Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್

ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್

ಝಾಹಿರ್ ಯೂಸುಫ್
|

Updated on: Apr 14, 2025 | 11:55 AM

IPL 2025 DC vs MI: ಐಪಿಎಲ್ 2025 ರ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 205 ರನ್ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 193 ರನ್​ಗಳಿಗೆ ಆಲೌಟ್ ಆಗಿ 12 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳಲ್ಲಿ ಬ್ಯಾಟ್ ಚೆಕ್ಕಿಂಗ್ ಕೂಡ ಒಂದು. ಅಂದರೆ ಫೀಲ್ಡ್ ಅಂಪೈರ್​ಗೆ ಸಂಶಯ ಮೂಡಿದರೆ, ಬ್ಯಾಟ್ಸ್​ಮನ್​ಗಳ ಬ್ಯಾಟ್​ಗಳನ್ನು ಮೈದಾನದಲ್ಲೇ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಅದರಂತೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 29ನೇ ಪಂದ್ಯದ ವೇಳೆ ಅಂಪೈರ್ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ ಅನ್ನು ಪರಿಶೀಲಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ಬ್ಯಾಟ್‌ನ ಆಯಾಮಗಳಿಗೆ ಮಿತಿಯನ್ನು ನಿಗದಿಪಡಿಸಿದೆ. ಅದರ ಪ್ರಕಾರ ಬ್ಯಾಟ್ ಅಗಲ 4.25 ಇಂಚುಗಳು ಅಥವಾ 10.8 ಸೆಂಟಿಮೀಟರ್‌ಗಳನ್ನು ಮೀರಿರಬಾರದು. ಇದನ್ನು ಫೀಲ್ಡ್ ಅಂಪೈರ್​ಗಳು ಗೇಜ್ ಬಳಸಿ ಪರಿಶೀಲಿಸಲಿದ್ದಾರೆ.

ಬ್ಯಾಟ್ ಅಂಪೈರ್ ಬಳಸುವ ಗೇಜ್​ ಮೂಲಕ ಹಾದು ಹೋದರೆ ಮಾತ್ರ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಗುತ್ತದೆ. ಅಂದರೆ 4.25 ಇಂಚುಗಳಿಗಿಂತ ಹೆಚ್ಚಿನ ಅಗಲವಾದ ಬ್ಯಾಟ್ ಬಳಸಲು ಅವಕಾಶವಿಲ್ಲ. ಹೀಗಾಗಿ ಬ್ಯಾಟ್​ಗಳ ಅಗಲದ ಮೇಲೆ ಸಂದೇಹ ಮೂಡಿದರೆ ಅಂಪೈರ್ ಮೈದಾನದಲ್ಲೇ ಪರಿಶೀಲಿಸಲಿದ್ದಾರೆ.

ಇಂತಹದೊಂದು ನಿಯಮವನ್ನು ಜಾರಿಗೊಳಿಸಲು ಮುಖ್ಯ ಕಾರಣ ಐಪಿಎಲ್​ನಲ್ಲಿ ಬ್ಯಾಟರ್​ಗಳ ಅಬ್ಬರ. ಕೆಲ ಬ್ಯಾಟ್ಸ್​ಮನ್​ಗಳು ಹೆಚ್ಚಿನ ಅಗಲದ ಬ್ಯಾಟ್ ಬಳಸಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದ್ದು, ಹೀಗಾಗಿ ಬಿಸಿಸಿಐ ಕಠಿಣ ನಿಯಮದೊಂದಿಗೆ ಬ್ಯಾಟ್ ಪರಿಶೀಲಿಸಲು ಮುಂದಾಗಿದೆ.

ಅದರಂತೆ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ ಅನ್ನು ಪರಿಶೀಲಿಸಲಾಗಿದ್ದು, ಈ ವೇಳೆ ಅವರ ಬ್ಯಾಟ್ 4.25 ಇಂಚುಗಳು ಅಥವಾ 10.8 ಸೆಂಟಿಮೀಟರ್‌ಗಳನ್ನು ಮೀರಿಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಯಿತು. ಅದರಂತೆ ನಾಲ್ಕು ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್:

ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್​ಗಳಲ್ಲಿ 193 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 12 ರನ್​ಗಳ ರೋಚಕ ಜಯ ಸಾಧಿಸಿದೆ.