾವಲ್ ಎಂಬ ನಾಲ್ವರು ಮಕ್ಕಳು. ಅರ್ದೇಶಿರ್ಗೆ ಸಂತಾನ ಇಲ್ಲದ್ದರಿಂದ ಪಿರೋಜ್ಶಾರ ನಾಲ್ವರು ಮಕ್ಕಳಿಗೆ ಗೋದ್ರೇಜ್ ಗ್ರೂಪ್ನ ಇಡೀ ಬಿಸಿನೆಸ್ ಸಿಕ್ಕಿತು. ಈ ನಾಲ್ವರು ಮಕ್ಕಳ ಕುಟುಂಬಗಳೇ ಇವತ್ತು ಗೋದ್ರೇಜ್ ಫ್ಯಾಮಿಲಿ ಎನಿಸಿರುವುದು.
ಇದನ್ನೂ ಓದಿ: ದುಬೈನಲ್ಲಿ ಸಿದ್ದವಾಗುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್ಪೋರ್ಟ್; 400 ಗೇಟ್, 5 ರನ್ವೇ ಇರುವ ಟರ್ಮಿನಲ್ನ ವಿಶೇಷತೆಗಳು ಹಲವು
ನಾಲ್ವರು ಮಕ್ಕಳಾದ ಸೊಹ್ರಾಬ್, ದೋಸಾ, ಬುರ್ಜೋರ್ ಮತ್ತು ನಾವಲ್ ಅವರ ಪೈಕಿ ಸೊಹ್ರಾಬ್ ಗೋದ್ರೇಜ್ಗೆ ಸಂತಾನ ಇಲ್ಲ. ದೋಸಾ ಗೋದ್ರೇಜ್ ಅವರಿಗೆ ರಿಷದ್ ಎಂಬ ಮಗ ಇದ್ದರಾದರೂ ರಿಷದ್ಗೆ ಸಂತಾನ ಭಾಗ್ಯ ಸಿಗಲಿಲ್ಲ. ಈಗ ಬುರ್ಜೋರ್ ಗೋದ್ರೇಜ್ ಮತ್ತು ನಾವಲ್ ಗೋದ್ರೇಜ್ ಅವರಿಗೆ ತಲಾ ಇಬ್ಬರು ಮಕ್ಕಳಿದ್ದಾರೆ. ಗೋದ್ರೇಜ್ ಗ್ರೂಪ್ನ ಬಿಸಿನೆಸ್ ಈಗ ಈ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಸೇರಿದೆ.
ಬುರ್ಜೋರ್ ಗೋದ್ರೇಜ್ ಅವರಿಗೆ ಆದಿ ಗೋದ್ರೇಜ್ ಮತ್ತು ನಾದಿರ್ ಗೋದ್ರೇಜ್ ಎಂಬಿಬ್ಬರು ಮಕ್ಕಳಿದ್ದಾರೆ. ನಾವಲ್ ಗೋದ್ರೇಜ್ ಅವರಿಗೆ ಜಮ್ಶಿದ್ ಗೋದ್ರೇಜ್ ಮತ್ತು ಸ್ಮಿತಾ ಗೋದ್ರೇಜ್ ಎಂಬಿಬ್ಬರು ಮಕ್ಕಳಿದ್ದಾರೆ. ಈಗ ಗೋದ್ರೇಜ್ ಗ್ರೂಪ್ನ ವ್ಯವಹಾರಗಳನ್ನು ಬುರ್ಜೋರ್ ಗೋದ್ರೇಜ್ ಕುಟುಂಬಕ್ಕೆ ಒಂದು ಪಾಲು ಮತ್ತು ನಾವಲ್ ಗೋದ್ರೇಜ್ ಕುಟುಂಬಕ್ಕೆ ಇನ್ನೊಂದು ಪಾಲು ಮಾಡಲಾಗಿದೆ.
ಬುರ್ಜೋರ್ ಗೋದ್ರೇಜ್ನ ಮಕ್ಕಳಾದ ಆದಿ ಗೋದ್ರೇಜ್ ಮತ್ತು ನಾದಿರ್ ಗೋದ್ರೇಜ್ ಅವರಿಗೆ ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪ್ನ ಬಿಸಿನೆಸ್ ಸಿಕ್ಕಿದೆ. ಗೋದ್ರೇಜ್ ಇಂಡಸ್ಟ್ರೀಸ್, ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್, ಗೋದ್ರೇಜ್ ಪ್ರಾಪರ್ಟೀಸ್, ಗೋದ್ರೇಜ್ ಆಗ್ರೋವೆಟ್, ಆಸ್ಟೆಕ್ ಲೈಫ್ ಸೈನ್ಸಸ್ ಮೊದಲಾದ ಲಿಸ್ಟೆಟ್ ಕಂಪನಿಗಳು ಇವರ ಹಿಡಿತಕ್ಕೆ ಸಿಗಲಿವೆ.
