Twitter: ಸುದ್ದಿಗೆ ದುಡ್ಡು; ಟ್ವಿಟ್ಟರ್ಗೆ ಆದಾಯ ತರಲು ಮಸ್ಕ್ ಹರಸಾಹಸ; ಮಾಧ್ಯಮಗಳಿಗೆ ಮಂದಹಾಸ; ಆದರೆ, ಇದರ ಜಾರಿ ಹೇಗೆ ಸಾಧ್ಯ?
Elon Musk's Plan Announced: ಟ್ವಿಟ್ಟರ್ನ ಸಬ್ಸ್ಕ್ರಿಪ್ಷನ್ ಪ್ಲಾನ್ ಹೊಂದಿಲ್ಲದ ಬಳಕೆದಾರರು ಈ ಪ್ಲಾಟ್ಫಾರ್ಮ್ನಲ್ಲಿ ಕ್ಲಿಕ್ ಮಾಡಿ ಓದುವ ಸುದ್ದಿ ಅಥವಾ ಲೇಖನಕ್ಕೆ ಹಣ ಪಾವತಿಸಬೇಕಾಗುತ್ತದೆ. ಈ ಯೋಜನೆ ಮೇ ತಿಂಗಳಲ್ಲಿ ಜಾರಿಗೆ ಬರುತ್ತದೆ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ.
ನವದೆಹಲಿ: ಸುದ್ದಿ ಜಗತ್ತಿನಲ್ಲಿ ಪೇಯ್ಡ್ ಸರ್ವಿಸ್ ಎಂಬ ಆದಾಯ ಮೂಲವನ್ನು ಹೊಂದುವ ಪ್ರಯತ್ನ ಕೆಲವಾರು ವರ್ಷಗಳಿಂದ ಇದೆ. ಆದರೆ, ಇದರ ಟ್ರೆಂಡ್ ಬಹಳ ಮಂದಿಗತಿಯಲ್ಲಿ ಸಾಗಿದೆ. ಉಚಿತ ಸುದ್ದಿ ಮತ್ತು ಲೇಖನಗಳನ್ನು ಆನ್ಲೈನ್ನಲ್ಲಿ ಓದಿ ಅಭ್ಯಾಸವಾಗಿರುವ ಜನಸಾಮಾನ್ಯರಿಗೆ ದುಡ್ಡು ಕೊಟ್ಟು ಓದುವ ವ್ಯವಸ್ಥೆ ಇನ್ನೂ ಒಗ್ಗಿಲ್ಲ. ಕೆಲವಾರು ಮಾಧ್ಯಮ ಸಂಸ್ಥೆಗಳು ತಮ್ಮ ಉತ್ಕೃಷ್ಟ ಗುಣಮಟ್ಟದ ಸುದ್ದಿ, ಲೇಖನಗಳನ್ನು ಪೇಯ್ಡ್ ಸರ್ವಿಸ್ಗೆ ಇಟ್ಟಿದ್ದಾರಾದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಈ ಸಬ್ಸ್ಕ್ರೈಬ್ ಆಗುತ್ತಿಲ್ಲ ಎಂಬ ಅಳಲಂತೂ ಇದೆ. ಇದೇ ಹೊತ್ತಿನಲ್ಲಿ ಟ್ವಿಟ್ಟರ್ ಮಾಲೀಕ ಇಲಾನ್ ಮಸ್ಕ್ (Elon Musk) ಹೊಸ ಪ್ಲಾನ್ ಘೋಷಣೆ ಮಾಡಿದ್ದಾರೆ. ಅದರಂತೆ ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ ಸಾಮಾನ್ಯ ಜನರು ಒಂದು ಸುದ್ದಿ ಕ್ಲಿಕ್ ಮಾಡಿ ಓದಿದರೆ ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ತಮ್ಮ ಈ ಯೋಜನೆಯು ಜನರಿಗೂ ಲಾಭ, ಮಾಧ್ಯಮಗಳಿಗೂ ಲಾಭ ಎಂದು ಮಸ್ಕ್ ಹೇಳಿಕೊಂಡಿದ್ದಾರೆ.
