ನವದೆಹಲಿ: ಕನಿಷ್ಠ 100 ಕೋಟಿ ರೂ ವಹಿವಾಟು ಹೊಂದಿರುವ ಸಂಸ್ಥೆಗಳಿಗೆ ತೆರಿಗೆ ನಿಯಮವೊಂದನ್ನು ಸರ್ಕಾರ ಬದಲಿಸಿದೆ. ಇಂಥ ಸಂಸ್ಥೆಗಳು ತಮ್ಮ ಇನ್ವಾಯ್ಸ್ಗಳನ್ನು (Invoices) 7 ದಿನದೊಳಗೆ ಐಆರ್ಪಿ ಪೋರ್ಟಲ್ಗೆ (IRP- Invoice Registration Portal) ಅಪ್ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ. ಇನ್ವಾಯ್ಸ್ ನೀಡಲಾದ ದಿನದಿಂದ ಏಳು ದಿನದೊಳಗೆ ಅದನ್ನು ಇನ್ವಾಯ್ಸ್ ರಿಜಿಸ್ಟ್ರೇಷನ್ ಪೋರ್ಟಲ್ಗೆ ಅಪ್ಲೋಡ್ ಮಾಡದಿದ್ದರೆ, ಮತ್ತೆ ಅದನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಎಸ್ಟಿ ನೆಟ್ವರ್ಕ್ (GSTN) ಸಂಸ್ಥೆ, ‘ಏಳಕ್ಕೂ ಹೆಚ್ಚು ದಿನಗಳ ಹಳೆಯದ ಇನ್ವಾಯ್ಸ್ಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ. ಸರಿಯಾದ ಸಮಯಕ್ಕೆ ಇನ್ವಾಯ್ಸ್ಗಳು ಅಪ್ಲೋಡ್ ಆಗುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ,’ ಎಂದು ಹೇಳಿದೆ. ಈ ಹೊಸ ನಿಯಮ ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಬಹುದು ಎನ್ನಲಾಗಿದೆ.
ಇದು 100ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಜಾರಿ ಮಾಡಲಾಗಿರುವ ಹೊಸ ನಿಯಮ. ಸದ್ಯ ಎಲ್ಲಾ ವ್ಯಾವಹಾರಿಕ ಸಂಸ್ಥೆಗಳು ಇನ್ವಾಯ್ಸ್ ಯಾವುದೇ ದಿನಾಂಕದ್ದಾದರೂ ಅದನ್ನು ಐಆರ್ಪಿಗೆ ಅಪ್ಲೋಡ್ ಮಾಡುತ್ತಿವೆ. ಈಗ ಹಳೆಯ ಇನ್ವಾಯ್ಸ್ ಸಲ್ಲಿಸಲು ಕಾಲಮಿತಿ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ. ಉದಾಹರಣೆಗೆ ಇನ್ವಾಯ್ಸ್ ನೀಡಲಾದ ದಿನಾಂಕ ಮೇ 1 ಆಗಿದ್ದರೆ, ಅದನ್ನು ಐಆರ್ಪಿ ಪೋರ್ಟಲ್ಗೆ ಅಪ್ಲೋಡ್ ಮಾಡಲು ಮೇ 8ರವರೆಗೂ ಕಾಲಾವಕಾಶ ಇರುತ್ತದೆ.
ಒಂದು ಇನ್ವಾಯ್ಸ್ ನೀಡಲಾದ ದಿನಾಂಕದಿಂದ ಏಳು ದಿನದೊಳಗೆ ಅದನ್ನು ಐಆರ್ಪಿ ಪೋರ್ಟಲ್ಗೆ ಅಪ್ಲೋಡ್ ಮಾಡಲು ಅವಕಾಶ ಇರುತ್ತದೆ. ಅದಾದ ಬಳಿಕ ಆ ಇನ್ವಾಯ್ಸ್ ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಪೋರ್ಟಲ್ನಲ್ಲಿ ವ್ಯಾಲಿಡೇಶನ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಅದು ಇನ್ವಾಯ್ಸ್ ದಿನಾಂಕವನ್ನು ಪರಿಶೀಲಿಸಿ, 7 ದಿನಕ್ಕಿಂತ ಹಳೆಯದಾದ ಇನ್ವಾಯ್ಸ್ ಅನ್ನು ತಿರಸ್ಕರಿಸುತ್ತದೆ.
