ದಂತಕಾಂತಿಯಿಂದ ಹಿಡಿದು ಅಲೂವೆರಾ ಜೆಲ್ವರೆಗೆ, ಪತಂಜಲಿ ಬ್ಯುಸಿನೆಸ್ ಸಾಧಾರಣ ಅಲ್ಲ
Patanjali Foods market cap going strong: ಪತಂಜಲಿ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ನಾನಾ ರೀತಿಯ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ದಿನಬಳಕೆ ವಸ್ತುಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಆಯುರ್ವೇದ ಉತ್ಪನ್ನಗಳು ಸೇರಿವೆ. ಪತಂಜಲಿ ಫುಡ್ಸ್ ಲಿಮಿಟೆಡ್ ಕಳೆದ ಐದು ವರ್ಷಗಳಲ್ಲಿ ತನ್ನ ಹೂಡಿಕೆದಾರರಿಗೆ ಸುಮಾರು ಶೇಕಡಾ 72 ರಷ್ಟು ಲಾಭವನ್ನು ನೀಡಿದೆ.

ದೇಶದ ಪ್ರಸಿದ್ಧ FMCG ಕಂಪನಿಯಾದ ಪತಂಜಲಿಯ ಬ್ಯುಸಿನೆಸ್ ಬಹಳ ವ್ಯಾಪಕವಾಗಿದೆ. ಭಾರತದಾದ್ಯಂತ ಮೂಲೆಮೂಲೆಗಳಲ್ಲೂ ಇವತ್ತು ಪತಂಜಲಿ ಉತ್ಪನ್ನಗಳು ಸಾಕಷ್ಟು ಮಾರಾಟವಾಗುತ್ತಿವೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದ ಪತಂಜಲಿ ಫುಡ್ಸ್ (Patanjali Foods) ಉದ್ಯಮ ವಲಯದಲ್ಲಿ ತನ್ನದೇ ಸ್ಥಾನ ಸಂಪಾದಿಸಿದೆ. ಕಂಪನಿಯು ಪ್ರಸ್ತುತ ದಂತ ಕಾಂತಿ, ಅಲೋವೆರಾ, ಕೃಷಿ ಉತ್ಪನ್ನಗಳು ಮತ್ತು ಖಾದ್ಯ ಎಣ್ಣೆ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಪತಂಜಲಿಯ ವ್ಯವಹಾರ ಬಹಳ ದೊಡ್ಡದು. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಪತಂಜಲಿ ಫುಡ್ ಲಿಮಿಟೆಡ್ ಕಂಪನಿಯು ಪ್ರಸ್ತುತ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಿದೆ. ತನ್ನ ಷೇರುದಾರರಿಗೆ ನಿರಂತರವಾಗಿ ಲಾಭ ತರುತ್ತಿದೆ. ಕಳೆದ ಐದು ವರ್ಷದಲ್ಲಿ ಪತಂಜಲಿ ಫುಡ್ ಲಿಮಿಟೆಡ್‌ನ ಷೇರುಗಳು ಹೂಡಿಕೆದಾರರಿಗೆ ಸುಮಾರು 74 ಪ್ರತಿಶತದಷ್ಟು ಲಾಭ ನೀಡಿವೆ. 5 ವರ್ಷಗಳ ಹಿಂದೆ ಕಂಪನಿಯ ಷೇರುಗಳು 1040 ರೂ.ಗಳಷ್ಟಿದ್ದರೆ, ಇಂದು ಅದು ಸುಮಾರು 746.90 ರೂ.ಗಳಷ್ಟು ಹೆಚ್ಚಾಗಿ 1,787 ರೂ.ಗಳಿಗೆ ತಲುಪಿದೆ.
ಇದನ್ನೂ ಓದಿ: ಪತಂಜಲಿ ಫುಡ್ಸ್ ಬೋನಸ್ ಷೇರಿಗೆ ರೆಕಾರ್ಡ್ ಡೇಟ್, ಡಿವಿಡೆಂಡ್ ಡೇಟ್ ಪ್ರಕಟ
ಕಂಪನಿಯ ವ್ಯವಹಾರ
ಪತಂಜಲಿ ಫುಡ್ ಲಿಮಿಟೆಡ್ FMCG ವಲಯದ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಇದು ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಹೂಡಿಕೆದಾರರಿಗೆ ಉತ್ತಮ ಲಾಭವನ್ನು ತಂದುಕೊಟ್ಟಿದೆ. ಪ್ರಸ್ತುತ, BSE ನಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳವು 64,857 ಕೋಟಿ ರೂ.ಗಳಷ್ಟಿದೆ.