ಇದು ಟ್ವಿಟ್ಟರ್ನಲ್ಲಿ ಮಾಧ್ಯಮ ಸಂಸ್ಥೆಗಳು ಪೋಸ್ಟ್ ಮಾಡುವ ಸುದ್ದಿಯನ್ನು ಕ್ಲಿಕ್ ಮಾಡಿ ಓದುವುದಕ್ಕೆ ನೀಡಬೇಕಾದ ಶುಲ್ಕ. ಈ ಶುಲ್ಕ ವಿಧಿಸುವುದು ಮಾಧ್ಯಮ ಸಂಸ್ಥೆಗಳು. ಬಳಕೆದಾರರು ಪಾವತಿಸುವ ಹಣ ಮಾಧ್ಯಮ ಸಂಸ್ಥೆಗಳಿಗೆ ಹೋಗುತ್ತದೆ. ಇದರಿಂದ ಅಯ್ದ ಕೆಲವೇ ಸುದ್ದಿಗಳನ್ನು ಓದುವ ವ್ಯಕ್ತಿಗಳಿಗೆ ಅನುಕೂಲವಾಗಬಹುದು. ತಿಂಗಳಿಗೆ ಸಬ್ಸ್ಕ್ರಿಪ್ಷನ್ ಎಂದು ಪಾವತಿಸುವ ಬದಲು ಎಷ್ಟು ಓದಲಾಗುತ್ತದೋ ಅಷ್ಟಕ್ಕೆ ಹಣ ಪಾವತಿಸುವ ಅವಕಾಶ ಜನರಿಗೆ ಸಿಗುತ್ತದೆ. ಈ ರೀತಿಯ ವಿಶೇಷ ಪೇ ಅಂಡ್ ರೀಡ್ ವ್ಯವಸ್ಥೆ ಜಾರಿ ತರುವ ಬಗ್ಗೆ ಸ್ವತಃ ಇಲಾನ್ ಮಸ್ಕ್ ಅವರೇ ಟ್ವೀಟ್ ಮಾಡಿದ್ದಾರೆ. ಮೇ ತಿಂಗಳಲ್ಲೇ ಈ ಸೌಲಭ್ಯ ಜಾರಿಗೆ ಬರಲಿದೆ.
‘ಮಾಧ್ಯಮ ಸಂಸ್ಥೆಗಳು ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ ಒಂದು ಕ್ಲಿಕ್ಗೆ ಒಂದು ಆರ್ಟಿಕಲ್ನಂತೆ ಬಳಕೆದಾರರಿಗೆ ಶುಲ್ಕ ವಿಧಿಸಲು ಅವಕಾಶ ಇರುತ್ತದೆ. ಮಾಸಿಕ ಸಬ್ಸ್ಕ್ರಿಪ್ಷನ್ ಪಡೆಯದ ಬಳಕೆದಾರರಿಗೆ ಅವರು ಓದುವ ಒಂದು ಆರ್ಟಿಲ್ಗೆ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಮಾಧ್ಯಮ ಸಂಸ್ಥೆ ಮತ್ತು ಸಾರ್ವಜನಿಕರು, ಇಬ್ಬರಿಗೂ ವಿನ್ ವಿನ್ ಸ್ಥಿತಿ ಆಗಬಹುದು’ ಎಂದು ಇಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
Rolling out next month, this platform will allow media publishers to charge users on a per article basis with one click.
This enables users who would not sign up for a monthly subscription to pay a higher per article price for when they want to read an occasional article.…
— Elon Musk (@elonmusk) April 29, 2023
ಇಲ್ಲಿ ಮಾಸಿಕ ಸಬ್ಸ್ಕ್ರಿಪ್ಷನ್ ಎಂದರೆ ಬ್ಲ್ಯೂಟಿಕ್ ಹೊಂದುವುದಾ? ಬ್ಲೂಟಿಕ್ ಪಡೆದಿರುವ ಟ್ವಿಟ್ಟರ್ ಬಳಕೆದಾರರಿಗೆ ಸುದ್ದಿ, ಲೇಖನಗಳು ಉಚಿತವಾಗಿ ಸಿಗುತ್ತವಾ? ಆದರೆ, ಮಾಧ್ಯಮ ಸಂಸ್ಥೆಗಳು ವಿಧಿಸುವ ಶುಲ್ಕವನ್ನು ಯಾವ ವಿಧಾನದ ಮೂಲಕ ಪಡೆಯಬಹುದು ಎಂಬ ವಿವರವನ್ನು ಮಸ್ಕ್ ಆಗಲೀ ಟ್ವಿಟ್ಟರ್ ಆಗಲೀ ನೀಡಿಲ್ಲ.
ಟ್ವಿಟ್ಟರ್ನಲ್ಲಿ ಕಂಟೆಂಟ್ ಸಬ್ಸ್ಕ್ರಿಪ್ಷನ್ ಯೋಜನೆಯೂ ಇದೆ. ಯಾರು ಬೇಕಾದರೂ ಸಬ್ಸ್ಕ್ರಿಪ್ಷನ್ ಆಫರ್ ಮಾಡಬಹುದು. ಇದರಲ್ಲಿ ಟ್ವಿಟ್ಟರ್ಗೆ ಶೇ. 10ರಷ್ಟು ಪಾಲು ಕೊಡಬೇಕಾಗುತ್ತದೆ. ಈ ಸಬ್ಸ್ಕ್ರಿಪ್ಷನ್ ಪಡೆಯುವ ಬಳಕೆದಾರರ ಪ್ರತಿಕ್ರಿಯೆ ಇತ್ಯಾದಿಗೆ ಹೆಚ್ಚು ಆದ್ಯತೆ ಕೊಡಲಾಗತ್ತದೆ.
