Online Gaming: ಆನ್ಲೈನ್ ಗೇಮಿಂಗ್ಗೆ ಶೇ. 28ಜಿಎಸ್ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ
Huge Tax Collection Expected: ಆನ್ಲೈನ್ ಗೇಮಿಂಗ್ಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಸರ್ಕಾರದ ನಿರ್ಧಾರದಿಂದ 2023-24ರ ಹಣಕಾಸು ವರ್ಷದಲ್ಲಿ ಈ ಉದ್ಯಮದಿಂದ ಬರುವ ತೆರಿಗೆ ಸಂಗ್ರಹದಲ್ಲಿ 12 ಪಟ್ಟು ಹೆಚ್ಚಳ ನಿರೀಕ್ಷಿಸಲಾಗಿದೆ.
ನವದೆಹಲಿ: ಆನ್ಲೈನ್ ಗೇಮಿಂಗ್ಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಸರ್ಕಾರದ ನಿರ್ಧಾರದಿಂದ ತೆರಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳ ನಿರೀಕ್ಷಿಸಲಾಗಿದೆ. ಜಿಎಸ್ಟಿ ತೆರಿಗೆ ವಿಧಿಸಿದ ಬಳಿಕವೂ ಆನ್ಲೈನ್ ಗೇಮಿಂಗ್ ಉದ್ಯಮ (Online Gaming Industry) ಇದೇ ವೇಗದಲ್ಲಿ ಮುಂದುವರಿದರೆ ಈ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ (Tax Collections) 12 ಪಟ್ಟು ಹೆಚ್ಚಾಗಬಹುದು ಎಂದು ಸರ್ಕಾರ ಭಾವಿಸಿದೆ. ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳುವ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮದಿಂದ 20,000 ಕೋಟಿ ರೂನಷ್ಟು ತೆರಿಗೆ ಸಂಗ್ರಹ ನಿರೀಕ್ಷಿಸಬಹುದು.
ಮನಿಕಂಟ್ರೋಲ್ ಜೊತೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಂಜಯ್ ಮಲ್ಹೋತ್ರಾ, ಶೇ. 28ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರದಿಂದ ಗೇಮಿಂಗ್ ಉದ್ಯಮದ ನಾಶಕ್ಕೆ ಕಾರಣವಾಗುತ್ತದೆ ಎಂಬಂತಹ ಆತಂಕವನ್ನು ತಳ್ಳಿಹಾಕಿದ್ದಾರೆ.
‘ಆನ್ಲೈನ್ ಗೇಮಿಂಗ್ನ ಪ್ರಮಾಣ ಹೇಗೆ ಬದಲಾಗುತ್ತದೆ ಎಂಬುದು ಹೊಸ ತೆರಿಗೆ ದರ ಅನ್ವಯ ಆದ ಬಳಿಕವಷ್ಟೇ ಗೊತ್ತಾಗುತ್ತದೆ’ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಜುಲೈ 11ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಕ್ಯಾಸಿನೋ, ಹಾರ್ಸ್ ರೇಸಿಂಗ್ನಂತೆ ಆನ್ಲೈನ್ ಗೇಮಿಂಗ್ಗೂ ಶೇ. 28ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಲಾಯಿತು. ಆನ್ಲೈನ್ ಗೇಮಿಂಗ್ನಲ್ಲಿ ಸದ್ಯ ಕಂಪನಿಗಳು ಪ್ಲಾಟ್ಫಾರ್ಮ್ ಶುಲ್ಕವೆಂದು ಶೇ. 18ರಷ್ಟು ತೆರಿಗೆ ಪಾವತಿಸುತ್ತಿವೆ. ಇದರ ಜೊತೆಗೆ, ಪ್ಲಾಟ್ಫಾರ್ಮ್ಗೆ ಪಾವತಿಸಲಾಗುವ ಪ್ರವೇಶ ಶುಲ್ಕಕ್ಕೆ ಈಗ ಶೇ. 28ರಷ್ಟು ಜಿಎಸ್ಟಿ ಹಾಕಲಾಗುತ್ತಿದೆ. ಆದರೆ, ಈ ಹೊಸ ತೆರಿಗೆ ಕ್ರಮ ಯಾವಾಗ ಜಾರಿಗೆ ಬರುತ್ತದೆ ಎಂದು ಹೇಳಲಾಗಿಲ್ಲ.
ಜೂಜಾಟಗಳಿಗೆ ವಿಧಿಸುವಂತೆ ಆನ್ಲೈನ್ ಗೇಮಿಂಗ್ಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರವನ್ನು ಮಲ್ಹೋತ್ರಾ ಸಮರ್ಥಿಸಿಕೊಂಡಿದ್ದಾರೆ. ಆನ್ಲೈನ್ ಗೇಮಿಂಗ್ ಅನ್ನು ಬೆಟ್ಟಿಂಗ್ ಅಥವಾ ಗ್ಯಾಂಬ್ಲಿಂಗ್ ಎಂದು ಪರಿಗಣಿಸಿರುವಾಗ ತೆರಿಗೆ ಅಧಿಕಾರಿಗಳು ಏನು ಮಾಡಲು ಸಾಧ್ಯ? ಜೂಜಾಟ, ಲಾಟರಿ ಇತ್ಯಾದಿಗೆ ಶೇ. 28ರಷ್ಟು ತೆರಿಗೆ ಇದೆ. ಆನ್ಲೈನ್ ಗೇಮಿಂಗ್ಗೂ ಅದೇ ರೀತಿ ತೆರಿಗೆ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Retail Inflation: ಬೆಲೆ ಏರಿಕೆ ಪರಿಣಾಮ; ಜೂನ್ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ
ನೀವು ಆನ್ಲೈನ್ ಗೇಮಿಂಗ್ ಅನ್ನು ಜೂಜಾಟ ಅಲ್ಲದ ಮನರಂಜನಾ ಚಟುವಟಿಕೆ ಎಂದೇ ಪರಿಗಣಿಸುವುದಾದಲ್ಲಿ, ಯಾವುದೋ ಸ್ಪೋರ್ಟಿಂಗ್ ಇವೆಂಟ್ಗೋ, ಕ್ಯಾಸಿನೋಗೋ, ಕುದುರೆ ರೇಸಿಂಗ್ ಕ್ಲಬ್ಗೋ ಹೋದರೆ ಪ್ರವೇಶ ಶುಲ್ಕಕ್ಕೆ ಶೇ. 28ರಷ್ಟು ತೆರಿಗೆ ಹಾಕಲಾಗುತ್ತದೆಯಲ್ಲವೇ? ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಪ್ರಶ್ನಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