
ಇವತ್ತಿನ (ಸೆಪ್ಟೆಂಬರ್ 5) ಚಿನ್ನದ ದರ (Gold price )22 ಕ್ಯಾರೆಟ್ ನದ್ದಾದರೆ ಪ್ರತಿ ಗ್ರಾಮ್ ಗೆ 9,865 ರೂಪಾಯಿ ಹಾಗೂ 24 ಕ್ಯಾರೆಟ್ ನದ್ದಾದರೆ ಪ್ರತಿ ಗ್ರಾಮ್ ಗೆ 10,762 ರೂಪಾಯಿ ಇದೆ. ಈಗಿನ ಟ್ರೆಂಡ್ ಗಮನಿಸಿದರೆ ಈ ಮೇಲ್ಮುಖದ ಪ್ರಯಾಣ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಆದರೆ 2024ರ ಜುಲೈ ತಿಂಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್ ಗೆ 7,228 ರೂಪಾಯಿಯಷ್ಟಿತ್ತು. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್ ಗೆ 6,625 ರೂಪಾಯಿಯಷ್ಟಿತ್ತು. ಹದಿಮೂರು ತಿಂಗಳ ಅಂತರದಲ್ಲಿ ಚಿನ್ನದ ಬೆಲೆ ಹೆಚ್ಚೂ ಕಡಿಮೆ ಶೇಕಡಾ 50ರಷ್ಟು ಹೆಚ್ಚಾಗಿದೆ. ಇದಕ್ಕೆ ಜೋಡಿ ಅನ್ನೋ ಹಾಗೆ ಬೆಳ್ಳಿಯ ಬೆಲೆಯೂ ಕೇಜಿಗೆ ಒಂದೂಕಾಲು ಲಕ್ಷ ರೂಪಾಯಿ ದಾಟಿದೆ. ಬಹಳ ಜನ ಈ ಮೇಲ್ಕಂಡ ಲೆಕ್ಕವನ್ನು ನೋಡಿ, ಅಯ್ಯೋ ವರ್ಷದ ಹಿಂದೆ ಚಿನ್ನದ ಒಡವೆ ತಗೊಂಡುಬಿಟ್ಟಿದ್ದರೆ ಅಂತ ಅಂದುಕೊಳ್ಳಬಹುದು. ಆದರೆ ನೆನಪಿಟ್ಟುಕೊಳ್ಳಬೇಕಾದ್ದು ಏನೆಂದರೆ, ಚಿನ್ನದ ಒಡವೆಯನ್ನು ಹೂಡಿಕೆ ಅಂತ ಮಾಡುವವರು ಅಷ್ಟೇನೂ ಲಾಭದಲ್ಲಿ ಇರಲ್ಲ. ಇವತ್ತಿನ ಲೆಕ್ಕಾಚಾರದಲ್ಲಿ ನೂರು ಗ್ರಾಮ್ ಜ್ಯುವೆಲ್ಲರಿ ಮಾಡಿಸದರೆ, ಸರಾಸರಿ ಎಷ್ಟು ಹಣ ಬೇಕಾದಬಹುದು ಎಂಬ ಲೆಕ್ಕ ಹೀಗಿದೆ:
ಶೇಕಡಾ 8ರಿಂದ 10ರಷ್ಟು ವೇಸ್ಟೇಜ್ ಅಂತ ಹಾಕಲಾಗುತ್ತೆ. 9865X8= 78,920
(ಅದರಲ್ಲಿ ಕಡಿಮೆಯ ಶೇ ಎಂಟರ ವೇಸ್ಟೇಜ್ ಅಂದುಕೊಂಡರೆ ಎಂಟು ಗ್ರಾಮ್ ವೇಸ್ಟೇಜ್)
ಮೇಕಿಂಗ್ ಚಾರ್ಜಸ್ (ಇದು ಕೆಲವರು ತುಂಬ ಕಡಿಮೆ ತೆಗೆದುಕೊಳ್ತಾರೆ, ಇನ್ನೂ ಕೆಲವರು ತಗೊಳ್ಳಲ್ಲ) 98.65X100= 9865
(ಸರಾಸರಿ ಶೇಕಡಾ ಒಂದರಷ್ಟು ಮೇಕಿಂಗ್ ಚಾರ್ಜ್ ಅಂದುಕೊಂಡರೆ ಪ್ರತಿ ಗ್ರಾಮ್ ಗೆ 98.65)