ಅಂದಹಾಗೆ, ಈ ಹೊಸ ನಿಯಮ 100ಕೋಟಿ ರೂಗೂ ಹೆಚ್ಚು ಮೊತ್ತದ ವಹಿವಾಟು ಇರುವ ಸಂಸ್ಥೆಗಳಿಗೆ ಮಾತ್ರ ಅನ್ವಯ ಆಗುವ ನಿಯಮ. ಹಾಗೆಯೇ, ಇನ್ವಾಯ್ಸ್ ವಿಚಾರದಲ್ಲಿ ಮಾತ್ರ ಈ ಕಾಲಮಿತಿ ಇದೆ. ಡೆಬಿಟ್ ನೋಟ್, ಕ್ರೆಡಿಟ್ ನೋಟ್ ಸಲ್ಲಿಸುವ ವಿಚಾರದಲ್ಲಿ ಯಾವ ಕಾಲಮಿತಿ ಇರುವುದಿಲ್ಲ.
ಇನ್ವಾಯ್ಸ್ ರಿಜಿಸ್ಟ್ರೇಷನ್ ಪೋರ್ಟಲ್ಗೆ ಒಂದು ಸಂಸ್ಥೆ ಇನ್ವಾಯ್ಸ್ ಸಲ್ಲಿಸದಿದ್ದರೆ ಐಟಿಸಿ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಐಟಿಸಿ ಎಂದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್. ಯಾವುದೇ ಒಂದು ಉತ್ಪನ್ನಕ್ಕೆ ತೆರಿಗೆ ವಿಧಿಸಲಾಗುತ್ತದೆ. ಈ ಉತ್ಪನ್ನ ತಯಾರಿಕೆಯಲ್ಲಿ ಬಳಸಲಾಗುವ ಸರಕುಗಳಿಗೂ ತೆರಿಗೆ ಕಟ್ಟಿರಲಾಗುತ್ತದೆ. ಒಂದು ಉತ್ಪನ್ನ ತಯಾರಿಕೆಯಲ್ಲಿರುವ ಸರಕುಗಳಿಗೆ ತೆರಿಗೆ ಕಟ್ಟಿದ್ದರೆ ಅದನ್ನು ನಮೂದಿಸಿ, ಉತ್ಪನ್ನದ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದು. ಇದು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯಾಗಿದೆ. ಐಟಿಸಿಯನ್ನು ಪಡೆಯಲು ಇನ್ವಾಯ್ಸ್ ದಾಖಲೆ ಬಹಳ ಅವಶ್ಯಕ. ನೀವು ಐಆರ್ಪಿ ಪೋರ್ಟಲ್ಗೆ ಇನ್ವಾಯ್ಸ್ ಅಪ್ಲೋಡ್ ಮಾಡದಿದ್ದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗುವುದಿಲ್ಲ.
ಹಳೆಯ ಇನ್ವಾಯ್ಸ್ಗಳನ್ನು ಅಪ್ಲೋಡ್ ಮಾಡುವ ರೂಢಿ ಬಹಳ ವ್ಯಾಪಕವಾಗಿದೆ. ಇದನ್ನು ತಡೆಯುವ ದೃಷ್ಟಿಯಿಂದ ಕಾಲಮಿತಿ ಹಾಕಲಾಗಿದೆ. ಸದ್ಯ ದೊಡ್ಡ ತೆರಿಗೆದಾರರಿಗೆ ಹೊಸ ನಿಯಮ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಸ್ತರದ ತೆರಿಗೆದಾರರಿಗೂ ಈ ನಿಯಮ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.