ನಾದಿರ್ ಗೋದ್ರೇಜ್ ಅವರು ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪ್ನ ಮುಖ್ಯಸ್ಥರಾಗಿರುತ್ತಾರೆ. ಅವರ ಮತ್ತು ಆದಿ ಗೋದ್ರೇಜ್ನ ಕುಟುಂಬದವರು ಮುಖ್ಯ ಸ್ಥಾನದಲ್ಲಿರುತ್ತಾರೆ. ಆದಿ ಗೋದ್ರೇಜ್ನ ಮಗ 42 ವರ್ಷದ ಪಿರೋಜ್ಶಾ ಅವರು ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್ ಆಗಿರುತ್ತಾರೆ. 2026ರವರೆಗೂ ಮಾತ್ರ ನಾದಿರ್ ಛೇರ್ಮನ್ ಆಗಿರುತ್ತಾರೆ. ಆ ಬಳಿಕ ಪಿರೋಜ್ಶಾ ಆ ಹುದ್ದೆ ಪಡೆಯಲಿದ್ದಾರೆ.
ಇದನ್ನೂ ಓದಿ: ಶಾಲಾ ಪರೀಕ್ಷೆಯಲ್ಲಿ ಫೇಲ್ ಆಗಿ ಊರು ಬಿಟ್ಟು ಹೋದ ಉಡುಪಿ ಹುಡುಗ ಇವತ್ತು ಉತ್ತರ ಭಾರತದ ದೋಸೆ ಕಿಂಗ್
ನಾವಲ್ ಗೋದ್ರೇಜ್ ಅವರ ಇಬ್ಬರು ಮಕ್ಕಳಾದ ಜಮ್ಶಿಡ್ ಗೋದ್ರೇಜ್ ಮತ್ತು ಸ್ಮಿತಾ ಗೋದ್ರೇಜ್ ಅವರಿಗೆ ಗೋದ್ರೇಜ್ ಎಂಟರ್ಪ್ರೈಸಸ್ ಗ್ರೂಪ್ ಸಿಕ್ಕಿದೆ. ವೈಮಾನಿಕ ಕ್ಷೇತ್ರದಿಂದ ಹಿಡಿದು ಡಿಫೆನ್ಸ್, ಐಟಿ ಸಾಫ್ಟ್ವೇರ್ ಇತ್ಯಾದಿವರೆಗೂ ಬಿಸಿನೆಸ್ ಇದೆ. ಸದ್ಯ ಜಮ್ಶಿದ್ ಗೋದ್ರೇಜ್ ಅವರು ಈ ಗ್ರೂಪ್ನ ಛೇರ್ಮನ್ ಮತ್ತು ಎಂಡಿ ಆಗಿರುತ್ತಾರೆ.
ಸ್ಮಿತಾ ಗೋದ್ರೇಜ್ ಅವರ ಮಗಳಾದ 42 ವರ್ಷದ ನೈರಿಕಾ ಹೋಳ್ಕರ್ ಅವರು ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುತ್ತಾರೆ.
ಮುಂಬೈನ ವಿಕ್ರೋಲಿಯಲ್ಲಿ 3,400 ಎಕರೆಯಷ್ಟು ಜಮೀನು ಆಸ್ತಿ ಇವರಿಗೆ ಸಿಗುತ್ತದೆ. ಮುಂಬೈನ ಹೃದಯಭಾಗದಲ್ಲಿ ಇದು ಇದೆ. ಈ ಪೈಕಿ 1,000 ಎಕರೆಯನ್ನು ಅತ್ಯುತ್ತಮ ರಿಯಲ್ ಎಸ್ಟೇಟ್ ಪ್ರಾಪರ್ಟಿಯಾಗಿ ಅಭಿವೃದ್ಧಿಪಡಿಸಬಹುದು. ಒಂದು ಅಂದಾಜು ಪ್ರಕಾರ ಒಂದು ಲಕ್ಷ ಕೋಟಿ ರೂ ಆದಾಯವನ್ನು ಈ ಜಮೀನಿನಿಂದ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