ಚಿನ್ನದ ಮೇಲೆ ಶೇಕಡಾ 3ರಷ್ಟು ಜಿಎಸ್ ಟಿ ಹಾಗೂ ಮೇಕಿಂಗ್ ಚಾರ್ಜಸ್ ಮೇಲೆ ಶೇ 5ರಷ್ಟು ಜಿಎಸ್ ಟಿ (ಇದು ಸೆಪ್ಟೆಂಬರ್ 22ರಿಂದ ಜಾರಿ)
ಚಿನ್ನದ ಮೇಲೆ ಜಿಎಸ್ ಟಿ- (100+8X9865X3%) 31,963
ಮೇಕಿಂಗ್ ಚಾರ್ಜ್ ಮೇಲಿನ ಜಿಎಸ್ ಟಿ- 493
ಅಲ್ಲಿಗೆ ನೂರು ಗ್ರಾಮ್ ಚಿನ್ನದ ಒಡವೆ ಖರೀದಿ ಮಾಡುವುದಕ್ಕೆ ಆಗುವ ಒಟ್ಟು ಮೊತ್ತ- 11,06,841 ರೂಪಾಯಿ
ಇದು ಕೂಡ ಬರೀ ಚಿನ್ನವನ್ನೇ ಬಳಸಿ ಮಾಡಿದಂಥ ಒಡವೆಗೆ ಬೀಳುವಂಥ ಪ್ರತಿ ಗ್ರಾಮ್ ಖರ್ಚು. ಇದರಲ್ಲೇನಾದರೂ ಮಣಿಗಳು, ಬೆಲೆಬಾಳುವ ರತ್ನಗಳು ಸೇರಿದರೆ ಅದರ ಖರೀದಿ ಲೆಕ್ಕ ಬೇರೆ ಆಗುತ್ತದೆ. ಇನ್ನು ಕೆಲವು ಒಡವೆಗಳಿಗೆ ಮೇಕಿಂಗ್ ಚಾರ್ಜ್ ಎಂಬುದು ಶೇ 20ರಿಂದ 24ರಷ್ಟಿದೆ. ಅಂದರೆ, ಪ್ರತಿ ಗ್ರಾಮ್ ಚಿನ್ನದ ಬೆಲೆ 9865 ರೂಪಾಯಿ ಇದ್ದಲ್ಲಿ, ಅದರ ಮೇಕಿಂಗ್ ವೆಚ್ಚ ಪ್ರತಿ ಗ್ರಾಮ್ ಗೆ 2368 ರೂಪಾಯಿ ಬೀಳುತ್ತದೆ. ಆ್ಯಂಟಿಕ್ ಒಡವೆಗಳು ಅಂತಾರಲ್ಲ ಅದರ ವೇಸ್ಟೇಜ್- ಮೇಕಿಂಗ್ ಚಾರ್ಜ್ ವೆಚ್ಚ ಮತ್ತೂ ಬೇರೆ.
ಪ್ರತಿ ಗ್ರಾಮ್ ಚಿನ್ನಕ್ಕೆ 11 ಸಾವಿರ ರೂಪಾಯಿ ಕೊಟ್ಟು ಒಡವೆ ಮಾಡಿಸಿಕೊಂಡವರಿಗೆ ಏನೋ ತುರ್ತಾಗಿ ಹಣ ಬೇಕು ಅಂತಾದಲ್ಲಿ ಗೋಲ್ಡ್ ಲೋನ್ ಗೆ ಹೋದಲ್ಲಿ ಇವತ್ತಿನ ಲೆಕ್ಕಕ್ಕೆ ಗ್ರಾಮ್ ಗೆ 6 ಸಾವಿರ ರೂಪಾಯಿ ಸಿಗುತ್ತದೆ. ಅದರಲ್ಲಿ ಒಟ್ಟಾರೆ ಚಿನ್ನದ ತೂಕದಲ್ಲಿ ಶೇಕಡಾ 10ರಷ್ಟನ್ನು ಕಡಿಮೆ ಲೆಕ್ಕಕ್ಕೆ ತಗೊಂಡು, ಸಾಲ ನೀಡಲಾಗುತ್ತದೆ. ಇಲ್ಲ ಒಡವೆಯನ್ನೇ ಮಾರಿಬಿಡೋಣ ಅಂದುಕೊಂಡಲ್ಲಿ ಅವತ್ತಿನ ಮಾರ್ಕೆಟ್ ನಲ್ಲಿನ ಚಿನ್ನದ ದರ ಏನಿರುತ್ತೋ ಅದಕ್ಕೆ ಪ್ರತಿ ಗ್ರಾಮ್ ಗೆ 500ರಿಂದ 600 ರೂಪಾಯಿ ಕಡಿಮೆ ಬೆಲೆಗೆ ವಾಪಸ್ ಖರೀದಿ ಮಾಡ್ತಾರೆ. ನಿಮ್ಮ ಡಿಸೈನ್, ಅದರಲ್ಲಿನ ಹರಳುಗಳು, ಪ್ಯಾಟರ್ನ್ ಇದ್ಯಾವುದೂ ಲೆಕ್ಕಕ್ಕೆ ಬರಲ್ಲ.