ಪತಂಜಲಿ ಆಹಾರಗಳಲ್ಲಿ ಖಾದ್ಯ ಎಣ್ಣೆ ವಿಶೇಷವಾದುದು
2024ರ ಆರ್ಥಿಕ ವರ್ಷದಲ್ಲಿ, ಪತಂಜಲಿ ಫುಡ್ಸ್ ಲಿಮಿಟೆಡ್‌ನ ಅತ್ಯಧಿಕ ಆದಾಯವು ಖಾದ್ಯ ತೈಲದಿಂದ ಬಂದಿದೆ. ಅದರ ಶೇ. 70ರಷ್ಟು ಲಾಭಕ್ಕೆ ಖಾದ್ಯ ತೈಲದ ಕೊಡುಗೆ ಇದೆ. ಕಂಪನಿಯ ಆಹಾರ ಮತ್ತು ಇತರ FMCG ಉತ್ಪನ್ನಗಳು ಸುಮಾರು 30% ಆದಾಯದ ಪಾಲು ಹೊಂದಿವೆ. ಪತಂಜಲಿ ಫುಡ್ಸ್ ಭಾರತೀಯ FMCG ಕಂಪನಿಯಾಗಿದ್ದು, ಇದು ಭಾರತದಲ್ಲಿ ಗ್ರಾಹಕ ಉತ್ಪನ್ನಗಳು ಮತ್ತು ಖಾದ್ಯ ತೈಲಗಳನ್ನು ತಯಾರಿಸುತ್ತದೆ. ವಿಶೇಷವೆಂದರೆ ಪತಂಜಲಿ ಉತ್ಪನ್ನಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಕಂಪನಿಯ ಆದಾಯ ಮತ್ತು ಲಾಭವೂ ವೇಗವಾಗಿ ಹೆಚ್ಚುತ್ತಿದೆ.
ಇದನ್ನೂ ಓದಿ: Patanjali-LIC: ಎಲ್ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ
ಪತಂಜಲಿಯಿಂದ ಮಾರಾಟವಾಗುವ ಉತ್ಪನ್ನಗಳು
ಪತಂಜಲಿ ಸಂಸ್ಥೆಯು ನಾನಾ ರೀತಿಯ ಆಹಾರ ಉತ್ಪನ್ನಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು ಮತ್ತು ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡುತ್ತದೆ. ಆಹಾರ ಉತ್ಪನ್ನಗಳಲ್ಲಿ ತುಪ್ಪ, ಹಿಟ್ಟು, ಬೇಳೆಕಾಳುಗಳು, ನೂಡಲ್ಸ್, ಬಿಸ್ಕತ್ತುಗಳು ಮತ್ತು ಈಗ ಗುಲಾಬ್ ಜಾಮೂನ್, ರಸಗುಲ್ಲಾದಂತಹ ಸಿಹಿ ಪದಾರ್ಥಗಳು ಸೇರಿವೆ. ವೈಯಕ್ತಿಕ ಆರೈಕೆಯಲ್ಲಿ ಶಾಂಪೂ, ಟೂತ್‌ಪೇಸ್ಟ್, ಸೋಪ್, ಎಣ್ಣೆ ಇತ್ಯಾದಿ ಸೇರಿವೆ. ಇದರ ಹೊರತಾಗಿ, ಪತಂಜಲಿ ಆಯುರ್ವೇದ ಔಷಧಿಗಳನ್ನು ಸಹ ತಯಾರಿಸುತ್ತದೆ, ಅದರ ಬಗ್ಗೆ ಕಂಪನಿಯು ಅನೇಕ ರೋಗಗಳನ್ನು ಗುಣಪಡಿಸಬಹುದು ಎಂದು ಹೇಳುತ್ತದೆ. ಪತಂಜಲಿ ದೇಶಾದ್ಯಂತ 47,000 ಕ್ಕೂ ಹೆಚ್ಚು ರೀಟೇಲ್ ಸ್ಟೋರ್ಸ್, 3,500 ಡಿಸ್ಟ್ರಿಬ್ಯೂಟರ್ಸ್ ಮತ್ತು 18 ರಾಜ್ಯಗಳಲ್ಲಿ ಅನೇಕ ಗೋದಾಮುಗಳನ್ನು ಹೊಂದಿದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