ಟ್ವಿಟ್ಟರ್ಗೆ ಆದಾಯ ಮೂಲ ಹುಡುವುದೇ ತಲೆನೋವು
ಇಲಾನ್ ಮಸ್ಕ್ ಬರುವ ಮುನ್ನ ಟ್ವಿಟ್ಟರ್ನ ಬಹುತೇಕ ಆದಾಯ ಜಾಹೀರಾತುಗಳ ಮೂಲಕವೇ ಬರುತ್ತಿತ್ತು. ಆದರೂ ಟ್ವಿಟ್ಟರ್ ಒಮ್ಮೆಯೂ ಲಾಭ ಕಂಡಿಲ್ಲ. ಇತ್ತೀಚೆಗೆ ಜಾಹೀರಾತು ನಿಂತುಹೋಗಿದೆ. ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಮಾಡಿದಾಗಿನಿಂತ ಆದಾಯ ಮೂಲಕ್ಕೆ ಶೋಧಿಸುತ್ತಲೇ ಇದ್ದಾರೆ. ಮೊದಲಿಗೆ ಉದ್ಯೋಗಿ ಸಂಖ್ಯೆಯನ್ನು ಶೇ. 80ರಷ್ಟು ಕಡಿತ ಮಾಡುವ ಮೂಲಕ ಕಂಪನಿಯ ಹೆಚ್ಚಿನ ವೆಚ್ಚ ಕಡಿಮೆ ಮಾಡಿದ್ದಾರೆ.
ಇದನ್ನೂ ಓದಿ: SEBI: ಅದಾನಿ ಗ್ರೂಪ್ನಂಥ ಸಂಸ್ಥೆಯ ತನಿಖೆಗೆ ಹೆಚ್ಚು ಸಮಯ ಬೇಕು: ಸುಪ್ರೀಂಕೋರ್ಟ್ಗೆ ಸೆಬಿ ಮನವಿ
ಬಳಿಕ, ಹೊಸದಾಗಿ ಬ್ಲೂಟಿಕ್ ಸ್ಕೀಮ್ ತಂದಿದ್ದಾರೆ. ಇದರಲ್ಲಿ ತಿಂಗಳಿಗೆ ಇಂತಿಷ್ಟು ಎಂದು ಸಬ್ಸ್ಕ್ರಿಪ್ಷನ್ ಪ್ಲಾನ್ ಪಡೆದವರ ಟ್ವಿಟ್ಟರ್ ಖಾತೆಗೆ ಬ್ಲೂಟಿಕ್ ಸಿಗುತ್ತದೆ. ಸಬ್ಸ್ಕ್ರೈಬ್ ಆಗದವರ ಖಾತೆಗೆ ಬ್ಲೂಟಿಕ್ ಸಿಗುವುದಿಲ್ಲ. ಇದು ಈಗ ಟ್ವಿಟ್ಟರ್ನ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಹೆಚ್ಚಿನ ಜನರು ಬ್ಲೂಟಿಕ್ ಪಡೆದಿಲ್ಲ ಎಂಬುದು ಗಮನಾರ್ಹ.
ಇದೆಲ್ಲಕ್ಕಿಂತ ಮಿಗಿಲಾಗಿ ಎಲಾನ್ ಮಸ್ಕ್ ಅವರಿಗೆ ಎಕ್ಸ್ ಡಾಟ್ ಕಾಮ್ ಎನ್ನುವಂತಹ ಮಹತ್ವಾಕಾಂಕ್ಷಿ ಆ್ಯಪ್ ನಿರ್ಮಿಸುವ ಗುರಿ ಇದೆ. ಒಂದೇ ಪ್ಲಾಟ್ಫಾರ್ಮ್ನಲ್ಲಿ ಎಲ್ಲಾ ರೀತಿಯ ಸೇವೆಗಳನ್ನು ಮತ್ತು ಫೀಚರ್ಗಳನ್ನು ಒದಗಿಸುವ ದೊಡ್ಡ ಯೋಜನೆ ಅದು. ವರದಿಗಳ ಪ್ರಕಾರ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಎಕ್ಸ್ ಆಗಿ ಮಾರ್ಪಡಿಸುವ ಕಾರ್ಯಗಳತ್ತ ಗಮನ ಹರಿಸುತ್ತಿದ್ದಾರೆನ್ನಲಾಗಿದೆ.