ನವದೆಹಲಿ, ಮಾರ್ಚ್ 3: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಗೂಗಲ್ (Google) ಇತ್ತೀಚೆಗೆ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುತ್ತಿದೆ. ಅದರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜನರೇಟಿವ್ ಅಪ್ಲಿಕೇಶನ್ ಆದ ಜೆಮಿನಿಯಲ್ಲಿ ಪಕ್ಷಪಾತಿತನ ನಡೆಯುತ್ತಿರುವ ವಿವಾದ ಒಂದೆಡೆಯಾದರೆ, ಭಾರತದಲ್ಲಿ ಕೆಲ ಪ್ರಮುಖ ಆ್ಯಪ್ಗಳನ್ನು ಗೂಗಲ್ನ ಪ್ಲೇ ಸ್ಟೋರ್ನಿಂದ ಅನಾಮತ್ತಾಗಿ ತೆಗೆದುಹಾಕಿದ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಶಾದಿ ಡಾಟ್ ಕಾಮ್, ಮ್ಯಾಟ್ರಿಮೋನಿ ಡಾಟ್ ಕಾಮ್, ನೌಕ್ರಿ ಡಾಟ್ ಕಾಮ್, 99ಎಕರೆಸ್, ಇತ್ಯಾದಿ 10ಕ್ಕೂ ಹೆಚ್ಚು ಭಾರತೀಯ ಆ್ಯಪ್ಗಳನ್ನು ಗೂಗಲ್ ತನ್ನದೇ ಕಾರಣವೊಡ್ಡಿ ಪ್ಲೇಸ್ಟೋರ್ನಿಂದ ತೆಗೆದುಹಾಕಿತ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಧ್ಯಪ್ರವೇಶಿಸಿದ ಬಳಿಕ ಈ ಆ್ಯಪ್ಗಳನ್ನು ರೀಸ್ಟೋರ್ ಮಾಡಲಾಗಿದೆ. ಇದೇ ವೇಳೆ, ಶಾದಿ ಡಾಟ್ ಕಾಮ್ನ ಸಂಸ್ಥಾಪಕ ಅನುಪಮ್ ಮಿಟ್ಟಲ್ (Anupam Mittal) ಅವರು, ಗೂಗಲ್ನ ವರ್ತನೆಯನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದ್ದಾರೆ.
ಭಾರತೀಯ ಆ್ಯಪ್ಗಳನ್ನು ಡೀಲಿಸ್ಟ್ ಮಾಡಿದ ಗೂಗಲ್ನ ಕ್ರಮವನ್ನು ಅವರು ಭಾರತದ ಇಂಟರ್ನೆಟ್ನ ಕರಾಳ ದಿನ ಎಂದು ಬಣ್ಣಿಸಿದ್ದಾರೆ. ಗೂಗಲ್ ಅನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ ಅವರು, ಸರ್ವಿಸ್ ಫೀ ಹೆಸರಲ್ಲಿ ಗೂಗಲ್ ತೆರಿಗೆ ಹೇರುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಶಾದಿ ಡಾಟ್ ಕಾಮ್ ಮುಖ್ಯಸ್ಥರು ಸರ್ಕಾರಕ್ಕೆ ಕರೆ ನೀಡಿದ್ದಾರೆ. ಹಲವು ಭಾರತೀಯ ಸ್ಟಾರ್ಟಪ್ ಆ್ಯಪ್ಗಳ ಉದ್ಯಮಿಗಳೂ ಕೂಡ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ.
ಇನ್ಫೋ ಎಡ್ಜ್ನ ಸಹ-ಸಂಸ್ಥಾಪಕ ಸಂಜೀವ್ ಬಿಕಚಂದಾನಿ ಅವರು ಗೂಗಲ್ನ ಸ್ಪರ್ಧಾವಿರೋಧಿ ವರ್ತನೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಭಾರತೀಯ ಸ್ಪರ್ಧಾ ಪ್ರಾಧಿಕಾರವಾದ ಸಿಸಿಐಗೆ ಕರೆ ನೀಡಿದ್ದಾರೆ.
16ರಿಂದ 19ನೇ ಶತಮಾನದಲ್ಲಿ ಇದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 18 ಮತ್ತು 19ನೇ ಶತಮಾನದಲ್ಲಿ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿತ್ತು. ಬ್ರಿಟಿಷ್ ಅರಸರ ಅನುಮತಿ ಪಡೆದು ದೇಶ ದೇಶಗಳಿಗೆ ಹೋಗಿ ಉದ್ಯಮ ವಿಸ್ತರಿಸುವುದರ ಜೊತೆ ದೇಶ ದೇಶಗಳನ್ನೇ ಆಕ್ರಮಿಸುತ್ತಿತ್ತು. ವಿಶ್ವದ ಅರ್ಧದಷ್ಟು ವ್ಯಾಪಾರದಲ್ಲಿ ಈಸ್ಟ್ ಇಂಡಿಯಾ ಕಂಪನಿ ಕೈ ಇರುತ್ತಿತ್ತು. ಭಾರತೀಯರ ಮೇಲೆ ಮನಬಂದಂತೆ ತೆರಿಗೆ ವಿಧಿಸಿ ಆ ಹಣವನ್ನು ಬ್ರಿಟಿಷ್ ಸಂಸ್ಥಾನಕ್ಕೆ ಕಪ್ಪವಾಗಿ ನೀಡುತ್ತಿತ್ತು.
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ 619 ಟ್ರಿಲಿಯನ್ ಡಾಲರ್ ಗಡಿಗೆ; ವಾರದಲ್ಲಿ 3 ಟ್ರಿಲಿಯನ್ ಡಾಲರ್ನಷ್ಟು ಹೆಚ್ಚಳ
ಈಗ ಗೂಗಲ್ ಕೂಡ ತನ್ನ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಿಲ್ಲದ ಕಾರಣ ಅದು ಮಾಡಿದ್ದೇ ನಿಯಮ ಎನ್ನುವಂತಾಗಿದೆ. ಆಂಡ್ರಾಯ್ಡ್ ಆ್ಯಪ್ಗಳ ಪ್ಲೇಸ್ಟೋರ್ ಗೂಗಲ್ನದ್ದೇ ಆದ್ದರಿಂದ ಅದು ಹೇಳಿದಂತೆ ಆ್ಯಪ್ಗಳು ಕೇಳಬೇಕಾದ ಸ್ಥಿತಿ ಇದೆ. ಇದು ಸ್ಪರ್ಧಾ ವಿರೋಧಿ ಧೋರಣೆ ಎಂದು ಭಾರತದ ಸಿಸಿಐ ಈ ಹಿಂದೆ ಗೂಗಲ್ಗೆ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