ಇದನ್ನೂ ಓದಿ; ಚಿನ್ನ ಮೇಲೇನು ಪರಿಣಾಮ? ಇಲ್ಲಿದೆ ಚಿನ್ನಕ್ಕಿರುವ ವಿವಿಧ ತೆರಿಗೆ ದರ
ಚಿನ್ನ ಖರೀದಿಯನ್ನು ಹೂಡಿಕೆ ಸಲುವಾಗಿ ಮಾಡುವಂಥವರಿಗೆ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಖರೀದಿ ಮಾಡುವುದು ಉತ್ತಮ ಆಯ್ಕೆ. ಆನ್ ಲೈನ್ ನಲ್ಲಿಯೇ ಖರೀದಿ ಮಾಡಬಹುದು ಹಾಗೂ ಅದನ್ನು ಬೇಕೆನಿಸಿದಾಗ ಭೌತಿಕ ಸ್ವರೂಪಕ್ಕೆ (ಫಿಸಿಕಲ್ ಫಾರ್ಮ್) ಬದಲಿಸಿಕೊಳ್ಳಲು ಅವಕಾಶ ಇರುತ್ತದೆ. ಇದರಲ್ಲಿ ವೇಸ್ಟೇಜ್ ಹಾಗೂ ಮೇಕಿಂಗ್ ಚಾರ್ಜ್ ಮುಖ್ಯವಾಗಿ ಉಳಿತಾಯ ಆಗುತ್ತದೆ. ಇನ್ನು ಅದನ್ನು ಮಾರಾಟ ಮಾಡಿ, ನಗದು ಬೇಕು ಅಂದುಕೊಂಡಾಗ ಮಾರ್ಕೆಟ್ ನಲ್ಲಿನ ಚಿನ್ನದ ದರ ಏನಿರುತ್ತದೆ ಅದಕ್ಕೆ ತುಂಬ ಸಮೀಪದಲ್ಲಿಯೇ ದರವೇ ಸಿಗುತ್ತದೆ. ತೀರಾ ಐನೂರು- ಆರು ನೂರು ರೂಪಾಯಿಯಷ್ಟು ಕಡಿಮೆಗೆ ಮಾರಾಟ ಮಾಡಬೇಕಿರಲ್ಲ.
ಒಡವೆ ಖರೀದಿ ಮಾಡುವಂಥವರಿಗೆ ಇವತ್ತಿಗೆ ಚಿನ್ನ ಖರೀದಿ ಮಾಡಿದಲ್ಲಿ ಶೇ ಎಂಟರಿಂದ ಇಪ್ಪತ್ತರಷ್ಟು ಹೆಚ್ಚಿಗೆ ಹಣವನ್ನು ಈಗಲೇ ಪಾವತಿಸಿದಂತೆ ಆಗುತ್ತದೆ. ಜಿಎಸ್ ಟಿ ಲೆಕ್ಕ ಹಾಕಿಕೊಂಡರೇನೇ ಶೇಕಡಾ ಮೂರರಷ್ಟು ಚಿನ್ನದ ದರಕ್ಕಿಂತ ಹೆಚ್ಚಿನ ಮೌಲ್ಯ ಕೊಟ್ಟಾಗಿರುತ್ತದೆ.
ಈಗ ಆರಂಭದಲ್ಲಿ ಹೇಳಿದ್ದ ಲೆಕ್ಕಕ್ಕೆ ವಾಪಸ್ ಆಗೋಣ: 2024ರ ಜುಲೈ ತಿಂಗಳಲ್ಲಿ 100 ಗ್ರಾಮ್ ಚಿನ್ನದ ಒಡವೆ ಖರೀದಿಸಿದ್ದವರು ಎಷ್ಟು ಪಾವತಿರಬಹುದು ನೋಡೋಣ.
