ಕೇಂದ್ರ ಸರ್ಕಾರದ ಎನ್ಪಿಸಿಐ ರೂಪಿಸಿರುವ ಯುಪಿಐ ಲೈಟ್ (UPI Lite) ಫೀಚರ್ ಪೇಟಿಎಂ, ಫೋನ್ ಪೇ ಬಳಿಕ ಇದೀಗ ಗೂಗಲ್ ಪೇಗೂ ಬಂದಿದೆ. ಯುಪಿಐ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೆ ಸುಲಭವಾಗಿ ಸಣ್ಣ ಹಣದ ವಹಿವಾಟು ನಡೆಸಲು ಯುಪಿಐ ಲೈಟ್ ಅನುಕೂಲವಾಗಿದೆ. ಬ್ಯಾಂಕ್ ಸರ್ವರ್ ಕೆಲಸ ಮಾಡುತ್ತಿಲ್ಲ ಎಂದು ಚಿಂತೆ ಪಡುವ ಅವಶ್ಯಕತೆ ಇಲ್ಲದೇ 200 ರೂ ಒಳಗಿನ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದಾಗಿದೆ.
ಯುಪಿಐ ಲೈಟ್ನಲ್ಲಿ ಸಣ್ಣ ಮೊತ್ತದ ಹಣದ ವಹಿವಾಟು ಮಾತ್ರ ಸಾಧ್ಯ. ನೀವು 200 ರೂವರೆಗಿನ ವಹಿವಾಟು ಮಾಡಬಹುದು. ಗೂಗಲ್ ಪೇನಲ್ಲಿ ನೀವು 200 ರೂ ಒಳಗಿನ ಹಣದ ಪಾವತಿ ಮಾಡುವಾಗ ಡೀಫಾಲ್ಟ್ ಆಗಿ ಯುಪಿಐ ಲೈಟ್ ಆಯ್ಕೆ ಆಗಿರುತ್ತದೆ.
ಯುಪಿಐ ಲೈಟ್ ಒಂದು ರೀತಿಯಲ್ಲಿ ವ್ಯಾಲಟ್ನಂತೆ ಕೆಲಸ ಮಾಡುತ್ತದೆ. ಪೇಟಿಎಂ ಮತ್ತು ಫೋನ್ ಪೇನಲ್ಲಿ ವ್ಯಾಲಟ್ಗಳಿದ್ದು ಅಲ್ಲಿಗೆ ನೀವು ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಯುಪಿಐ ಸ್ಕ್ಯಾನ್ ಮಾಡಿದಾಗ ಹಣದ ಪಾವತಿಗೆ ಇದೇ ವ್ಯಾಲಟ್ ಅನ್ನು ಬಳಸಬಹುದು. ಬ್ಯಾಂಕ್ ಸರ್ವರ್ಗೆ ಹೋಗಬೇಕಿಲ್ಲ, ಪಿನ್ ನಮೂದಿಸಬೇಕಿಲ್ಲ. ಯುಪಿಐ ಲೈಟ್ ಕೂಡ ಅದೇ ರೀತಿ ಕೆಲಸ ಮಾಡುತ್ತದೆ.
ಇದನ್ನೂ ಓದಿ: HDFC: ಯುಪಿಐ ಕ್ಯೂಅರ್ ಕೋಡ್ಗೆ ಡಿಜಿಟಲ್ ರುಪಾಯಿ ಲಿಂಕ್ ಮಾಡಿದ ಮೊದಲ ಬ್ಯಾಂಕ್ ಎಚ್ಡಿಎಫ್ಸಿ
ವ್ಯಾಲಟ್ಗಳಲ್ಲಿ ನೀವು ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಆದರೆ, ಯುಪಿಐ ಲೈಟ್ನ ಅಕೌಂಟ್ನಲ್ಲಿ 2,000 ರೂಗಿಂತ ಹೆಚ್ಚು ಹಣ ಇಡುವುದಕ್ಕೆ ಅವಕಾಶ ಇಲ್ಲ. ಬಹಳ ಸಣ್ಣ ಮೊತ್ತದ ಹಣದ ವಹಿವಾಟಿಗೆಂದು ಲೈಟ್ ಅನ್ನು ರೂಪಿಸಲಾಗಿದೆ.
ಇದನ್ನೂ ಓದಿ: Online Gaming: ಆನ್ಲೈನ್ ಗೇಮಿಂಗ್ಗೆ ಶೇ. 28ಜಿಎಸ್ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ
ಯುಪಿಐ ಲೈಟ್ನ ಖಾತೆಯಲ್ಲಿ ಗರಿಷ್ಠ 2,000 ರೂವರೆಗೆ ಮಾತ್ರ ಹಣ ಜಮೆ ಮಾಡಲು ಸಾಧ್ಯ. ದಿನಕ್ಕೆ ಎರಡು ಬಾರಿ 2,000 ರೂ ಹಣವನ್ನು ತುಂಬಿಸಬಹುದಾದರೂ ಏಕಸಮಯದಲ್ಲಿ ಯುಪಿಐ ಲೈಟ್ ಖಾತೆಯಲ್ಲಿ 2,000 ರೂಗಿಂತ ಹೆಚ್ಚು ಹಣ ಇರುವಂತಿಲ್ಲ. ಒಟ್ಟಾರೆ ದಿನಕ್ಕೆ ಯುಪಿಐ ಲೈಟ್ ಮೂಲಕ ಗರಿಷ್ಠ 4,000 ರೂವರೆಗೆ ಹಣ ವಹಿವಾಟು ನಡೆಸಬಹುದು. ಒಂದು ವಹಿವಾಟಿನಲ್ಲಿ 200 ರೂಗಿಂತ ಹೆಚ್ಚಿನ ಹಣದ ವರ್ಗಾವಣೆ ಸಾಧ್ಯವಿಲ್ಲ.
ಭೀಮ್, ಪೇಟಿಎಂ ಮತ್ತು ಫೋನ್ ಪೇನಲ್ಲಿ ಯುಪಿಐ ಲೈಟ್ನ ಅಳವಡಿಕೆ ಆಗಿದೆ. ಗೂಗಲ್ ಪೇ ಸರದಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Thu, 13 July 23