ಬೆಂಗಳೂರು: ಪರೀಕ್ಷೆ ಭಯ, 5ನೇ ಮಹಡಿಯಿಂದ ಜಿಗಿದು ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ
ಇತ್ತೀಚೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲಿ ಕರ್ನಾಟಕದಲ್ಲಿ ಒಟ್ಟು ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪರೀಕ್ಷಾ ಭಯದಿಂದ ದಂತ ವೈದ್ಯ ವಿದ್ಯಾರ್ಥಿನಿ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಏಪ್ರಿಲ್ 14: 21 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ (Student) ಪರೀಕ್ಷಾ ಭಯದಿಂದ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ನಿನ್ನೆ ಮಧ್ಯಾಹ್ನ ನಗರದಲ್ಲಿ ನಡೆದಿದೆ. ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯಕೀಯ ವಿದ್ಯಾರ್ಥಿನಿ. ಮೃತ ಸೌಮ್ಯ ಪರೀಕ್ಷಾ ಸಮಯದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಸದ್ಯ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತಪುರದ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ದಂತ ವೈದ್ಯಕೀಯ ಕೋರ್ಸ್ ಓದುತ್ತಿದ್ದ ಸೌಮ್ಯ ತಮ್ಮ ತಂದೆ, ತಾಯಿ ಮತ್ತು ಸಹೋದರನ ಜತೆ ವಾಸವಾಗಿದ್ದರು. ಸೌಮ್ಯ ತಂದೆ ಗಣೇಶ್ ನಾರಾಯಣ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಮೂಲತಃ ಆಂಧ್ರದವರಾಗಿದ್ದು, ಮಗಳನ್ನು ಓದಿಸುವ ಉದ್ದೇಶಕ್ಕೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ
ಪರೀಕ್ಷಾ ಸಮಯದಲ್ಲಿ ಖಿನ್ನತೆಗೆ ಒಳಗಾಗುತ್ತಿದ್ದ ಸೌಮ್ಯಗಳಿಗೆ ಕುಟುಂಬದವರು ಇತ್ತೀಚೆಗೆ ನಂದಿನಿ ಲೇಔಟ್‌ನ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ನಿನ್ನೆ ಮಧ್ಯಾಹ್ನ ಹೊರಗಡೆ ಹೋಗುವುದಾಗಿ ಹೇಳಿದ ಸೌಮ್ಯ, ಅಪಾರ್ಟ್‌ಮೆಂಟ್ ಟೆರೇಸ್ಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ 9ರಂದು ಪ್ರಕಟಗೊಂಡಿತ್ತು. ಆದರೆ ಅನುತ್ತೀರ್ಣಗೊಂಡ ಹಾಗೂ ನಿರೀಕ್ಷಿಸಿದ ಅಂಕ ಬಂದಿಲ್ಲವೆಂದು ಮನನೊಂದಿದ್ದ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೈಸೂರು, ಬಳ್ಳಾರಿ, ದಾವಣಗೆರೆ, ಹಾವೇರಿ ಜಿಲ್ಲೆ ಸೇರಿದಂತೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಘಟನೆಗಳು ನಡೆದಿದ್ದವು.
ಫಲಿತಾಂಶ ಘೋಷಣೆ ವೇಳೆ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣವೆಂದು ಘೋಷಿಸುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಇದು ಮೊದಲ ಪರೀಕ್ಷೆಯ ಫಲಿತಾಂಶವಾಗಿದ್ದು, ಉತ್ತೀರ್ಣರಾಗದ ವಿದ್ಯಾರ್ಥಿಗಳಿಗಾಗಿ ಇನ್ನೂ ಎರಡು ಸುತ್ತಿನ ಪರೀಕ್ಷೆಗಳನ್ನು ನಡೆಸಲಾಗುವುದು. ನಮ್ಮ ಇಲಾಖೆ ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ನಾವು ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಎಂದು ಘೋಷಿಸುತ್ತಿಲ್ಲ. ಉತ್ತೀರ್ಣರಾದ ಅಭ್ಯರ್ಥಿಗಳ ಫಲಿತಾಂಶಗಳನ್ನು ಮಾತ್ರ ನಾವು ಪ್ರಕಟಿಸುತ್ತಿದ್ದೇವೆ ಎಂದು ಸ್ಪಷ್ಟಣೆ ನೀಡಿದ್ದರು.
ಇದನ್ನೂ ಓದಿ: ಬಾಲಕಿಯನ್ನು ಕೊಂದ ಆರೋಪಿ ರಿತೇಶ್ ಕುಮಾರ್ ಎನ್ಕೌಂಟರ್ ನಡೆದ ಸ್ಥಳ ವೀಕ್ಷಿಸಿದ ಪೊಲೀಸ್ ಆಯುಕ್ತ ಶಶಿ ಕುಮಾರ್
ದಯವಿಟ್ಟು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಜೀವನ ತುಂಬಾ ದೊಡ್ಡದು. ಪರೀಕ್ಷೆ ಎದುರಿಸಲು ಮತ್ತು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲು ಖಂಡಿತವಾಗಿಯೂ ಮತ್ತೊಂದು ಅವಕಾಶವಿದೆ. ಹತಾಶರಾಗಬೇಡಿ. ತಾಳ್ಮೆಯಿಂದ ಇರುವಂತೆ ತಿಳಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:00 pm, Mon, 14 April 25