ಶೇಕಡಾ 8ರಿಂದ 10ರಷ್ಟು ವೇಸ್ಟೇಜ್ ಅಂತ ಹಾಕಲಾಗುತ್ತೆ. 6625X8=53,000
(ಅದರಲ್ಲಿ ಕಡಿಮೆಯ ಶೇ ಎಂಟರ ವೇಸ್ಟೇಜ್ ಅಂದುಕೊಂಡರೆ ಎಂಟು ಗ್ರಾಮ್ ವೇಸ್ಟೇಜ್)
ಮೇಕಿಂಗ್ ಚಾರ್ಜಸ್ (ಇದು ಕೆಲವರು ತುಂಬ ಕಡಿಮೆ ತೆಗೆದುಕೊಳ್ತಾರೆ, ಇನ್ನೂ ಕೆಲವರು ತಗೊಳ್ಳಲ್ಲ) 66.25X100= 6625
(ಸರಾಸರಿ ಶೇಕಡಾ ಒಂದರಷ್ಟು ಮೇಕಿಂಗ್ ಚಾರ್ಜ್ ಅಂದುಕೊಂಡರೆ ಪ್ರತಿ ಗ್ರಾಮ್ ಗೆ 66.25)
ಒಂದು ಅಂದಾಜಿನಂತೆ 7,43,590 ರೂಪಾಯಿ ಆಗಿರುತ್ತದೆ. ಅಂದರೆ ಪ್ರತಿ ಗ್ರಾಮ್ ಗೆ 7,435 ರೂಪಾಯಿ ಅಂದುಕೊಳ್ಳಿ. ಒಂದು ವೇಳೆ ಹಣದ ಅಗತ್ಯ ಇದೆ ಎಂದೇನಾದರೂ ಇವತ್ತಿನ ದರಕ್ಕೆ ಅವರು ಮಾರಾಟ ಮಾಡಲು ಹೋದಲ್ಲಿ ತೀರಾ ಹೆಚ್ಚೆಂದರೆ ಗ್ರಾಮ್ ಗೆ 9200 ರೂಪಾಯಿಗಿಂತ ಹೆಚ್ಚಿಗೆ ಸಿಗಲ್ಲ. ಅಂದರೆ ಪ್ರತಿ ಗ್ರಾಮ್ ಗೆ 1765 ರೂಪಾಯಿ ಗರಿಷ್ಠ ಮಟ್ಟದ ಲಾಭ ಸಿಕ್ಕಂತಾಗುತ್ತದೆ. ಇದು ಕೂಡ ಕಂಡೀಷನ್ಸ್ ಅಪ್ಲೈ. ಈ ರೀತಿಯಾಗಿ ಬರುವ ಲಾಭವು ಅಲ್ಪಾವಧಿಯ ಬಂಡವಾಳ ಲಾಭ (ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್) ಎನಿಸಿಕೊಳ್ಳುತ್ತದೆ. ಅದಕ್ಕೆ ತೆರಿಗೆ ಪಾವತಿಸಬೇಕು. ಅಲ್ಲಿಗೆ ಶೇಕಡಾ ಹದಿನೆಂಟರಿಂದ ಇಪ್ಪತ್ತರಷ್ಟು ಚಿನ್ನದ ಒಡವೆ ಮಾರಾಟದ ಲಾಭ ಬಂದಂತಾಗುತ್ತದೆ.
ಖರೀದಿ ಮಾಡಿದ್ದ ಸಮಯಕ್ಕಿಂತ ಚಿನ್ನದ ಬೆಲೆಯಲ್ಲಿ ಶೇಕಡಾ ಐವತ್ತರಷ್ಟು ಏರಿಕೆಯಾದರೆ, ಒಡವೆ ಸ್ವರೂಪದಲ್ಲಿ ಖರೀದಿ ಮಾಡಿ ಅದರ ಗ್ರಾಹಕರಿಗೆ ಸಿಗುವುದು ಶೇಕಡಾ ಇಪ್ಪತ್ತರಷ್ಟು ಮಾತ್ರ. ಇನ್ನು ಹೀಗೆ ವರ್ಷದೊಪ್ಪತ್ತಿನಲ್ಲಿ ಶೇಕಡಾ ಐವತ್ತರಷ್ಟು ಚಿನ್ನದ ಬೆಲೆ ಹೆಚ್ಚಾದ ಇತಿಹಾಸವೇ ಇಲ್ಲ.
ಚಿನ್ನದ ಒಡವೆಯನ್ನು ಹೂಡಿಕೆ ಅಂದುಕೊಂಡಿದ್ದೀರಾ? ಯೋಚಿಸಿ ನೋಡಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